ಬಾಗಲಕೋಟೆ: ಕೋಟ್ಯಂತರ ರೂ. ಖರ್ಚು ಮಾಡಿ ಕಾಲುವೆ ನಿರ್ಮಿಸಿ 18 ವರ್ಷ ಕಳೆದರೂ ಹನಿ ನೀರನ್ನೂ ಕಾಣದ ಘಟಪ್ರಭಾ ಬಲದಂಡೆ ಕಾಲುವೆಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಮಾಜಿ ಸಿಎಂ ಸಹಿತ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಿದ್ದಾರೆ.
ಹೌದು, ಘಟಪ್ರಭಾ ಬಲದಂಡೆ ಕಾಲುವೆ ನಿರ್ಮಿಸಿ, 18 ವರ್ಷ ಕಳೆದಿವೆ. ಆದರೆ, ಈ ಕಾಲುವೆಗೆ ಒಮ್ಮೆಯೂ ನೀರು ಹರಿಸಿಲ್ಲ. ಹೀಗಾಗಿ ನೀರಿಲ್ಲದ ಕಾಲುವೆಗೆ ನೀರು ಹರಿಸಲು ಯೋಜನೆ ರೂಪಿಸಿದ್ದು, ಈ ಯೋಜನೆಗಾಗಿ ಅಗತ್ಯ ಅನುದಾನ ನೀಡುವಂತೆ ಬಾದಾಮಿಯ ಶಾಸಕರೂ ಆಗಿರುವ ಮಾಜಿ ಸಿಎಂ-ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬೀಳಗಿ ಶಾಸಕ ಮುರಗೇಶ ನಿರಾಣಿ, ಬಾಗಲಕೋಟೆ ಶಾಸಕ ಡಾ| ವೀರಣ್ಣ ಚರಂತಿಮಠ ಹಾಗೂ ಸಂಸದ ಪಿ.ಸಿ. ಗದ್ದಿಗೌಡರ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದು ಒತ್ತಾಯಿಸಿದ್ದಾರೆ. ಜಿಲ್ಲೆಯ ಸಮಸ್ಯೆಯೊಂದಕ್ಕೆ ಸ್ಪಂದಿಸಿ, ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದಿದ್ದು, ಈ ಯೋಜನೆ ಜಾರಿಗೊಳಿಸುವಲ್ಲಿ ಪಕ್ಷಾತೀತವಾಗಿ ಕ್ರಮಕ್ಕೆ ಮುಂದಾಗಿರುವುದಕ್ಕೆ ಜಿಲ್ಲೆಯಲ್ಲಿ ಶ್ಲಾಘನೆ ಕೂಡ ವ್ಯಕ್ತವಾಗಿದೆ.
ಏನಿದು ನೀರು ಕಾಣದ ಕಾಲುವೆ?: ಘಟಪ್ರಭಾ ಬಲದಂಡೆ ಯೋಜನೆಯಡಿ ಹಿಡಕಲ್ ಡ್ಯಾಂನಿಂದ ನೀರು ಒದಗಿಸಲು ಮುಧೋಳ, ಬೀಳಗಿ, ಬಾದಾಮಿ ಹಾಗೂ ಬಾಗಲಕೋಟೆ ತಾಲೂಕು ವ್ಯಾಪ್ತಿಯಲ್ಲಿ ಕಾಲುವೆ ನಿರ್ಮಿಸಲಾಗಿದೆ. ಇದಕ್ಕಾಗಿ ಭೂಸ್ವಾಧೀನ, ಕಾಲುವೆ ನಿರ್ಮಾಣ ಹೀಗೆ ಹಲವು ಕಾರ್ಯಕ್ಕೆ ಕರ್ನಾಟಕ ನೀರಾವರಿ ನಿಗಮದಿಂದ ಕೋಟ್ಯಂತರ ರೂ. ಖರ್ಚು ಮಾಡಲಾಗಿದೆ. ಆದರೆ, ಜಿಎಲ್‌ಬಿಸಿ ಕಾಲುವೆಗೆ ಲೋಕಾಪುರ ಹತ್ತಿರದ ಬಾದಾಮಿ ತಾಲೂಕು ವ್ಯಾಪ್ತಿಯ ಕಾಡರಕೊಪ್ಪವರೆಗೆ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ನೀರು ಬರುತ್ತದೆ. ಕಾಡರಕೊಪ್ಪದಿಂದ ಕೆರಕಲಮಟ್ಟಿ, ಹೂಲಗೇರಿ, ಸೂಳಿಕೇರಿ, ಶಿರೂರ, ಬೆನಕಟ್ಟಿ ಮೂಲಕ ಮಲಪ್ರಭಾ ನದಿಗೆ ಈ ಕಾಲುವೆ ಜಾಲ ಸೇರಲಿದ್ದು, ಹಲವು ವರ್ಷ ಕಳೆದರೂ ಸುಮಾರು 56 ಸಾವಿರ ಎಕರೆ ಭೂಮಿಗೆ ನೀರಾವರಿ ಆಗಿಲ್ಲ. ಹೀಗಾಗಿ ಘಟಪ್ರಭಾ ಬಲದಂಡೆ ಕಾಲುವೆ ಯೋಜನೆ ವಿಫಲವಾಗಿದ್ದು, ಇದಕ್ಕಾಗಿ ಪ್ರತ್ಯೇಕವಾಗಿ ಯೋಜನೆ ರೂಪಿಸಿದ್ದು, ಆ ಯೋಜನೆ ಅನುಷ್ಠಾನಗೊಳಿಸಲು, ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒತ್ತಾಯಿಸಿದ್ದಾರೆ.
