Advertisement

ಶವಸಂಸ್ಕಾರಕ್ಕೆ ಗ್ರಹಣ-ರಸ್ತೆ ಇಕ್ಕೆಲವೇ ಮಸಣ

11:40 AM Jan 11, 2020 | Suhan S |

ಕುಂದಗೋಳ: ಪ್ರತಿಯೊಬ್ಬನ ಬಾಳಿನ ಸಂಸ್ಕಾರಗಳಲ್ಲಿ ಕೊನೆಯದ್ದು ಶವಸಂಸ್ಕಾರ. ಅದೂ ಕೂಡ ನಿರಾತಂಕವಾಗಿ ಸಾಗದ ಪರಿಸ್ಥಿತಿ ತಾಲೂಕಿನ ಅನೇಕ ಕಡೆಗಳಲ್ಲಿದೆ. ಯಾರಾದರು ಸಾವನ್ನಪ್ಪಿದಾಗ ಸುಡಲು ಅಥವಾ ಹೂಳಲು ಸ್ಮಶಾನವಿಲ್ಲದೆ ರಸ್ತೆ ಬದಿಯಲ್ಲೇ ಶವ ಸಂಸ್ಕಾರ ಮಾಡುತ್ತಿರುವುದು ಬಹುತೇಕ ಗ್ರಾಮಗಳಲ್ಲಿ ಕಂಡುಬರುತ್ತಿದೆ.

Advertisement

ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಹಲವು ಗ್ರಾಮಗಳಿಗೆ ನಿರ್ದಿಷ್ಟ ಸ್ಮಶಾನ ಭೂಮಿ ಇಲ್ಲವಾಗಿದೆ. ಇದರಿಂದ ಶವಗಳನ್ನು ರಸ್ತೆಯ ಬದಿಯಲ್ಲಿಯೇ ಸುಡುತ್ತಿದ್ದು, ಇದನ್ನು ಕಂಡು ವಾಹನ ಸವಾರರು ಭಯದ ವಾತಾವರಣದಲ್ಲಿ ಸಂಚರಿಸುವಂತಾಗಿದೆ.

ಜನಸಂಖ್ಯಾನುಸಾರ ಸ್ಮಶಾನಗಳನ್ನು ರೂಪಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದರೂ ಇದುವರೆಗೂ ಈಕುರಿತು ಗಮನ ಹರಿಸದೇ ಇರುವುದರಿಂದ ಸಮಸ್ಯೆ ಹೆಮ್ಮರವಾಗಿ ಬೆಳೆದಿದೆ. ಅನೇಕ ಗ್ರಾಮಗಳಲ್ಲಿ ರಸ್ತೆ ಮಗ್ಗಲುಗಳೇ ಸ್ಮಶಾನ ಸದೃಶವಾಗಿವೆ. ಇನ್ನು ಕೆಲವು ಗ್ರಾಮಗಳಲ್ಲಿ ಹಳ್ಳ-ಕೊಳ್ಳಗಳ ಅಂಚು ಸ್ಮಶಾನವಾಗಿದೆ. ತಾಲೂಕಿನಲ್ಲಿ 57 ಗ್ರಾಮಗಳಿದ್ದು ಅದರಲ್ಲಿ ಕೇವಲ 28 ಗ್ರಾಮಗಳಲ್ಲಿ ಮಾತ್ರ ಸ್ಮಶಾನಗಳನ್ನು ರೂಪಿಸಿದ್ದಾರೆ. ಆದರೆ, ಅವುಗಳಲ್ಲೂ ಅಗತ್ಯ ಮೂಲಸೌಲಭ್ಯ ಕಲ್ಪಿಸಿಲ್ಲ. ಪ್ರತಿ ಗ್ರಾಮದಲ್ಲಿ 1,000 ಜನಸಂಖ್ಯೆಗೆ ಅನುಸಾರವಾಗಿ 20 ಗುಂಟೆ ಸ್ಮಶಾನ ರೂಪಿಸಬೇಕಾಗಿದೆ. ಜನಸಂಖ್ಯೆಗೆ ಅನುಸಾರವಾಗಿ2 ಎಕರೆ ವರೆಗೂ ವಿಸ್ತಾರದಲ್ಲಿ ಮೂಲಸೌಲಭ್ಯ ಒಳಗೊಂಡ ಸ್ಮಶಾನಗಳನ್ನು ರೂಪಿಸಬೇಕಾಗಿದೆ. ಆದರೆ ಇದುವರೆಗೂ ತಾಲೂಕಿನಲ್ಲಿ ದೊಡ್ಡ ದೊಡ್ಡ ಗ್ರಾಮಗಳಲ್ಲಿ ಸಹ ಸ್ಮಶಾನಗಳಿಲ್ಲದೆ ಸ್ವಂತ ಅಥವಾ ಸಂಬಂಧಿಕರ ಹೊಲಗಳಲ್ಲಿ ಅಂತ್ಯಸಂಸ್ಕಾರ ನಡೆಸುವ ಸನ್ನಿವೇಶ ಕಂಡುಬರುತ್ತಿದೆ. ಹೊಲವಿಲ್ಲದವರು ಊರಾಚೆ ರಸ್ತೆ ಪಕ್ಕದಲ್ಲಿ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದಾರೆ.

