Advertisement

ಮುಟ್ಟುಗೋಲು ಹಾಕಿದ ವಾಹನ ನಿಲ್ಲಿಸಲು ಜಾಗವಿಲ್ಲ !

08:50 PM Feb 17, 2022 | Team Udayavani |

ಮಹಾನಗರ: ಸಾರಿಗೆ ನಿಯಮವನ್ನು ಉಲ್ಲಂಘಿಸಿದ ವಾಹನಗಳನ್ನು ಸಾರಿಗೆ ಇಲಾಖೆ ಮತ್ತು ಸಂಚಾರಿ ಪೊಲೀಸರು ಮುಟ್ಟುಗೋಲು ಹಾಕುತ್ತಿದ್ದು, ಈ ರೀತಿಯ ವಾಹನಗಳನ್ನು ನಿಲ್ಲಿಸಲು ಮಂಗಳೂರಿ ನಲ್ಲಿ ಸಮರ್ಪಕ ಜಾಗದ ಕೊರತೆ ಇದೆ. ಈ ಕುರಿತಂತೆ ಸಾರಿಗೆ ಇಲಾಖೆಯಿಂದ ರಾಜ್ಯ ಸರಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರೂ ಇನ್ನೂ, ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.

Advertisement

ಸೂಕ್ತ ಜಾಗದ ಕೊರತೆಯ ಹಿನ್ನೆಲೆ ಯಲ್ಲಿ ನಿರುಪಯುಕ್ತ ವಾಹನಗಳನ್ನು ನಗರದ ಕೆಲ ವೊಂದು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದೆ. ಇದರಿಂದಾಗಿ ನಗರದ ಸೌಂದರ್ಯಕ್ಕೂ ಧಕ್ಕೆಯಾ

ಗುತ್ತಿದೆ. ಮುಖ್ಯವಾಗಿ ಉರ್ವ, ಬರ್ಕೆ, ಕದ್ರಿ ಪೊಲೀಸ್‌ ಠಾಣೆಯ ಮುಂಭಾಗದಲ್ಲಿ, ಸುತ್ತಲಿನ ರಸ್ತೆ ಬದಿ ಜೀಪು, ಟಿಪ್ಪರ್‌, ಕಾರುಗಳು, ಬೈಕ್‌ ಸಹಿತ ನಿರುಪಯುಕ್ತ ವಾಹನಗಳನ್ನು ನಿಲ್ಲಿಸಲಾಗಿದೆ. ಈ ರೀತಿಯ ಬಹುತೇಕ ವಾಹನಗಳು ತುಕ್ಕು ಹಿಡಿದ ಸ್ಥಿತಿಯಲ್ಲಿದ್ದು, ಅಪಾಯ ಸೂಚಿಸುತ್ತಿದೆ. ಕೆಲವೊಂದು ವಾಹನ ಗಳ ಮೇಲೆ ಗಿಡಗಳ ಬಳ್ಳಿ ಹಬ್ಬಿ ಪೊದೆಯಾಗಿ ಮಾರ್ಪಾಡಾಗಿದೆ.

ಕದ್ರಿ ಪೊಲೀಸರು ಸೀಜ್‌ ಮಾಡಿದ ವಾಹನಗಳನ್ನು ಈ ಹಿಂದೆ ಕದ್ರಿ ಪಾರ್ಕ್‌ ರಸ್ತೆಯಲ್ಲಿ ನಿಲ್ಲಿಸಲಾ ಗುತ್ತಿತ್ತು. ಸದ್ಯ ಆ ರಸ್ತೆಯಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ನಡೆಯುತ್ತಿದೆ. ಕೆಲವೊಂದು ವಾಹನ ಕದ್ರಿ ಪೊಲೀಸ್‌ ಠಾಣೆ ಮುಂಭಾಗ ನಿಲ್ಲಿಸಲಾಗಿದೆ. ನಗರದ ಕೆಲವೊಂದು ಗ್ಯಾರೇಜ್‌ ಆವರಣಗಳಲ್ಲಿ ತುಕ್ಕು ಹಿಡಿದ ಉಪಯೋಗ ಶೂನ್ಯ ವಾಹನಗಳನ್ನು ನಿಲುಗಡೆ ಮಾಡಲಾಗಿದೆ. ಇದರಿಂದ ಆಸುಪಾಸಿನಲ್ಲಿ ವಾಸಿಸುವ, ಸಂಚರಿಸುವವರಿಗೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎನ್ನುತ್ತಾರೆ ಸಾರ್ವಜನಿಕರು.

