Advertisement

ಪ್ರಾ.ಆ.ಕೇಂದ್ರದಲ್ಲಿ ಸಿಬಂದಿ ಕೊರತೆ

08:51 PM Aug 17, 2021 | Team Udayavani |

ಪಿಲಾತಬೆಟ್ಟು ಗ್ರಾಮದಲ್ಲಿರುವ ಪುಂಜಾಲಕಟ್ಟೆಯ ಪ್ರಾ.ಆರೋಗ್ಯ ಕೇಂದ್ರದಲ್ಲಿ ಸಿಬಂದಿ ಕೊರತೆ ಇದ್ದು, ಗುಣಮಟ್ಟದ ಸೇವೆ ನೀಡಲು ತೊಂದರೆಯಾಗುತ್ತಿದೆ. ಮಾತ್ರವಲ್ಲ ಗ್ರಾಮದಲ್ಲಿ ನೆಟ್‌ವರ್ಕ್‌ ಸಮರ್ಪಕವಾಗಿರದೆ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಜತೆಗೆ ಇಲ್ಲಿ ಜನತೆ ಎದುರಿಸುತ್ತಿರುವ ಇನ್ನಷ್ಟು ಕೊರತೆಗಳ ಚಿತ್ರಣ  ಚಿತ್ರ ಒಂದು ಊರು; ಹಲವು ದೂರು ಅಂಕಣದಲ್ಲಿ.

Advertisement

ಪುಂಜಾಲಕಟ್ಟೆ: ಪಿಲಾತಬೆಟ್ಟು ಗ್ರಾಮದಲ್ಲಿರುವ ಪುಂಜಾಲಕಟ್ಟೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಲವಾರು ಕೊರತೆಗಳಿಂದ ಜನರಿಗೆ ಉತ್ತಮ ಆರೋಗ್ಯ ರಕ್ಷಣೆ ವ್ಯವಸ್ಥೆ ನೀಡುವಲ್ಲಿ ಸಮಸ್ಯೆ ಎದುರಿಸುತ್ತಿದೆ.

ಬಂಟ್ವಾಳ-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪಿಲಾತಬೆಟ್ಟು ಗ್ರಾಮದ ಕೇಂದ್ರ, ಚಟುವಟಿಕೆಯ ಸ್ಥಾನವಾಗಿರುವ ಪುಂಜಾಲಕಟ್ಟೆ ಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಬಂಟ್ವಾಳ-ಬೆಳ್ತಂಗಡಿ ತಾಲೂಕಿನ ಗಡಿಭಾಗದಲ್ಲಿರುವ ಪಿಲಾತಬೆಟ್ಟು ಗ್ರಾಮ ಸಹಿತ ಬಂಟ್ವಾಳ ತಾಲೂಕಿನ 6 ಗ್ರಾಮ ಪಂಚಾಯತ್‌ಗಳ 8 ಗ್ರಾಮಗಳಾದ ಪಿಲಾತಬೆಟ್ಟು, ಇರ್ವತ್ತೂರು, ಮೂಡುಪಡುಕೋಡಿ, ಬಡಗಕಜೆಕಾರು, ತೆಂಕಕಜೆಕಾರು, ಕಾವಳಮೂಡೂರು, ಕಾವಳಪಡೂರು, ಕಾಡಬೆಟ್ಟು ಗ್ರಾಮಗಳು ಹಾಗೂ ನೆರೆಯ ಬೆಳ್ತಂಗಡಿ ತಾಲೂಕಿನ ಮಾಲಾಡಿ, ಕುಕ್ಕಳ ಗ್ರಾಮಗಳ ಗ್ರಾಮಸ್ಥರು ಅವಲಂಬಿಸಿದ ಸರಕಾರಿ ಆಸ್ಪತ್ರೆಯಾಗಿದೆ. ದಿನವೊಂದಕ್ಕೆ ಸುಮಾರು 150ರಿಂದ 200 ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಪ್ರಸ್ತುತ ಓರ್ವ ಖಾಯಂ ಎಂಬಿಬಿಎಸ್‌ ವೈದ್ಯರ ನೇಮಕಾತಿಯಾಗಿದೆ. ಆದರೆ ಇದ್ದ ಆಯುಷ್‌ ವೈದ್ಯಾಧಿಕಾರಿ ಅವರಿಗೆ ಹುದ್ದೆ ಇಲ್ಲದೆ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ. ಸ್ಟಾಫ್‌ ನರ್ಸ್‌ ಸಹಿತ ಸಿಬಂದಿ ಕೊರತೆಯಿದ್ದು, ಹೆಚ್ಚಿನ ಚಿಕಿತ್ಸೆ ನೀಡಲು ಸಮಸ್ಯೆಯಾಗಿದೆ.

ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವುದು ಮೊದಲಾದ ಬೇಡಿಕೆಗಳ ಬಗ್ಗೆ ಸಾರ್ವಜನಿಕರು ಹಾಗೂ ಇತರ ಸಂಘಟನೆಗಳು ಒತ್ತಾಯಿಸಿದ್ದರು.

ಪ್ರಾ.ಆ.ಕೇಂದ್ರ ಮೇಲ್ದರ್ಜೆಗೆ :

Advertisement

ಪ್ರಸ್ತುತ ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿ ಗುತ್ತು ಅವರ ಮುತು ವರ್ಜಿಯಿಂದ ಪುಂಜಾಲಕಟ್ಟೆ ಪ್ರಾ.ಆ. ಕೇಂದ್ರ ವನ್ನು 6 ಕೋ.ರೂ ವೆಚ್ಚದಲ್ಲಿ ಜಾಗತಿಕ ಮಟ್ಟದ ಚಿಕಿತ್ಸಾ ಕೇಂದ್ರವಾಗಿಸುವ ಕಾರ್ಯವನ್ನು ಶೀಘ್ರ ಕೈಗೆತ್ತಿಕೊಳ್ಳುವುದಾಗಿ ರಾಜ್ಯ ಆರೋಗ್ಯ ಸಚಿವರು ಘೋಷಣೆ ಮಾಡಿದ್ದು, ಆಸ್ಪತ್ರೆ ಮೇಲ್ದರ್ಜೆಗೇರಿದರೆ ಬಹಳ ಪ್ರಯೋಜನವಾಗುತ್ತದೆ.

ನೆಟ್‌ವರ್ಕ್‌ ಸಮಸ್ಯೆ :

ಪುಂಜಾಲಕಟ್ಟೆ ಪೇಟೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ನೆಟ್‌ವರ್ಕ್‌ ದೊರಕದೆ ಮೊಬೈಲ್‌ ಉಪಯೋಗ ಹರಸಾಹಸವಾಗಿದೆ. ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌, ಖಾಸಗಿ ಕಂಪೆನಿಗಳ ಮೊಬೈಲ್‌ ಟವರ್‌ಗಳಿದ್ದರೂ ಇಲ್ಲಿ ಲೆಕ್ಕಕ್ಕೆ ಮಾತ್ರ. ವಿದ್ಯುತ್‌ ಕಡಿತಗೊಂಡಲ್ಲಿ ನೆಟ್‌ವರ್ಕ್‌ ದೊರಕುವುದೇ ಇಲ್ಲ, ಪುಂಜಾಲಕಟ್ಟೆ ಪೇಟೆಯಿಂದ ಅನತಿ ದೂರದಲ್ಲಿ ಬಿಎಸ್‌ಎನ್‌ಎಲ್‌ ಟವರ್‌ ಇದ್ದರೂ ನೆಟ್‌ವರ್ಕ್‌ ಸಮಸ್ಯೆ ಕಾಡುತ್ತಿದೆ.

ಉಪನ್ಯಾಸಕರ ಕೊರತೆ :

