ಚಿಕ್ಕೋಡಿ: ಗಡಿಭಾಗದಲ್ಲಿ ಕಿಲ್ಲರ್ ಕೋವಿಡ್ ತಾಂಡವವಾಡುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರದ ನಾಲ್ಕು ಜನ ಪ್ರಭಾವಿ ಸಚಿವರ ತವರು ಜಿಲ್ಲೆಯಲ್ಲಿಯೇ ತಜ್ಞ ವೈದ್ಯರ ಕೊರತೆ ಎದುರಾಗಿದೆ. ಇದರಿಂದ ಸಾರ್ವಜನಿಕ ಆಸ್ಪತ್ರೆಗಳು ಬಣಗುಡುತ್ತಿವೆ. ಸೂಕ್ತ ಚಿಕಿತ್ಸೆಗಾಗಿ ಗ್ರಾಮೀಣ ಪ್ರದೇಶದ ಜನ ಪರದಾಡುವಂತಾಗಿದೆ.
ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ, ಅಥಣಿ, ರಾಯಬಾಗ, ಗೋಕಾಕ ಮತ್ತು ಹುಕ್ಕೇರಿ ತಾಲೂಕುಗಳನ್ನು ಒಳಗೊಂಡ ನಿಯೋಜಿತ ಚಿಕ್ಕೋಡಿ ಜಿಲ್ಲೆಯಲ್ಲಿ 52 ಜನ ತಜ್ಞ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ಬಡ ರೋಗಿಗಳಿಗೆ ಆಪತ್ಭಾಂಧವವಾಗಬೇಕಿದ್ದ ಸರಕಾರಿ ಆಸ್ಪತ್ರೆಗಳು ತಜ್ಞ ವೈದ್ಯರು ಇಲ್ಲದ ಕಾರಣ ಖಾಸಗಿ ಆಸ್ಪತ್ರೆಗಳ ಮೋರೆ ಹೋಗುವುದು ಅನಿವಾರ್ಯವಾಗಿದೆ.
ಎಲ್ಲೆಲ್ಲಿ ಎಷ್ಟು ಹುದ್ದೆ ಖಾಲಿ?: ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಇಡೀ ತಾಲೂಕಿನಲ್ಲಿರುವ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು 39 ಜನ ವೈದ್ಯರ ಮಂಜೂರಾತಿದೆ. ಇದರಲ್ಲಿ 11 ಜನ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಿದರೆ, 14 ಜನ ವೈದ್ಯರ ಕೊರತೆ ಇದೆ. ಅಥಣಿ ತಾಲೂಕಿನಲ್ಲಿ 38 ಜನ ವೈದ್ಯರ ಹುದ್ದೆ ಮಂಜೂರಾತಿಯಲ್ಲಿ 16 ಜನ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, 4 ಜನ ವೈದ್ಯರ ಹುದ್ದೆ ಖಾಲಿ ಇದೆ. ಗೋಕಾಕ ತಾಲೂಕಿನಲ್ಲಿ 48 ಹುದ್ದೆಗಳ ಮಂಜೂರಾತಿಯಲ್ಲಿ 17 ಜನ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದು, 14 ಹುದ್ದೆಗಳು ಖಾಲಿ ಇದೆ. ಹುಕ್ಕೇರಿ ತಾಲೂಕಿನ 39 ಹುದ್ದೆಗಳ ಪೈಕಿ 7 ಜನ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದು, 6 ಹುದ್ದೆ ಖಾಲಿ ಇವೆ. ರಾಯಬಾಗ ತಾಲೂಕಿನಲ್ಲಿ 28 ವೈದ್ಯರ ಹುದ್ದೆಯಲ್ಲಿ ಇಬ್ಬರು ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದು, 14 ಹುದ್ದೆಗಳು ಖಾಲಿ ಇವೆ. ಕಾರ್ಯಭಾರ ಹೊರೆ: ಹುದ್ದೆಗಳು ಖಾಲಿ ಇರುವುದರಿಂದ ಒಬ್ಬೊಬ್ಬ ವೈದ್ಯರು ಎರಡ್ಮೂರು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ. ವಾರದಲ್ಲಿ ಒಂದೊಂದು ಆಸ್ಪತ್ರೆಯಲ್ಲಿ ಮೂರು ಮೂರು ದಿನಗಳ ಕರ್ತವ್ಯ ನಿರ್ವಹಿಸುವಂತಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನರು ವೈದ್ಯಕೀಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಸಚಿವ ಶ್ರೀಮಂತ ಪಾಟೀಲ ತವರು ಜಿಲ್ಲೆಯಲ್ಲಿ ತಜ್ಞ ವೈದ್ಯರು ಇಲ್ಲದೇ ಸರಕಾರಿ ಆಸ್ಪತ್ರೆಗಳು ಬಾಗಿಲು ಮುಚ್ಚುವ ಸ್ಥಿತಿಗೆ ಬಂದಿವೆ. ಬಡವರ ಆರೋಗ್ಯದ ಕಡೆ ಗಮನ ಹರಿಸಿ ಸುಸಜ್ಜಿತ ಆಸ್ಪತ್ರೆಗಳಲ್ಲಿ ವೈದ್ಯರನ್ನು ನೇಮಕ ಮಾಡಬೇಕು ಎಂಬುದು ಗಡಿ ಜನರ ಒತ್ತಾಯವಾಗಿದೆ.
ವೈದ್ಯರ ಕೊರತೆ ಚಿಕ್ಕೋಡಿ ಭಾಗಕ್ಕಷ್ಟೇ ಅಲ್ಲದೆ ಇಡೀ ರಾಜ್ಯಕ್ಕೆ ಎದುರಾಗಿದೆ. ಎಲ್ಲ ಆಸ್ಪತ್ರೆಯಲ್ಲಿ ವೈದ್ಯರ ನೇಮಕ ಕುರಿತು ನಾಲ್ಕು ಬಾರಿ ನೇಮಕಾತಿ ಟೆಂಡರ್ ಕರೆದರೂ ಯಾರು ಆಸಕ್ತಿ ತೋರಲಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆ ಇದ್ದು, ಇರುವಷ್ಟು ವೈದ್ಯರಲ್ಲಿಯೇ ಸೇವೆ ನೀಡಲಾಗುತ್ತಿದೆ. ವೈದ್ಯರ ನೇಮಕ ಕುರಿತು ಸರಕಾರದ ಮಟ್ಟದಲ್ಲಿಯೂ ಪ್ರಸ್ತಾವನೆ ಇದೆ.
-ಡಾ| ಎಸ್.ವಿ. ಮುನ್ಯಾಳ, ಜಿಲ್ಲಾ ಆರೋಗ್ಯಾಧಿಕಾರಿ
ಸರಕಾರ ಗ್ರಾಮೀಣ ಪ್ರದೇಶದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡುತ್ತದೆ. ಆದರೆ ಪೂರ್ಣ ಪ್ರಮಾಣದ ವೈದ್ಯರ ನೇಮಕ ಮಾಡಿಕೊಳ್ಳದೇ ಇರುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ವೈದ್ಯಕೀಯ ಸೇವೆ ಲಭ್ಯವಾಗುತ್ತಿಲ್ಲ. ಸರಕಾರ ಎಚ್ಚೆತ್ತುಕೊಂಡು ಆಸ್ಪತ್ರೆಗಳಿಗೆ ವೈದ್ಯರ ನೇಮಕ ಮಾಡಲು ಚಿಂತನೆ ಮಾಡಬೇಕು.
-ಸಂತೋಷ ನವಲೆ, ಸಾಮಾಜಿಕ ಹೋರಾಟಗಾರ, ಸದಲಗಾ
–ಮಹಾದೇವ ಪೂಜೇರಿ