ನೀರಾವರಿ ಹೇಗೆ?: ಜಿಎಲ್‌ಬಿಸಿ ಕಾಲುವೆಯ 119 ಕಿ.ಮೀಯಿಂದ 199 ಕಿ.ಮೀ ವರೆಗೆ ಒಂದು ಹನಿ ನೀರೂ ಹಿಡಕಲ್ ಡ್ಯಾಂನಿಂದ ಹರಿಯುತ್ತಿಲ್ಲ. ಈ ಕುರಿತು ಪ್ರಶ್ನಿಸಿದರೆ, ಡ್ಯಾಂನಲ್ಲಿ ನೀರಿನ ಕೊರತೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಹೀಗಾಗಿ ಅಧಿಸೂಚಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಒದಗಿಸಲು ಆಲಮಟ್ಟಿ ಹಿನ್ನೀರಿನಿಂದ (ಅನಗವಾಡಿ ಸೇತುವೆ ಬಳಿ ಜಾಕವೆಲ್ ನಿರ್ಮಿಸುವುದು) ನೀರಾವರಿ ಒದಗಿಸಲು ಸಾಧ್ಯವಿದೆ. ಇದರಿಂದ 22,690 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಯಾಗಲಿದ್ದು, ಸರ್ಕಾರ ಈ ಯೋಜನೆಗೆ ಮಂಜೂರಾತಿ ನೀಡಬೇಕು. 22,690 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲು 305 ಕೋಟಿ ಅನುದಾನದ ಅಗತ್ಯವಿದ್ದು, ಪ್ರಸಕ್ತ ಬಜೆಟ್ ನಲ್ಲಿ ಘೋಷಣೆ ಮಾಡುವಂತೆ ಜಿಲ್ಲೆಯ ಮೂವರುಶಾಸಕರು (ಓರ್ವರು ಮಾಜಿ ಸಿಎಂ) ಹಾಗೂ ಸಂಸದರು ಪಕ್ಷಾತೀತವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಒತ್ತಾಯ ಮಾಡಿದ್ದು, ಹೀಗಾಗಿ ನೀರು ಕಾಣದ ಕಾಲುವೆಗೆ ನೀರು ಹರಿಸಲು ಯಡಿಯೂರಪ್ಪ ಮನಸ್ಸು ಮಾಡಬೇಕು ಎಂಬ ಒತ್ತಾಯ ರೈತರಿಂದ ಕೇಳಿ ಬಂದಿದೆ.
ಹಿನ್ನೀರು ಸದ್ಭಳಕೆಯ ಯೋಜನೆ: ಈ ಯೋಜನೆ ಅನುಷ್ಠಾನಗೊಂಡಲ್ಲಿ ಬಾದಾಮಿ, ಬಾಗಲಕೋಟೆ ತಾಲೂಕಿನ ಸುಮಾರು 25ಕ್ಕೂ ಹೆಚ್ಚು ಗ್ರಾಮಗಳ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಅದಕ್ಕೂ ಮುಂಚೆ ಕರ್ನಾಟಕ ನೀರಾವರಿ ನಿಗಮದಿಂದ 56 ಸಾವಿರ ಎಕರೆ ಭೂಮಿಯೂ ನೀರಾವರಿ ಪ್ರದೇಶವೆಂದು ಅಧಿಸೂಚನೆ ಹೊರಡಿಸಿದ್ದು, ಅದನ್ನು ರದ್ದುಗೊಳಿಸುವ ಮಹತ್ವದ ಕಾರ್ಯ ಆಗಬೇಕು. ಅಲ್ಲದೇ ಬೀಳಗಿ ತಾಲೂಕಿನ ಅನಗವಾಡಿ ಸೇತುವೆ ಬಳಿಯ ಆನದಿನ್ನಿ ಬ್ಯಾರೇಜ್ ಬಳಿಯೇ ಮತ್ತೂಂದು ಜಾಕವೆಲ್ ನಿರ್ಮಿಸಿ, ಅಲ್ಲಿಂದ ಹೂಲಗೇರಿ ಬಳಿಯ ಜಿಎಲ್‌ಬಿಸಿ 169 ಕಿ.ಮೀ ಬಳಿ ನೀರನ್ನು ಲಿಫ್ಟ್ ಮೂಲಕ ಹರಿಸಬೇಕು.