ಪಿಲಾತಬೆಟ್ಟು ಗ್ರಾಮ ಮಾತ್ರವಲ್ಲದೆ ನೆರೆಯ ಗ್ರಾಮಗಳಿಗೂ ಅಗತ್ಯವಾಗಿರುವ ನಯನಾಡು ಸರಕಾರಿ ಪಿಯು ಕಾಲೇಜುನಲ್ಲಿ ಉಪನ್ಯಾಸಕರ ಕೊರತೆಯಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಇಲ್ಲಿ ಕಲೆ ಮತ್ತು ವಾಣಿಜ್ಯ ವಿಭಾಗಗಳಿದ್ದು ಪ್ರಾಂಶುಪಾಲರ ಸಹಿತ ಇಬ್ಬರು ಉಪನ್ಯಾಸಕರು ಮಾತ್ರ ಕರ್ತವ್ಯದಲ್ಲಿದ್ದಾರೆ. ಕೆಲವೊಂದು ತಾಂತ್ರಿಕ ಕಾರಣಗಳಿಂದ ಇಲ್ಲಿನ ಉಪನ್ಯಾಸಕರು ವರ್ಗಾವಣೆಗೊಂಡು ಸಮಸ್ಯೆ ಉದ್ಭವಿಸಿದ್ದು, ಶಾಸಕ ರಾಜೇಶ್‌ ನಾೖಕ್‌ ಅವರ ಹಾಗೂ ದಾನಿಗಳ ಸಹಕಾರದಿಮದ ಅತಿಥಿ ಉಪನ್ಯಾಸಕರನ್ನು ನೇಮಿಸಲಾಗಿತ್ತು. ಪ್ರಸ್ತುತ ಕೊರೊನಾ ಸಮಸ್ಯೆಯಿಂದ ಕಾಲೇಜುಗಳು ತೆರೆಯದ ಕಾರಣ ಆನ್‌ಲೈನ್‌ ತರಗತಿ ನಡೆಯುತ್ತಿದೆ. ಈ ಬಾರಿ ವಿದ್ಯಾರ್ಥಿಗಳ ಸೇರ್ಪಡೆ ನಡೆ ಯು ತ್ತಿದೆ. ಆದರೆ ಸಾಕಷ್ಟು ಉಪನ್ಯಾಸಕರಿಲ್ಲದೆ ಸಮಸ್ಯೆ ಯಾಗಿದೆ.

ಇರುವುದೊಂದೇ ರಾಷ್ಟ್ರೀಕೃತ ಬ್ಯಾಂಕ್‌ :

ಪುಂಜಾಲಕಟ್ಟೆಯಲ್ಲಿರುವ ಏಕೈಕ ರಾಷ್ಟ್ರೀಕೃತ ಬ್ಯಾಂಕ್‌ ಆಗಿರುವ ಕೆನರಾ ಬ್ಯಾಂಕ್‌ಅನ್ನು ಪಿಲಾತಬೆಟ್ಟು ಗ್ರಾಮ ಸಹಿತ ನೆರೆಯ ಗ್ರಾಮಗಳೂ ಅವಲಂಬಿಸಿವೆ. ಆದರೆ ಇಲ್ಲಿನ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಇಲ್ಲಿರುವ ಎಟಿಎಂ ಸದಾ ದುರಸ್ತಿಯಲ್ಲಿರುತ್ತದೆ. ಕರಾವಳಿಯ ಅಥವಾ ಕನ್ನಡ ಬಲ್ಲ ಸಿಬಂದಿ ನೇಮಕಾತಿಗೆ ಆಗ್ರಹ ಕೇಳಿಬರುತ್ತಿದೆ.

ತ್ಯಾಜ್ಯ ವಿಲೇವಾರಿ ಘಟಕ ಕಾರ್ಯಾರಂಭವಾಗಿಲ್ಲ :

ತ್ಯಾಜ್ಯ ವಿಲೇವಾರಿಗೆ ಗ್ರಾಮ ಪಂಚಾಯತ್‌ ಕಸದ ತೊಟ್ಟಿ ಗಳನ್ನು ಇರಿಸಿದರೂ ವಿಲೇವಾರಿಯಾಗುವಾಗ ತಡವಾದಲ್ಲಿ ಸಾರ್ವಜನಿಕರ ಆರೋಪ ಎದುರಿಸಬೇಕಾಗುತ್ತದೆ. ಘನ ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ ನಡೆದಿದ್ದರೂ ಕಾರ್ಯಾರಂಭಗೊಳಿಸಬೇಕಾಗಿದೆ.

