Advertisement
ತಾಲೂಕಿನಲ್ಲಿ 49 ಪಶು ಆಸ್ಪತ್ರೆ ಇದ್ದರೆ, ಕೇವಲ 7 ಮಂದಿ ವೈದ್ಯರು ಮಾತ್ರ ಇದ್ದಾರೆ. ಇದಲ್ಲದೆ ಪಶು ಪರಿವೀಕ್ಷಕರು, ಜಾನುವಾರು ಅಭಿವೃದ್ಧಿ ಅಧಿಕಾರಿ, ಆಸ್ಪತ್ರೆ ಮೇಲ್ವಿಚಾರಕರು, ಡಿ ಗ್ರೂಪ್ ಸಿಬ್ಬಂದಿ ಸೇರಿದಂತೆ ವಿವಿಧ ಹುದ್ದೆಗಳು ದಶಕಗಳಿಂದ ಖಾಲಿ ಇವೆ. ಇದರಿಂದಾಗಿ ಹೈನುಗಾರಿಕೆ ಮಾಡುವ ರೈತರಿಗೆ ಹಾಗೂ ರಾಸುಗಳನ್ನು ಹೊಂದಿರುವವರಿಗೆ ಸಮರ್ಪಕ ಸೇವೆ ದೊರೆಯದೇ ತೊಂದರೆ ಅನುಭವಿಸುತ್ತಿದ್ದಾರೆ.
Related Articles
Advertisement
ಆಸ್ಪತ್ರೆಗೆ ಅಧಿಕಾರಿಯೂ ತೆರಳಿ ಸೇವೆ: ತಾಲೂಕು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಶೇಖರ್ ತಾಲೂಕಿನ ಎಲ್ಲಾ ಪಶು ಆಸ್ಪತ್ರೆಗಳನ್ನು ನೋಡಿಕೊಳ್ಳುವುದಲ್ಲದೆ, ಎಲ್ಲಿ ವೈದ್ಯರು ಸರಿಯಾಗಿ ಸೇವೆ ಮಾಡುತ್ತಿದ್ದಾರೆ ಎನ್ನುವುದ್ದನ್ನು ಗಮನ ಹರಿಸಬೇಕು. ಇದರೊಂದಿಗೆ ಸರ್ಕಾರದ ಯೋಜನೆಯನ್ನು ಜನತೆಗೆ ತಲುಪಿಸುವ ಕೆಲಸ, ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ, ಕೆಡಿಪಿ ಸಭೆ, ಶಾಸಕರ ಸಭೆ ಸೇರಿದಂತೆ ವಿವಿಧ ಸಭೆಗೆ ಹಾಜರಾಗಬೇಕಿದೆ. ಪಟ್ಟಣದ ಪಶು ಆಸ್ಪತ್ರೆಗೆ ಆಗಮಿಸುವ ರಾಸುಗಳ ಚಿಕಿತ್ಸೆ ನೀಡುವುದಲ್ಲದೆ ಹೆಚ್ಚುವರಿಯಾಗಿ ಎಂಟು ಆಸ್ಪತ್ರೆಗೆ ತೆರಳಬೇಕಾಗಿದೆ.
ಓರ್ವ ವೈದ್ಯ ಎಷ್ಟು ಆಸ್ಪತ್ರೆಯಲ್ಲಿ ಸೇವೆ?: ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಶೇಖರ್, ಚನ್ನರಾಯಪಟ್ಟಣದ ತಾಲೂಕು ಕೇಂದ್ರದಲ್ಲಿನ ಕಚೇರಿಯಲ್ಲಿ ಸೇವೆ ಸಲ್ಲಿಸಬೇಕು. ಆದರೆ ಇವರು ಪಟ್ಟಣದ ಅಕ್ಕ ಪಕ್ಕದಲ್ಲಿ 8 ಆಸ್ಪತ್ರೆಗಳಿಗೆ ತೆರಳಿ ಪಶುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಡಾ.ಸುಬ್ರಹ್ಮಣ್ಯ ಹಾಗೂ ಡಾ.ಶ್ರೀಧರ್ ತಲಾ 9 ಪಶು ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಡಾ.ಪ್ರಮೋದ್ 11 ಆಸ್ಪತ್ರೆ, ಡಾ.ಪ್ರವೀಣ್, ಡಾ.