ಮಳೆಗಾಲದಲ್ಲಿ ಪರದಾಟ: ಬೇಸಿಗೆ ಹಾಗೂ ಚಳಿಗಾಲದಲ್ಲಿ ಮನೆಯಲ್ಲಿ ಯಾರಾದರು ಸತ್ತರೆ ಚಿಂತಿಸುವುದಿಲ್ಲ. ಆದರೆ ಮಳೆಗಾಲದಲ್ಲಿ ಯಾರಾದರು ಸತ್ತರೆ ಶವ ಸಂಸ್ಕಾರ ಮಾಡುವುದೇ ದೊಡ್ಡ ಸಾಹಸ ಕಾರ್ಯವಾಗಿದೆ. ಸ್ಮಶಾನ ಇಲ್ಲದ ಊರುಗಳಲ್ಲಿ ರಸ್ತೆ ಬದಿಯಲ್ಲಿ ಮಳೆ ನಿಲ್ಲುವವರೆಗೂ ಕಾದು ಟ್ರಾಕ್ಟರ್‌ ಟೈರ್‌ ಹಾಗೂ ಸೀಮೆಎಣ್ಣೆ-ಪೆಟ್ರೋಲ್‌ ಬಳಸಿ ಮಳೆಯ ಮಧ್ಯೆಯೇ ಶವ ಸಂಸ್ಕಾರ ಮಾಡುವ ದೃಶ್ಯ ಕಂಡು ಬರುತ್ತದೆ. ಒಂದೊಮ್ಮೆ ಜಡಿಮಳೆಇರುವಾಗ ಶವ ಸಂಸ್ಕಾರ ಮಾಡಲು ದಿನವಿಡೀ ಪರದಾಡುವಂತಾಗುತ್ತದೆ.

ತಾಲೂಕಿನಲ್ಲಿ ಕೇವಲ 28 ಗ್ರಾಮಗಳಲ್ಲಿ ಮಾತ್ರ ರುದ್ರಭೂಮಿ ಇದ್ದು, 29 ಗ್ರಾಮಗಳಲ್ಲಿ ಇದುವರೆಗೂ ಸ್ಮಶಾನ ರೂಪಗೊಂಡಿಲ್ಲ. ಅಲ್ಲಿನ ನಾಗರಿಕರು ಪಡುವ ಕಷ್ಟಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಗಳು ಇನ್ನಾದರೂ ಸ್ಪಂದಿಸಬೇಕಿದೆ. ಘಾಡ ನಿದ್ರೆಯಿಂದ ಎಚ್ಚೆತ್ತು ರುದ್ರಭೂಮಿಗೆ ವ್ಯವಸ್ಥೆ ಮಾಡಬೇಕಿದೆ.

Advertisement

ನಮ್ಮ ಪಂಚಾಯ್ತಿ ವ್ಯಾಪ್ತಿ ಜಿಗಳೂರ ಗ್ರಾಮದಲ್ಲಿ 32 ಎಕರೆ ಅರಣ್ಯ ಪ್ರದೇಶ ಹೊಂದಿದ್ದು, ಅದರಲ್ಲಿ ಹಿಂದು ಹಾಗೂ ಮುಸ್ಲಿಮರ ರುದ್ರಭೂಮಿಗಾಗಿ 2 ಎಕರೆ ಮಂಜೂರು ಮಾಡುವಂತೆ 2014-15ನೇ ಸಾಲಿನಲ್ಲಿಯೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದುವರೆಗೂ ಏನೂ ಪ್ರಯೋಜನವಾಗಿಲ್ಲ. ರಾಷ್ಟ್ರೀಯ ಹೆದ್ದಾರಿ ಬಳಿಯೇ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ.  –ಶಿವಾನಂದ ನವಲಗುಂದ, ರಾಮನಕೊಪ್ಪ ಗ್ರಾಪಂ ಸದಸ್ಯ

ನಮ್ಮ ಗ್ರಾಮದಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆಇದೆ. ಅಂತ್ಯಸಂಸ್ಕಾರಮಾಡಲು ಸ್ಮಶಾನದ ಕೊರತೆಯಿಂದಾಗಿ ರಸ್ತೆ ಬದಿಯಲ್ಲಿಯೇ ಶವಸಂಸ್ಕಾರ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗೆ ಹಾಗೂ ಜನಪ್ರತಿನಿಧಿಗೆ ಮನವಿ ಮಾಡಿಕೊಂಡರೂ ಏನೂ ಪ್ರಯೋಜನವಾಗಿಲ್ಲ. ಸರ್ಕಾರ ಇಚ್ಛಾಶಕ್ತಿ ತೋರಿದರೆ ಸ್ಥಳೀಯ ಆಡಳಿತದಿಂದ ಸಂಪೂರ್ಣ ಸಹಕಾರ ನೀಡುತ್ತೇವೆ. ಪ್ರಭುಗೌಡ ಶಂಕಾಗೌಡಶ್ಯಾನಿ, ಇಂಗಳಗಿ ಗ್ರಾಪಂ ಅಧ್ಯಕ್ಷ

 

ಶೀತಲ ಎಸ್‌. ಮುರಗಿ

Advertisement

Udayavani is now on Telegram. Click here to join our channel and stay updated with the latest news.

Next