Advertisement

ವಿದ್ಯಾರ್ಥಿಗಳ ಕೊರತೆ; ಮುಚ್ಚುವ ಆತಂಕದಲ್ಲಿ ಪುಣ್ಕೆದಡಿ ಸ.ಕಿ.ಪ್ರಾ. ಶಾಲೆ

08:20 PM Jan 07, 2020 | mahesh |

ಪುಂಜಾಲಕಟ್ಟೆ: ಸರಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಲು ಸರಕಾರ ಹಲವಾರು ಕ್ರಮ ಕೈಗೊಂಡಿದ್ದರೂ ವರ್ಷದಿಂದ ವರ್ಷಕ್ಕೆ ಸರಕಾರಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ. ಸರಕಾರಿ ಶಾಲೆಯನ್ನು ಉಳಿಸಬೇಕೆಂದು ಊರವರು ಪ್ರಯತ್ನಿಸಿ ದರೂ ಶಾಲೆಯೊಂದು ವಿದ್ಯಾರ್ಥಿಗಳಿಲ್ಲದೆ ಸೊರಗುತ್ತಿದೆ.

Advertisement

ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಪುಣೆRದಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ ಕೇವಲ 8 ಮಂದಿ ವಿದ್ಯಾರ್ಥಿಗಳಿದ್ದಾರೆ. ಒಂದನೇ ತರಗತಿಯಲ್ಲಿ ಒಂದು, ಎರಡನೇ ತರಗತಿಯಲ್ಲಿ ಎರಡು, ಮೂರನೇ ತರಗತಿಯಲ್ಲಿ ಮೂರು, ನಾಲ್ಕನೇ ತರಗತಿಯಲ್ಲಿ ಯಾರೂ ಇಲ್ಲ, ಐದನೇ ತರಗತಿಯಲ್ಲಿ ಇಬ್ಬರು… ಹೀಗೆ ಶಾಲೆಯಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಎಂಟು. ಪರಿಸ್ಥಿತಿ ಮುಂದುವರಿದಲ್ಲಿ ಶಾಲೆ ಮುಚ್ಚುವ ಆತಂಕ ಎದುರಾಗಿದೆ.

ಈ ಶಾಲೆ 1991ರಂದು ಸ್ಥಾಪನೆಗೊಂಡಿದ್ದು, ಸುಮಾರು 70 ಸೆಂಟ್ಸ್‌ ವಿಸ್ತೀರ್ಣ ಹೊಂದಿದೆ. 2 ಕೊಠಡಿಗಳಿದ್ದು, ಶಾಲಾಭಿವೃದ್ಧಿ ಸಮಿತಿಯ ಸಹಾಯದಿಂದ ಟೈಲ್ಸ್‌ ಅಳವಡಿಸಲಾಗಿದೆ. ಊರವರ ಶ್ರಮದಾನದಿಂದ ಶಾಲೆ ಭದ್ರವಾಗಿದೆ. ಆದರೆ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಏಕೆಂದರೆ ಆ ಊರಿನಲ್ಲಿ ವಿದ್ಯಾರ್ಥಿಗಳೇ ಇಲ್ಲ.

ಒಂದು ಕಿ.ಮೀ. ದೂರದಲ್ಲಿ ಈ ಶಾಲೆ ಆರಂಭವಾಗುವುದಕ್ಕಿಂತ ಮೊದಲು ಆರಂಭಗೊಂಡ ಶಾಲೆ, ಮತ್ತೆರಡು ಕಿ.ಮೀ. ದೂರದಲ್ಲಿ ಇನ್ನೊಂದು ಶಾಲೆಯಿದೆ. ಅಲ್ಲದೆ ದೂರದ ಊರಿನ ಶಾಲೆಗಳ ವಾಹನಗಳು ಈ ಊರಿನವರೆಗೂ ಬರುವುದರಿಂದ ಅಲ್ಲಿಗೂ ತೆರಳುವ ವಿದ್ಯಾರ್ಥಿಗಳಿದ್ದಾರೆ.

ಶಾಲೆಯನ್ನು ಸದೃಢಗೊಳಿಸಬೇಕಾದರೆ ಎಸ್‌ಡಿಎಂಸಿ ಸಮಿತಿ ಗಟ್ಟಿ ಬೇಕು. ಆದರೆ ಈ ಶಾಲೆಯಲ್ಲಿರುವುದೇ 8 ವಿದ್ಯಾರ್ಥಿಗಳು. ಅವರೂ ತೀರಾ ಬಡಕುಟುಂಬದವರು. ಹೀಗಾಗಿ ಎಸ್‌ಡಿಎಂಸಿಯವರೂ ಏನೂ ಮಾಡಲು ಸಾಧ್ಯವಾಗುತ್ತಿಲ್ಲ.

Advertisement

ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗ ಈ ಶಾಲೆಯ ಉಳಿವಿಗೆ ಹಲವಾರು ಕೊಡುಗೆ ನೀಡುತ್ತಾ ಬಂದಿದೆ. ಇದನ್ನು ದತ್ತು ಪಡೆಯುವ ಚಿಂತನೆಯೂ ನಡೆಸಿತ್ತು. ಆದರೆ ಸರಿಯಾದ ಶಿಕ್ಷಕರಿಲ್ಲದೆ ಹೆತ್ತವರು ಮಕ್ಕಳನ್ನು ಬೇರೆಡೆ ಕಳುಹಿಸುವ ಪರಿಸ್ಥಿತಿ ಉಂಟಾಗಿತ್ತು ಎನ್ನುತ್ತಾರೆ ಸ್ಥಳೀಯ ಗ್ರಾ.ಪಂ. ಉಪಾಧ್ಯಕ್ಷ ಸುರೇಶ್‌ ಮೈರ ಅವರು.

