Advertisement

ವಾರದ ಸಂತೆಗೆ ಜಾಗದ ಕೊರತೆ

09:31 AM Jul 15, 2019 | Suhan S |

ಹುಬ್ಬಳ್ಳಿ: ನಗರದ ಗೋಕುಲ ರಸ್ತೆ ಕೆಇಸಿ (ಕಿರ್ಲೋಸ್ಕರ್‌ ಇಲೆಕ್ಟ್ರಿಕ್‌ ಕಂಪನಿ) ಎದುರು ಕಳೆದ 20-25 ವರ್ಷಗಳಿಂದ ನಡೆಯುತ್ತಿದ್ದ ವಾರದ ಸಂತೆ (ರವಿವಾರದ ಸಂತೆ) ಮೂರು ವಾರಗಳಿಂದ ಸ್ಥಗಿತಗೊಂಡಿದ್ದು, ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ಕಾಯಿಪಲ್ಲೆ ಹಾಗೂ ಸಂತೆ ವ್ಯಾಪಾರಿಗಳು ಅತಂತ್ರರಾಗಿದ್ದಾರೆ.

Advertisement

ಕೆಇಸಿ ವಾರದ ಸಂತೆಗೆ ಕಲಘಟಗಿ ತಾಲೂಕಿನ ರೈತರು, ನಗರದ ಸುತ್ತಮುತ್ತಲಿನ ರೈತರು ಹಾಗೂ ಚಿಕ್ಕ ವ್ಯಾಪಾರಸ್ಥರು ಸುಮಾರು ಎರಡೂವರೆ ದಶಕಗಳಿಂದ ತಾವು ಬೆಳೆದ ಹಾಗೂ ಉತ್ಪಾದಿಸಿದ ವಸ್ತುಗಳನ್ನು ತಂದು ಮಾರಿ ಉಪಜೀವನ ನಡೆಸುತ್ತಿದ್ದರು. ಆದರೆ ಈ ಭಾಗದ ಕೆಲ ನಿವಾಸಿಗಳು ತಮ್ಮ ಮನೆ ಮುಂದೆ ವ್ಯಾಪಾರ ಮಾಡಕೂಡದೆಂದು ಆಕ್ಷೇಪಣೆ ವ್ಯಕ್ತಪಡಿಸಿದ್ದರಿಂದ ಈ ಸಂತೆ ಸ್ಥಗಿತಗೊಂಡಿದೆ.

ಸಂತೆಗೆ ನಿವಾಸಿಗಳ ಆಕ್ಷೇಪವೇನು?: ಕೆಇಸಿ ಎದುರು ಸುಮಾರು 25 ವರ್ಷಗಳಿಂದ ನಡೆಯುತ್ತಿದ್ದ ವಾರದ ರವಿವಾರ ಸಂತೆ ಮೊದಲು ಕೆಇಸಿ ಕಾಂಪೌಂಡ್‌ಗೆ ಹಚ್ಚಿಕೊಂಡು ಹಾಗೂ ಕೆಇಸಿ ಎದುರಿನ ಬಸ್‌ ನಿಲ್ದಾಣ ಬಳಿ ನಡೆಯುತ್ತಿತ್ತು. ನಂತರ ಈ ಪ್ರದೇಶದಲ್ಲಿ ಬಡಾವಣೆಗಳು ಹೆಚ್ಚಿದಂತೆ ಹಾಗೂ ನಿವಾಸಿಗಳ ಸಂಖ್ಯೆ ಹೆಚ್ಚಾದಂತೆ ವಾರದ ಸಂತೆ ವಿಸ್ತರಣೆಯಾಗುತ್ತ ಸಾಗಿತು.

ಕೆಇಸಿ ಎದುರು ಗಾಂಧಿನಗರ ಬೆಳೆದಂತೆಲ್ಲ ಇದರ ಸುತ್ತಲೂ ಇನ್ನಿತರೆ ಬಡಾವಣೆಗಳು ತಲೆ ಎತ್ತಿದವು. ಈ ಭಾಗದವರೆಲ್ಲ ಕೆಇಸಿಯ ವಾರದ ಸಂತೆಯೇ ಅವಲಂಬಿಸಬೇಕಾಯಿತು. ರೈತರು ತಾವು ಬೆಳೆದ ಕಾಯಿಪಲ್ಲೆ ಮಾರಲು ಸಂತೆಗೆ ಬರತೊಡಗಿದರು. ಅವರೆಲ್ಲ ಬಡಾವಣೆ ನಿವಾಸಿಗಳ ಮನೆ ಮುಂದೆಯೇ ಸಂತೆ ಹಚ್ಚಲು ಶುರು ಮಾಡಿದಂತೆಲ್ಲ ಈ ಭಾಗದ ನಿವಾಸಿಗಳಿಗೆ ತೊಂದರೆ ಆಗತೊಡಗಿತು.

