Advertisement
ಹಳ್ಳಕ್ಕೆ ಮರಳು: ಮುಖ್ಯ ಶಿಕ್ಷಕ ಕೃಷ್ಣಪ್ಪಗೆ ಶಾಲೆ ಮುಂಭಾಗ ಇದ್ದ ದೊಡ್ಡ ಹಳ್ಳ ಶಾಲೆಯ ಅಂದವನ್ನೇ ಕೆಡಿಸಿತ್ತು. ಅದನ್ನು ಮುಚ್ಚಲು ಗ್ರಾಮಸ್ಥರ ಗಮನಕ್ಕೆ ತಂದರು. ಕೃಷ್ಣಪ್ಪರ ಪ್ರಯತ್ನಕ್ಕೆ ಗ್ರಾಮಸ್ಥರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿತು. 800 ಲೋಡ್ ಮಣ್ಣನ್ನು ಈ ಹಳ್ಳಕ್ಕೆ ತಂದು ತುಂಬಿಸಿ ಸಮತಟ್ಟು ಮಾಡಿಸುವಲ್ಲಿ ಗ್ರಾಮಸ್ಥರ ಪಾತ್ರ ದೊಡ್ಡದು.
Related Articles
Advertisement
ಕೊರತೆಗಳೇ ಇಲ್ಲ: ಸಾಮಾನ್ಯವಾಗಿ ಹಳ್ಳಿಗಾಡಿನ ಸರ್ಕಾರಿ ಶಾಲೆಯಲ್ಲಿ ಕೊರತೆ ಅನ್ನುವುದು ಸಾಮಾನ್ಯ. ಆದರೆ, ಜಡೇರಿ ಸಹಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲ ಸೌಕರ್ಯಗಳ ಕೊರತೆಗಳೇ ಇಲ್ಲ. ಗ್ರಾಮಸ್ಥರು ಕುಡಿಯುವ ನೀರಿಗೆ ಬಳಸುವ ಕೊಳವೆಬಾವಿಯಿಂದ ಶಾಲೆಗೆ ಪ್ರತ್ಯೇಕ ನಲ್ಲಿ ಸಂಪರ್ಕ ನೀಡಿದ್ದಾರೆ. ಈ ನೀರು ಶಾಲಾ ಮಕ್ಕಳ ಬಳಕೆ, ಬಿಸಿಯೂಟ, ಉದ್ಯಾನ ಬೆಳೆಸಲು ಸಹಕಾರಿಯಾಗಿದೆ.
ಶಾಲೆಯಲ್ಲಿ ಸುಸಜ್ಜಿತ ಶೌಚಾಲಯವಿದೆ. ರೋಟರಿ ಸಂಸ್ಥೆಯವರು ಅಳವಡಿಸಿರುವ ಫಿಲ್ಟರ್‌ನಿಂದ ಮಕ್ಕಳಿಗೆ ಶುದ್ಧವಾದ ಕುಡಿಯುವ ನೀರು ಸಿಗುವಂತಾಗಿದೆ. ಶಾಲೆಯ ಕಾಂಪೌಂಡ್ ಹಾಗೂ ಗೋಡೆಯ ಮೇಲೆ ಪರಿಸರ ಸ್ನೇಹಿ ಬರಹ ಹಾಗೂ ಚಿತ್ರಗಳನ್ನು ಚಿತ್ರಿಸಿಕೊಡಲು ಗ್ರಾಮಸ್ಥರು ಮುಂದೆ ಬಂದಿದ್ದಾರೆ. ಶೌಚಾಲಯಕ್ಕೆ ಅಗತ್ಯವಾಗಿರುವ ಟೈಲ್ಸ್ ಹಾಕಿಸಲು ರೋಟರಿ ಸಂಸ್ಥೆ ಮುಂದಾಗಿದೆ.
ಮಕ್ಕಳ ಸಂಖ್ಯೆಯೇ ಕಡಿಮೆ!: ಇಷ್ಟೆಲ್ಲ ಸೌಕರ್ಯಗಳಿರುವ ಜಡೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದೇ ದೊಡ್ಡ ಸಮಸ್ಯೆಯಾಗಿದೆ. ಜಡೇರಿ ಗ್ರಾಮದಲ್ಲಿ 150 ಮನೆಗಳಿವೆ. ಈ ಮನೆಗಳ ಮಕ್ಕಳು ಮಾತ್ರವೇ ಶಾಲೆಗೆ ಬರುತ್ತಾರೆ. ಆದರೆ, ಈ ಮನೆಗಳಲ್ಲಿರುವ ಒಟ್ಟು ಮಕ್ಕಳ ಪೈಕಿ ಕೇವಲ ಶೇ.50 ಅಂದರೆ 22 ಮಕ್ಕಳು ಮಾತ್ರವೇ. ಜಡೇರಿ ಶಾಲೆಯ ಒಂದರಿಂದ ಏಳನೇ ತರಗತಿವರೆಗೂ ವ್ಯಾಸಂಗ ಮಾಡುತ್ತಿದ್ದಾರೆ. ಉಳಿದ ಮಕ್ಕಳು ಅಕ್ಕಪಕ್ಕದ ಮತ್ತು ಶ್ರೀನಿವಾಸಪುರದ ಖಾಸಗಿ ಶಾಲೆಗಳಿಗೆ ಶಾಲಾ ವಾಹನಗಳಲ್ಲಿ ತೆರಳುತ್ತಿದ್ದಾರೆ.
ಶಾಲೆಯ ಯಾವುದೇ ಕೊರತೆಯನ್ನು ನಿವಾರಿಸಲು ಒಗ್ಗಟ್ಟಿನಿಂದ ಮುಂದೆ ಬರುತ್ತಿರುವ ಗ್ರಾಮಸ್ಥರು, ಶಾಲೆಯ ದಾಖಲಾತಿ ಪ್ರಮಾಣ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಖಾಸಗಿ ಶಾಲೆಗಳ ಮೇಲೆ ಪೋಷಕರಿಗೆ ಇರುವ ವ್ಯಾಮೋಹವೇ ಇದಕ್ಕೆ ಕಾರಣವಾಗಿದೆ. ಮೂರು ವರ್ಷಗಳ ಹಿಂದೆ 33 ಇದ್ದ ಮಕ್ಕಳ ಸಂಖ್ಯೆ ಇದೀಗ ಕೇವಲ 22ಕ್ಕೆ ಕುಸಿದಿದೆ. ಶಾಲೆಯನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿ, ಮಕ್ಕಳಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುತ್ತಿದ್ದರೂ, ಶಾಲೆಗೆ ಮಕ್ಕಳನ್ನು ಸೇರಿಸಲು ಹಿಂಜರಿಯುತ್ತಿರುವುದು ಕೇವಲ ಜಡೇರಿ ಗ್ರಾಮ ಮಾತ್ರವಲ್ಲದೆ, ಇಡೀ ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಯಾಗಿದೆ.
● ಕೆ.ಎಸ್.ಗಣೇಶ್