ಊರಿನಲ್ಲಿ ಶಾಲೆ ನಿರ್ಮಾಣವಾದರೆ ಉತ್ತಮ. ಆದರೆ ಬಹಳ ವರ್ಷದಿಂದ ಕಾರ್ಯ ನಿರ್ವಹಿಸುವ ಶಾಲೆಗಳಿರುವಾಗ, ತುಂಬ ಕಡಿಮೆ ಅಂತರದಲ್ಲಿ ಶಾಲೆಯನ್ನು ತೆರೆದರೆ ಒಮ್ಮೆಗೆ ವಿದ್ಯಾರ್ಥಿಗಳು ಬರಬಹುದು. ಆದರೆ ಕೆಲವು ವರುಷ ಕಳೆದ ಮೇಲೆ ಮತ್ತೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದರೆ ಮುಚ್ಚುವ ಪರಿಸ್ಥಿತಿ ಬಂದರೆ ತುಂಬಾ ಬೇಸರದ ಸಂಗತಿ ಎನ್ನುತ್ತಾರೆ ಹೆತ್ತವರು.

ಬಸ್‌ ಸಂಚಾರವಿಲ್ಲ
ಈಗ ಬರುವ ಎಂಟು ವಿದ್ಯಾರ್ಥಿಗಳೂ ತೀರಾ ಗ್ರಾಮೀಣ ಭಾಗದ ವಿದ್ಯಾರ್ಥಿಗಳಾಗಿದ್ದು, ಸುಮಾರು 2 ಕಿಲೋ ಮೀಟರ್‌ ದೂರದಿಂದ ನಡೆದುಕೊಂಡೇ ಈ ಶಾಲೆಗೆ ಬರುತ್ತಾರೆ. ಈ ಶಾಲೆಗೆ ಬರಲು ರಸ್ತೆ ಇದೆ, ಆದರೆ ಬಸ್ಸಿಲ್ಲ. ಅಗರಗುಂಡಿ ತನಕ ಬಸ್‌ ಸಂಚಾರ ಇದ್ದು, ಮತ್ತೆ ನಡೆದುಕೊಂಡೇ ಬರಬೇಕು. ಬಸ್‌ ಸಂಚಾರ ಇಲ್ಲದ ಕಾರಣ ಈ ಶಾಲೆಗೆ ಬರಲು ಶಿಕ್ಷಕರೂ ಸ್ವಲ್ಪ ಹಿಂದೇಟು ಹಾಕುತ್ತಾರೆ ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿಯವರು. ಕಳೆದ 3 ವರ್ಷಗಳ ಹಿಂದೆ ರೆಗ್ಯುಲರ್‌ ಆಗಿ ಶಿಕ್ಷಕರೇ ಇರಲಿಲ್ಲ. ಪ್ರಸ್ತುತ ಓರ್ವ ಶಿಕ್ಷಕಿ, ಗೌರವ ಶಿಕ್ಷಕರೊಬ್ಬರಿದ್ದಾರೆ.

 ವಾಹನ ವ್ಯವಸ್ಥೆ ಕಷ್ಟ
ಶಾಲಾ ಕೊಠಡಿಗೆ ಟೈಲ್‌ ಅಳವಡಿಸಿ ವ್ಯವಸ್ಥಿತವಾಗಿ ಮಾಡಿಟ್ಟಿದ್ದೇವೆ. ಈ ಊರಿನಲ್ಲಿ ಮಕ್ಕಳ ಸಂಖ್ಯೆ ತೀರಾ ಕಡಿಮೆ. ಈಗ ಇರುವ ವಿದ್ಯಾರ್ಥಿಗಳು ಸುಮಾರು 2 ಕಿ.ಮೀ. ದೂರದಿಂದಲೇ ನಡೆದುಕೊಂಡು ಬರುತ್ತಿದ್ದಾರೆ. ಶಾಲೆಗೆ ಮಕ್ಕಳನ್ನು ಹೆಚ್ಚಿಸಲು ವಾಹನದ ವ್ಯವಸ್ಥೆ ಮಾಡಲು ಎಸ್‌ಡಿಎಂಸಿ ಸಮಿತಿಯಲ್ಲಿ ಯಾರೂ ಅನುಕೂಲಸ್ಥರಿಲ್ಲದ ಕಾರಣ ಕಷ್ಟವಾಗಿದೆ.
– ರಫೀಕ್‌, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು

 ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ
ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದರೆ ಯಾವುದೇ ಸರಕಾರಿ ಶಾಲೆಯನ್ನು ಮುಚ್ಚಲಾಗುವುದಿಲ್ಲ. ಪುಣ್ಕೆದಡಿ ಸರಕಾರಿ ಶಾಲೆಯಲ್ಲಿಯೂ ಒಂದು ವೇಳೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದರೆ ಹತ್ತಿರದ ಶಾಲೆಗೆ ವಿದ್ಯಾರ್ಥಿಗಳನ್ನು ಕಳುಹಿಸಿ ಶಿಕ್ಷಣದ ವ್ಯವಸ್ಥೆ ಮಾಡಲಾಗುವುದು.
 - ಜ್ಞಾನೇಶ್‌, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ

- ರತ್ನದೇವ್‌ ಪುಂಜಾಲಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next