ಆಗ ನೀರಿಲ್ಲದ ಕಾಲುವೆಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಈ ಯೋಜನೆಗಾಗಿ ಹೂಲಗೇರಿ, ಕಗಲಗೊಂಬ, ಸೂಳಿಕೇರಿ, ಕಟಗೇರಿ, ಶಿಗಿಕೇರಿ ಭಾಗದ ರೈತರು ಹಲವು ವರ್ಷಗಳಿಂದ ಹೋರಾಟ ನಡೆಸಿದ್ದಾರೆ. ರೈತರ ಹೋರಾಟಕ್ಕೆ ಜನಪ್ರತಿನಿಧಿಗಳ ಸ್ಪಂದನೆ ದೊರೆತಿದ್ದು, ಸರ್ಕಾರ ಅನುದಾನ ನೀಡುವ ಮೂಲಕ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕಿದೆ.
ಕಾಲುವೆ ನಿರ್ಮಿಸಿದರೂ ನೀರಾವರಿ ಆಗಿಲ್ಲ. ಇದಕ್ಕಾಗಿ ಚುನಾವಣೆ ಬಹಿಷ್ಕಾರದಂತಹ ಹೋರಾಟಕ್ಕೂ ಮುಂದಾಗಿದ್ದೇವು. ಆಗ ಜನಪ್ರತಿನಿಧಿಗಳು ಭರವಸೆ ನೀಡಿದ್ದರು. ಜಿಎಲ್‌ಬಿಸಿ ಕಾಲುವೆಗಳಿಗೆ ನೀರು ಹರಿಸಲು ಜಿಲ್ಲೆಯ ಶಾಸಕರು, ಸಂಸದರು ಒಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದರಿಂದ, ಕಾಲುವೆಗೆ ನೀರು ಬರಬಹುದೆಂಬ ಆಶಾ ಭಾವನೆ ಶುರುವಾಗಿದೆ. ಕೇವಲ ಪತ್ರ ಬರೆದು ಕುಳಿತುಕೊಳ್ಳದೇ, ಯೋಜನೆ ಅನುಷ್ಠಾನ ಆಗುವವರೆಗೂ ಎಲ್ಲರೂ ಒಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹಾಕಬೇಕು.
– ಗಿರೀಶ ಪಾಟೀಲ, ಕಗಲಗೊಂಬ ರೈತ
ಜಿಎಲ್‌ಬಿಸಿ ಕಾಲುವೆಗಳಿಗೆ ಹಲವು ವರ್ಷಗಳಿಂದ ನೀರು ಬರುತ್ತಿಲ್ಲ. ಎಷ್ಟು ವರ್ಷ ಕಾದರೂ ಹಿಡಕಲ್ ಡ್ಯಾಂನಿಂದ ನೀರು ಬರುವ ಸಾಧ್ಯತೆ ಇಲ್ಲ. ಹೀಗಾಗಿ ಪ್ರತ್ಯೇಕ ಯೋಜನೆ ರೂಪಿಸಿದ್ದು, ಆ ಯೋಜನೆಗೆ ಅನುದಾನ ನೀಡಲು ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಒತ್ತಾಯಿಸಿದ್ದೇನೆ. ಈ ಯೋಜನೆ ಅನುಷ್ಠಾನಗೊಂಡಲ್ಲಿ ಬೀಳಗಿ ಕ್ಷೇತ್ರದ ಬಾದಾಮಿ ತಾಲೂಕಿನ ಸಾವಿರಾರು ಎಕರೆ ಭೂಮಿ ನೀರಾವರಿಯಾಗಲಿದೆ.
– ಮುರುಗೇಶ ನಿರಾಣಿ, ಬೀಳಗಿ ಶಾಸಕ
-ಎಸ್.ಕೆ. ಬಿರಾದಾರ