Advertisement

ಶಿಕ್ಷಕರ ನೇಮಿಸಿ ವಿದ್ಯಾರ್ಥಿಗಳ ಸಂಕಷ್ಟ ಪರಿಹರಿಸಿ

08:24 PM Sep 14, 2021 | Team Udayavani |

ಉಳ್ಳಾಲ: ಮೂಲಸೌಕರ್ಯ ಅಭಿವೃದ್ಧಿಯಾಗಿ ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರ ಆಗುವ ಕಾರ್ಯ ಅಧಿಕೃತವಾಗಿ ಆಗಬೇಕಿದೆ. ಆದರೆ ಶಿಕ್ಷಕರ ಕೊರತೆ ಈ ಶಾಲೆಗಿದೆ. ಎರಡು ವರ್ಷಗಳಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಉಳ್ಳಾಲ ನಗರಸಭೆ ವ್ಯಾಪ್ತಿಯ ಒಂಬತ್ತುಕೆರೆಯಲ್ಲಿರುವ ದ.ಕ.ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಇಲ್ಲಿ ಶಿಕ್ಷಕರ ನೇಮಕಾತಿ ಆಗಬೇಕಿದೆ.

Advertisement

1962ರಲ್ಲಿ ಆರಂಭಗೊಂಡ ಈ ಶಾಲೆ 1ನೇ ತರಗತಿಯಿಂದ 8ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಕಲಿಕೆಗೆ ಅವಕಾಶವಿದೆ. ಸೋಮೇಶ್ವರ, ಧರ್ಮನಗರ, ಉಳ್ಳಾಲ, ಮುಕ್ಕಚ್ಚೇರಿ, ಒಂಬತ್ತುಕೆರೆ ವ್ಯಾಪ್ತಿಯ ಮಕ್ಕಳು ಈ ಶಾಲೆಯನ್ನು ನೆಚ್ಚಿಕೊಂಡಿದ್ದು, ಎರಡು ವರ್ಷಗಳಿಂದ ಈ ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಯಲ್ಲಿ 145 ವಿದ್ಯಾರ್ಥಿಗಳಿದ್ದರೆ ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 191ಕ್ಕೇರಿದ್ದು, ಇನ್ನೂ ವಿದ್ಯಾರ್ಥಿಗಳು ದಾಖಲಾತಿ ನಡೆಯುತ್ತಿದೆ. ಪ್ರಸ್ತುತ ಈ ಶಾಲೆಯಲ್ಲಿ 1ನೇ ತರಗತಿಗೆ 50 ವಿದ್ಯಾರ್ಥಿಗಳು ದಾಖಲಾದರೆ, 8ನೇ ತರಗತಿಯಲ್ಲಿ 22 ವಿದ್ಯಾರ್ಥಿಗಳಿದ್ದಾರೆ. 7ನೇ ತರಗತಿಯಲ್ಲಿ ಅತೀ ಕಡಿಮೆ 10 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

6 ಮಂದಿ ಶಿಕ್ಷಕರ ಕೊರತೆ:

