Advertisement

ಎಲ್ಲೆಡೆಗೂ ಸಿದ್ಧಾಂತ-ಬದ್ಧತೆ ಕೊರತೆ; ಪ್ರೊ|ಕೌಜಲಗಿ

05:55 PM Feb 15, 2022 | Team Udayavani |

ಧಾರವಾಡ: ಇಂದಿನ ವೇಗದ ಬದುಕಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಸಂಖ್ಯಾತರು ಸಾಹಿತ್ಯ ಸೃಷ್ಟಿಸುತ್ತಿದ್ದಾರೆ. ಆ ಸಾಹಿತ್ಯದೊಳಗೆ ಏನೂ ಬದಲಾವಣೆ ಕಾಣಿಸುತ್ತಿಲ್ಲ. ಯಾಕೆಂದರೆ ಇಂದಿನ ಕಾಲಮಾನದಲ್ಲಿ ಎಲ್ಲೆಡೆಗೂ ಸಿದ್ಧಾಂತ-ಬದ್ಧತೆಯ ಕೊರತೆಯಿದೆ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ|ಕೆ.ಎಸ್‌.ಕೌಜಲಗಿ ಹೇಳಿದರು.

Advertisement

ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಕಾರದಲ್ಲಿ ನಗರದಲ್ಲಿ ಗಣಕರಂಗ ಸಂಸ್ಥೆ ಆಯೋಜಿಸಿದ್ದ ಉಪನ್ಯಾಸ ಮತ್ತು ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ತಕ್ಷಣದ ಪ್ರಕ್ರಿಯೆಗಳು ವ್ಯಕ್ತವಾಗುವುದರಿಂದ ವಿಷಯದ ಆಳ, ಅಗಲ ಮತ್ತು ಗಂಭೀರತೆ ಇರಲ್ಲ. ಕೇವಲ ರೋಚಕತೆಯೇ ಪ್ರಧಾನವಾಗಿರುತ್ತದೆ. ಇಂದಿನ ಸಾಹಿತ್ಯದಲ್ಲಿ ಬದುಕಿನ ಕಲಾತ್ಮಕತೆ ಕಡಿಮೆಯಾಗುತ್ತಿದೆ. ಸಾಹಿತ್ಯ ಸೃಷ್ಟಿ ಜನಮಾನಸದ ನಾಲಿಗೆ-ಕಿವಿಯಲ್ಲಿ ನಿರಂತರ ಮೊಳಗುತ್ತಿರಬೇಕು ಎಂದರು.

ಸಮಕಾಲೀನ ಕನ್ನಡ ಕಾವ್ಯ ಕುರಿತು ವಿಶೇಷ ಉಪನ್ಯಾಸ ನೀಡಿದ ಸವದತ್ತಿ ತಾಲೂಕು ಕಸಾಪ ಅಧ್ಯಕ್ಷ ಡಾ|ವೈ.ಎಂ.ಯಾಕೊಳ್ಳಿ ಮಾತನಾಡಿ, ಪ್ರಾಮಾಣಿಕ ಬದುಕನ್ನು ಕಲಿಸಿಕೊಟ್ಟಿದ್ದು ಕಾವ್ಯ. ಇಂತಹ ಕಾವ್ಯವು ಸಮಕಾಲೀನ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಾರ ಸಮುದ್ರ, ಕ್ಷೀರ ಸಮುದ್ರದಂತೆ ಸೃಷ್ಟಿಯಾಗುತ್ತಿದೆ. ಯಾವುದೇ ಕಾವ್ಯವು ಪುಸ್ತಕ ರೂಪದಲ್ಲಿ ಪ್ರಕಟಗೊಂಡಾಗ ಮಾತ್ರ ಅದಕ್ಕೆ ಶಾಶ್ವತತೆ ಲಭಿಸುತ್ತದೆ. ಸಮಾಜವನ್ನು ಸರಿ ದಾರಿಗೆ ತರುವ ಹೊಣೆಗಾರಿಕೆ ಸಾಹಿತ್ಯ-ಸಾಹಿತ್ಯಕ್ಕಿದೆ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ|ಜಿನದತ್ತ ಹಡಗಲಿ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕಸಾಪ ಧಾರವಾಡ ತಾಲೂಕಿನ ಅಧ್ಯಕ್ಷ ಡಾ|ಶರಣಮ್ಮ ಗೋರೆಬಾಳ, ಕಸಾಪ ಹುಬ್ಬಳ್ಳಿ ನಗರ ತಾಲೂಕು ಅಧ್ಯಕ್ಷ ಗುರುಸಿದ್ಧಪ್ಪ ಬಡಿಗೇರ, ಕಸಾಪ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಅಧ್ಯಕ್ಷ ರಮಜಾನ ಕಿಲ್ಲೇದಾರ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು. ಧಾರವಾಡ ಜಿಲ್ಲಾ ಕಸಾಪ ಕೋಶಾಧ್ಯಕ್ಷ ಡಾ|ಎಸ್‌.ಎಸ್‌.ದೊಡಮನಿ, ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ|ಲಿಂಗರಾಜ ಅಂಗಡಿ ಇದ್ದರು.

Advertisement

ನಂತರ ನಡೆದ ಕವಿಗೋಷ್ಠಿಯಲ್ಲಿ ಅಶೋಕ ಹೊನಕೇರಿ, ಶ್ರೀಧರ ಗಸ್ತಿ, ಪ್ರಕಾಶ ಕಡಮೆ, ಮಹಾಂತೇಶ ನರೇಗಲ್ಲ, ಎ.ಎ.ದರ್ಗಾ, ಸಂಪು ಕಿಚಡಿ, ಗಂಗಾಧರ ಗಡಾದ, ಭಾಗ್ಯಶ್ರಿ, ಶ್ವೇತಾ, ನವೀನಶಾಸ್ತಿ, ಸಿಂಧೂ, ಸಣಕಲ್ಲ ಸೋದರಿ, ಸಣಕಲ್ಲ ಶಿವರಾಜ್‌ ಸೇರಿದಂತೆ ಹಲವರು ಕವನ ವಾಚಿಸಿದರು. ಕವಿಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ-ಪುಸ್ತಕ ಗೌರವ ನೀಡಲಾಯಿತು. ಗಣಕರಂಗದ ಹಿಪ್ಪರಗಿ ಸಿದ್ಧರಾಮ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next