ಡಂಪಿಂಗ್‌ ಯಾರ್ಡ್‌ ಆಗುತ್ತಿದೆ ಪಾಲಿಕೆ :

Advertisement

ಸ್ವಚ್ಛತೆಯ ಹೆಸರಿನಲ್ಲಿ ಮಾದರಿ ಯಾಗಬೇಕಿದ್ದ ಮಹಾನಗರ ಪಾಲಿಕೆಯೇ ಸದ್ಯ ಡಂಪಿಂಗ್‌ ಯಾರ್ಡ್‌ ಆಗುತ್ತಿದೆ. ಪಾಲಿಕೆ ಆವರಣದಲ್ಲಿಯೇ ಗುಜರಿ ವಾಹನಗಳು, ತಳ್ಳುಗಾಡಿ, ಪ್ಲಾಸ್ಟಿಕ್‌, ತೆರವುಗೊಳಿಸಿದ ಬ್ಯಾನರ್‌, ಫ್ಲೆಕ್ಸ್‌ ಸಹಿತ ತ್ಯಾಜ್ಯಗಳನ್ನು ರಾಶಿ ಹಾಕಲಾಗಿದೆ. ಕೆಲವು ಸಮಯದ ಹಿಂದೆ ಪಾಲಿಕೆಯಿಂದ ಟೈಗರ್‌ ಕಾರ್ಯಾಚರಣೆ ಮಾಡಲಾಗಿದ್ದು, ಈ ವೇಳೆ ವಶಪಡಿಸಿಕೊಂಡ ವಸ್ತುಗಳನ್ನೆಲ್ಲಾ ಪಾಲಿಕೆ, ಪುರಭವನ ಬಳಿ ರಾಶಿ ಹಾಕಲಾಗಿದೆ. ಇದನ್ನು ವಿಲೇವಾರಿಗೆ ಇನ್ನೂ ಟೆಂಡರ್‌ ವ್ಯವಸ್ಥೆ ಅಂತಿಮಗೊಂಡಿಲ್ಲ. ಇವುಗಳ ಸ್ಥಳಾಂತರಕ್ಕೂ ಜಾಗದ ಕೊರತೆ ಎದುರಾಗಿದೆ.

ಜಾಗದ ಕೊರತೆ :

ಸಾರಿಗೆ ಇಲಾಖೆಯಿಂದ ಮುಟ್ಟುಗೋಲು ಹಾಕಿದಂತಹ ವಾಹನ ಗಳನ್ನು ನಿಲ್ಲಿಸಲು ನಗರದಲ್ಲಿ ಜಾಗದ ಕೊರತೆ ಇದೆ. ಈ ಕುರಿತಂತೆ ಸರಕಾರದ ಗಮನವನ್ನೂ ಸೆಳೆಯಲಾಗಿದೆ. ಸದ್ಯ ನಗರದ ಕೆಪಿಟಿ ಬಳಿಯ ಎಫ್‌ಸಿ ಮೈದಾನದ ಒಂದು ಬದಿ ನಿಲ್ಲಿಸಲಾಗುತ್ತಿದೆ. ಇನ್ನು, ಕದ್ರಿ ಯಲ್ಲಿಯೂ ಕೆಲವು ವಾಹನಗಳನ್ನು ನಿಲ್ಲಿಸಲಾಗುತ್ತಿದೆ.  –  ಆರ್‌.ಎಂ. ವರ್ಣೇಕರ್‌, ಮಂಗಳೂರು ಆರ್‌ಟಿಒ

Advertisement

Udayavani is now on Telegram. Click here to join our channel and stay updated with the latest news.

Next