ಬಸ್‌ ತಂಗುದಾಣ ಇಲ್ಲ :

ಕೆಲವೊಂದು ಮೂಲ ಸೌಕರ್ಯಗಳ ಹೊರತಾಗಿಯೂ ಅಭಿವೃದ್ಧಿಯ ದೃಷ್ಟಿಯಲ್ಲಿ ಗ್ರಾಮ ಹಿಂದೆ ಉಳಿದಿದೆ. ಕೇಂದ್ರ ಸ್ಥಾನ ಪುಂಜಾಲಕಟ್ಟೆ ಪೇಟೆಯಲ್ಲಿ ಧರ್ಮಸ್ಥಳದೆಡೆಗೆ ಸಾಗುವ ಬದಿಯಲ್ಲಿ ಬಸ್‌ ತಂಗುದಾಣ ಇಲ್ಲದಿರುವುದೇ ಪ್ರಮುಖ ಕೊರತೆಯಾಗಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಬಸ್‌ ಪ್ರಯಾಣಕ್ಕೆ ಅಂಗಡಿಗಳ ಮುಂದೆ ನಿಲ್ಲುವ ಅನಿವಾರ್ಯವಿದೆ. ಪಾದಾಚಾರಿಗಳಿಗೆ ಮತ್ತು ವರ್ತಕರಿಗೆ ಸದಾ ಕಿರಿಕಿರಿ ಉಂಟಾಗಿದೆ.ಇಲ್ಲಿ ಟ್ರಾಫಿಕ್‌ ಜಾಮ್‌ ಮಾಮೂಲಿಯಾಗಿದೆ. ಪೇಟೆಯಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿಗೆ ಹೊಟೇಲ್‌ಗ‌ಳೇ ಆಶ್ರಯ. ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕಾಗಿದೆ.

ಗ್ರಾಮೀಣ ಜನತೆಯ ಪಡಿಪಾಟಲು :

ಗ್ರಾಮದ 2 ನೇ ಮತ್ತು 3 ನೇ ಬ್ಲಾಕ್‌ ಪರಿಸರವಾದ ಕುಮಂಗಿಲ, ಮಿತ್ತೂಟ್ಟು, ನಯನಾಡು, ಕೊಳಕ್ಕೆಬೈಲು ಪರಿಸರದಲ್ಲಿ ನೆಟ್‌ವರ್ಕ್‌ ಸಮಸ್ಯೆ ಬಿಗಡಾಯಿಸಿದೆ. ಈ ಭಾಗದಲ್ಲಿ ಯಾವ ಕಂಪೆನಿಯ ನೆಟ್‌ವರ್ಕ್‌ ಕೂಡಾ ದೊರಕದೆ ಇಲ್ಲಿನ ವಿದಾರ್ಥಿಗಳು ಆನ್‌ಲೈನ್‌ ಪಾಠಕ್ಕೆ ಪರದಾಡುವಂತಾಗಿದೆ. ಪ್ರಸ್ತುತ ನಯನಾಡು, ಕೊಳಕ್ಕೆ ಬೈಲುವಿನ ಯುವಕರು ಸೇರಿ ವೈಫೈ ಸೌಲಭ್ಯ ಕಲ್ಪಿಸಿ ಕೊಟ್ಟಿದ್ದು, ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಪರಿಹಾರವಾಗಿದೆ.

ಇತರ ಸಮಸ್ಯೆ :

  • ಗ್ರಾಮ ಪಂಚಾಯತ್‌ ಸಮುದಾಯಭವನ ನಿರ್ಮಾಣ ಹಂತದಲ್ಲಿದೆ. ಶೀಘ್ರ ಕಾಮಗಾರಿ ಪೂರ್ಣಗೊಂಡಲ್ಲಿ ಅನುಕೂಲವಾಗಲಿದೆ.
  • ನೇರಳಕಟ್ಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲಗೊಂಡಿದೆ. ಖಾಸಗಿ ಶಾಲೆಗಳ ಪೈಪೋಟಿ ನಡುವೆ ಈ ಶಾಲೆ ಅಭಿವೃದ್ಧಿಗೊಳ್ಳಬೇಕಾಗಿದೆ.
  • ಗ್ರಾ.ಪಂ. ವ್ಯಾಪ್ತಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ಇಲ್ಲ. ವಾರದ ಮಾರುಕಟ್ಟೆ ಗೆ ಸೌಲಭ್ಯ ಕಲ್ಪಿಸಬೇಕಾಗಿದೆ.

 

-ರತ್ನದೇವ್‌ ಪುಂಜಾಲಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next