ಗಾಂಧಿನಗರ ಹಾಗೂ ಸನ್ಮಾರ್ಗನಗರ ಸುತ್ತಮುತ್ತಲಿನ ನಿವಾಸಿಗಳು ವಾರದ ಸಂತೆಯಿಂದ ನಮ್ಮ ಕಾಲೊನಿ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ನಮ್ಮ ಮನೆ ಮುಂದೆ ವ್ಯಾಪಾರಿಗಳು ಕುಳಿತುಕೊಳ್ಳುವುದರಿಂದ ಆಕಸ್ಮಾತ್‌ ಏನಾದರೂ ಘಟನೆಗಳು ನಡೆದರೆ ವಾಹನ ಸಂಚಾರಕ್ಕೆ ಅಡಚಣೆಯಾಗಿ ತೊಂದರೆ ಅನುಭವಿಸುತ್ತಿದ್ದೇವೆ. ಕಾರಣ ಈ ಭಾಗದ ವಾರದ ಸಂತೆ ಸ್ಥಳಾಂತರಿಸಬೇಕೆಂದು ಪಾಲಿಕೆಯ ವಲಯ ಕಚೇರಿ ನಂ.7ರ ಸಹಾಯಕ ಆಯುಕ್ತರಿಗೆ ಮನವಿ ಮಾಡಿದರು.

Advertisement

ಇದೇ ವಿಷಯವಾಗಿ ಸಹಾಯಕ ಆಯುಕ್ತ ಪ್ರಕಾಶ ಗಾಳೆಮ್ಮನವರ ಗಾಂಧಿನಗರದ ಗಣಪತಿ ದೇವಸ್ಥಾನ ಸಮುದಾಯ ಭವನದಲ್ಲಿ ಗುರುವಾರ ಸಭೆ ನಡೆಸಿ ಜನರ ಅಭಿಪ್ರಾಯ ಪಡೆದರು. ಆಗಲೂ ಜನರು ಈ ಭಾಗದಲ್ಲಿ ವಾರದ ಸಂತೆ ಬೇಡವೆಂದು ತಿಳಿಸಿದ್ದಾರೆ. ಈ ವೇಳೆ ಕೆಲವರು ಸಂತೆ ಸ್ಥಳಾಂತರಿಸುವುದು ಬೇಡ. ನಮಗೆ ಅನುಕೂಲವಾಗಿದೆ ಎಂಬ ಅಭಿಪ್ರಾಯಕ್ಕೆ ಬಂದರು ಎಂದು ತಿಳಿದು ಬಂದಿದೆ. ಆದರೆ ಬಹುತೇಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ವಾರದ ಸಂತೆ ಕಳೆದ ಮೂರು ವಾರಗಳಿಂದ ಸ್ಥಗಿತಗೊಂಡಿದೆ. ಗೋಕುಲ ರಸ್ತೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಕಳೆದ ಮೂರು ವಾರಗಳಿಂದ ಪೊಲೀಸ್‌ ಬಂದೋಬಸ್ತ್ ಕೈಗೊಂಡಿದ್ದಾರೆ.

ಮಾರಾಟಗಾರರು ಸಹ ನಾವು ಕಳೆದ 25ವರ್ಷಗಳಿಂದ ಸಂತೆಯಲ್ಲಿ ಕಾಯಿಪಲ್ಲೆ, ವಸ್ತುಗಳನ್ನು ಮಾರುತ್ತಿದ್ದೇವೆ. ಈ ಜಾಗೆಯಿಂದ ನಮ್ಮನ್ನು ಸ್ಥಳಾಂತರಿಸಿದರೆ ಅನ್ಯಾಯ ಮಾಡಿದಂತಾಗುತ್ತದೆ. ನಮಗೆ ಇಲ್ಲಿಯೇ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕೆಂದು ಪಾಲಿಕೆ ಸಹಾಯಕ ಆಯುಕ್ತರಲ್ಲಿ ಮನವಿ ಮಾಡಿದ್ದಾರೆ.

ಕೆಇಸಿ ಎದುರು ನಡೆಯುತ್ತಿದ್ದ ವಾರದ ಸಂತೆ ಸ್ಥಳಾಂತರಿಸುವಂತೆ ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಹಾಗೂ ವ್ಯಾಪಾರಿಗಳು ಅಲ್ಲಿಯೇ ಸಂತೆ ಆರಂಭಿಸುವುದಾಗಿ ಹೇಳಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕಳೆದ ಮೂರು ವಾರಗಳಿಂದ ರವಿವಾರ ದಿನ ಸ್ಥಳದಲ್ಲಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದೆ.

•ದಿಲೀಪ ನಿಂಬಾಳ್ಕರ, ಇನ್‌ಸ್ಪೆಕ್ಟರ್‌, ಗೋಕುಲ ರಸ್ತೆ ಪೊಲೀಸ್‌ ಠಾಣೆ.

 

•ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next