ಕಳೆದ ಶೈಕ್ಷಣಿಕ ವರ್ಷದಲ್ಲಿ ಒಟ್ಟು 7 ಶಿಕ್ಷಕರಿದ್ದರು. ಅವರಲ್ಲಿ ಇಬ್ಬರು ನಿವೃತ್ತಿಯಾಗಿದ್ದು, ಪ್ರಸ್ತುತ ಮುಖ್ಯ ಶಿಕ್ಷಕಿ ಸಹಿತ ಐವರು ಶಿಕ್ಷಕರಿದ್ದಾರೆ. ಹೊಸ ಶಿಕ್ಷಣ ನೀತಿ ಆಂಗ್ಲ ಶಿಕ್ಷಣದ ಪ್ರಭಾವದಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೂ ಇಂಗ್ಲಿಷ್‌ ಬೋಧಿಸುವ ಶಿಕ್ಷಕರ ಕೊರತೆಯಿದೆ. ಇರುವ ಶಿಕ್ಷಕರಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ಸಹಿತ ಐವರು ಶಿಕ್ಷಕರು ಎಲ್ಲ ತರಗತಿಗಳ ಆನ್‌ಲೈನ್‌ ತರಗತಿ ನೋಡಿಕೊಳ್ಳಬೇಕಿದೆ. ಮುಖ್ಯವಾಗಿ ನಲಿ-ಕಲಿ ಶಿಕ್ಷಣಕ್ಕೆ ಶಿಕ್ಷಕರು, ಸಹಾಯಕ ಶಿಕ್ಷಕರು, ಆಂಗ್ಲ ಶಿಕ್ಷಣ ಬೋಧನೆ ಮಾಡುವ ಶಿಕ್ಷಕರು ಸಹಿತ 6 ಶಿಕ್ಷಕರು ಶಾಲೆಗೆ ಬಂದರೆ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಶಿಕ್ಷಣ ನೀಡಲು ಸಾಧ್ಯ. ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಂದಲೂ ವಿದ್ಯಾರ್ಥಿಗಳು ಸರಕಾರಿ ಶಾಲೆಗೆ ದಾಖಲಾಗುತ್ತಿದ್ದು, ಬೋಧನೆಯನ್ನು ಇನ್ನು ಪರಿಣಾಮಕಾರಿಯಾಗಿ ನೀಡಲು ಶಿಕ್ಷಕರ ಕೊರತೆ ನೀಗಿದರೆ ಇನ್ನಷ್ಟು ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆಯತ್ತ ಮುಖ ಮಾಡುವ ಸಾಧ್ಯತೆ ಇದೆ ಎನ್ನುತ್ತಾರೆ ಇಲ್ಲಿನ ಮುಖ್ಯ ಶಿಕ್ಷಕರು.

ಶುದ್ಧ ಕುಡಿಯುವ ನೀರಿನ ಅವಶ್ಯ:

Advertisement

ಈಗಾಗಲೇ ಈ ಶಾಲೆಗೆ ಹೊಸ ಕಟ್ಟಡ ನಿರ್ಮಾಣವಾಗಿದೆ. ಹಳೆ ಕಟ್ಟಡದಲ್ಲಿ ಪಾಠ ಪ್ರವಚನಗಳು ನಡೆಯುತ್ತಿದ್ದು, ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡರೆ ತರಗತಿ ಕೊಠಡಿಗಳ ಕೊರತೆ ಉಂಟಾಗುವುದಿಲ್ಲ. ಶೌಚಾಲಯ ವ್ಯವಸ್ಥೆಯೂ ಇಲ್ಲಿ ನಿರ್ಮಿಸಿದ್ದು, ಮುಖ್ಯವಾಗಿ ಶುದ್ಧ ಕುಡಿಯುವ ನೀರಿನ ಆವಶ್ಯಕತೆಯಿದೆ.

ಉಳ್ಳಾಲದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆಯೂ ಸರಕಾರಿ ಶಾಲೆಗೆ ಸೇರ್ಪಡೆಗೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪೂರ್ವ ಪ್ರಾಥಮಿಕ ಶಿಕ್ಷಣದಿಂದಲೇ ಇಂಗ್ಲಿಷ್‌ ಕಲಿಕೆ ಆರಂಭವಾದ ಬಳಿಕ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಮುಖ್ಯವಾಗಿ ಆಂಗ್ಲ ಬೋಧನೆಯ ಶಿಕ್ಷಕರ ನೇಮಕಾತಿಯೊಂದಿಗೆ ಇಲ್ಲಿ ಕೊರತೆಯಿರುವ ಶಿಕ್ಷಕರ ನೇಮಕಾತಿ ಆದರೆ ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಪುಷ್ಪಾ ಎಸ್‌., ಮುಖ್ಯ ಶಿಕ್ಷಕರು, ದ.ಕ.ಜಿ.ಸ.ಹಿ. ಪ್ರಾ. ಶಾಲೆ ಒಂಬತ್ತುಕೆರೆ

 

-ವಸಂತ ಎನ್‌. ಕೊಣಾಜೆ

 

Advertisement

Udayavani is now on Telegram. Click here to join our channel and stay updated with the latest news.

Next