ಮಂಜುನಾಥ್ ತಲಾ 5 ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದರೆ ನೂತನವಾಗಿ ತಾಲೂಕಿಗೆ ಆಗಮಿಸಿರುವ ಡಾ.ಕಾವ್ಯ ಎರಡು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾಯಿಲೆ ನಿಯಂತ್ರಣ ಕಷ್ಟ : ಬೇಸಿಗೆ ಸಮೀಪಿಸಿದೆ. ಈ ವೇಳೆ ರಾಸುಗಳಿಗೆ ರೈತರು ಒಣ ಮೇವು ಹಾಕುತ್ತಾರೆ. ಇನ್ನು ಬಿಸಿಲ ತಾಪಕ್ಕೆ ಚಪ್ಪೆರೋಗ, ಕುಂದುರೋಗ, ಗಂಟಲುಬೇನೆ, ಕಾಲುಬೇನೆ, ಕರಳುಬೇನೆ, ಕೆಚ್ಚಲು ಬಾವು, ಕಾಲುಬಾಯಿ ರೋಗ ಬರುವುದಲ್ಲದೆ ಹಲವು ರಾಸುಗಳು ಸೇವನೆ ಮಾಡುವ ಆಹಾರ ವಿಷವಾಗುತ್ತದೆ. ಇಂತಹ ವೇಳೆ ಚಿಕಿತ್ಸೆ ಕೊಡಿಸಲು ರೈತರು ಹರಸಾಹಸ ಪಡುವಂತಾಗಿದೆ. ಇದಲ್ಲದೆ ಕುರಿ, ಕೋಳಿ, ಮೇಕೆ, ಕೋಳಿ, ನಾಯಿ, ಬೆಕ್ಕುಗಳಿಗೆ ರೋಗ ಬಂದರೂ ವೈದ್ಯರನ್ನು ಸಂಪರ್ಕಿಸುವುದು ಕಷ್ಟವಾಗುತ್ತಿದೆ. 47 ಸಾವಿರ ಎಮ್ಮೆ, 77 ಸಾವಿರ ಹಸು: 2020ನೇ ಸಾಲಿನಲ್ಲಿ ಗಣತಿ ಪ್ರಕಾರ ತಾಲೂಕಿನಲ್ಲಿ 47,967 ಎಮ್ಮೆಗಳು, 77,906 ಹಸುಗಳು, 36,208 ಮೇಕೆ, 508 ಹಂದಿ, 36,523 ಕುರಿಗಳಿವೆ. ಇವುಗಳ ಜೊತೆಗೆ ಕೋಳಿ, ಕುದುರೆ, ಕತ್ತೆ, ನಾಯಿ, ಬೆಕ್ಕು, ಮೊಲ ಹೀಗೆ ಇತರ ಸಾಕುಪ್ರಾಣಿಗಳು ತಾಲೂಕಿನಲ್ಲಿ 1,93,627 ಇವೆ. ಇವುಗಳು ರೋಗಕ್ಕೀಡಾದರೂ ಈ ವೈದ್ಯರೇ ಗ್ರಾಮಗಳಿಗೆ ತೆರಳಿ ನೋಡಿಕೊಳ್ಳಬೇಕಾಗಿದೆ.
ವೈದ್ಯರು ಕೊರತೆ ಇರುವ ಬಗ್ಗೆ ಮೇಲಧಿಕಾರಿ ಗಳ ಗಮನಕ್ಕೆ ತಂದಿರುವುದಲ್ಲದೆ, ಶಾಸಕರು, ಕೆಡಿಪಿ ಸಭೆ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಇರುವ ವೈದ್ಯರಿಂದಲೇ ಎಲ್ಲಾ ಆಸ್ಪತ್ರೆಗಳಲ್ಲಿ ಕೆಲಸ ಮಾಡಿಸಲಾಗುತ್ತಿದೆ. – ಡಾ.ಸೋಮಶೇಖರ್, ಸಹಾಯಕ ನಿರ್ದೇಶಕರು, ಪಶುಪಾಲನಾ ಇಲಾಖೆ
ಪಶುಪಾಲನಾ ಮಂತ್ರಿ ಕೆ. ವೆಂಕಟೇಶ್ ಅವರೊಂದಿಗೆ ಮಾತನಾಡಿದ್ದು, ತಾಲೂಕಿನಲ್ಲಿ ಇರುವ ವೈದ್ಯರ ಸಮಸ್ಯೆ ಬಗೆ ಹರಿಸುವಂತೆ ಮನವಿ ಮಾಡಲಾಗಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. – ಸಿ.ಎನ್.ಬಾಲಕೃಷ್ಣ, ಶಾಸಕ
– ಶಾಮಸುಂದರ್ ಕೆ.ಅಣ್ಣೇನಹಳ್ಳಿ