Advertisement

ಗ್ರಂಥಾಲಯಕ್ಕೆ ಜಾಗದ ಕೊರತೆ!

12:47 PM Oct 18, 2019 | Team Udayavani |

ಮುಂಡರಗಿ: ಪಟ್ಟಣದ ಹೃದಯ ಭಾಗದ ಪುರಸಭೆಯ ಆವರಣದಲ್ಲಿರುವ ಸಾರ್ವಜನಿಕ ಗ್ರಂಥಾಲಯವು ಕಳೆದ 38 ವರ್ಷಗಳಿಂದ ಓದುಗರಿಗೆ, ಸಾಹಿತ್ಯಾಸಕ್ತರಿಗೆ ಸೇವೆ ನೀಡುತ್ತಾ ಬಂದಿದೆ.

Advertisement

ಮೊಬೈಲ್‌, ಇಂಟರ್‌ನೆಟ್‌ ಬಳಕೆಯ ಸಂದರ್ಭದಲ್ಲೂ ಪ್ರತಿ ದಿನವೂ ಓದುಗರ ಸಂಖ್ಯೆಯು ಹೆಚ್ಚುತ್ತಾ ಇದ್ದರೂ ಕೂಡಾ, ಯುವ ಓದುಗರ ಸಂಖ್ಯೆಯಲ್ಲಿ ಅಂತಹ ಏರುಗತಿ ಇಲ್ಲವಾಗಿದೆ. ಪ್ರತಿದಿನವೂ ಓದುಗರು ದಿನಪತ್ರಿಕೆ, ವಾರಪತ್ರಿಕೆ, ಮಾಸಿಕ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಇರುವ ಪತ್ರಿಕೆ ಓದಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಗ್ರಂಥಾಲಯ ಕಟ್ಟಡವು ಹಳೆಯ ಮಾದರಿ ಕಲ್ಲಿನ ಕಟ್ಟಡವಾಗಿದ್ದು, ಹೆಂಚಿನ ಮೇಲ್ಛಾವಣಿ ಹೊಂದಿದೆ. ಆದರೆ ಗ್ರಂಥಾಲಯದ ಬಹುಮುಖ್ಯವಾದ ಸಮಸ್ಯೆ ಏನೆಂದರೆ ಜಾಗೆಯ ಕೊರತೆ. ಗ್ರಂಥಾಲಯದ ಕಟ್ಟಡವು ಮಂಗಳೂರು ಹೆಂಚಿನ ಮೇಲ್ಛಾವಣಿಯಿಂದ ನಿರ್ಮಿಸಲಾಗಿದೆ.

ಕಲ್ಲಿನ ಕಟ್ಟಡವು ಗಟ್ಟಿ ಮುಟ್ಟಾಗಿದ್ದರೂ, ಕಟ್ಟಡದ ಅಗಲವು 15 ಅಡಿ, ಉದ್ದ, 30 ಅಡಿ ಇದ್ದು, ಜಾಗೆಯ ಕೊರತೆಯು ಎದ್ದು ಕಾಣುತ್ತದೆ. ಓದುಗರು ಕುಳಿತುಕೊಳ್ಳಲು ಜಾಗೆಯೇ ಇಲ್ಲದಂತೆ ಆಗಿದೆ. ಜತೆಗೆ ಪ್ರತಿವರ್ಷವು ಗ್ರಂಥಾಲಯಕ್ಕೆ ಬರುವ ಹೊಸ ಪುಸ್ತಕಗಳನ್ನು ಜೋಡಿಸಿ ಇಡಬೇಕೆಂದರೇ ಜಾಗೆಯ ಕೊರತೆಯಂತೂ ಇದ್ದೇ ಇದೆ.

1981ರಲ್ಲಿ ಪ್ರಾರಂಭ: ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ನಡೆಯುತ್ತಿರುವ ಈ ಗ್ರಂಥಾಲಯವು ಈಗಿರುವ ಪುರಸಭೆಯ ಕಟ್ಟಡದಲ್ಲಿಯೇ ಪ್ರಾರಂಭವಾಗಿದೆ. ಆನಂತರ 1984ರಲ್ಲಿ ಪುರಸಭೆಯವರು ಈ ಕಟ್ಟಡವನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಈ ಪುರಾತನ ಕಟ್ಟಡವು ಕಾಲಕ್ಕೆ ಅನುಗುಣವಾಗಿ ಸುಣ್ಣಬಣ್ಣಗಳಿಂದ ಅಲಂಕೃತಗೊಂಡು, ಒಡೆದು ಹೋದ ಮೇಲ್ಛಾವಣಿಯ ಹೆಂಚುಗಳನ್ನು ಬದಲಾಯಿಸುತ್ತಾ ಬಂದಿರುವುದರಿಂದ ಗಟ್ಟಿಮುಟ್ಟಾಗಿ ನಿಂತುಕೊಂಡು ಕಾಲದ ಯಾವುದೇ ಹೊಡೆತಕ್ಕೂ ಮುಕ್ಕಾಗದೇ ಅರಿವಿನ ಜ್ಞಾನವನ್ನು ಪ್ರಸಾರ ಮಾಡತೊಡಗಿದೆ.

ಮೂವತ್ತು ಸಾವಿರ ಪುಸ್ತಕಗಳು: ಪಟ್ಟಣದ ಈ ಸಾರ್ವಜನಿಕ ಗ್ರಂಥಾಲಯದಲ್ಲಿ 28,917 ಪುಸ್ತಕಗಳು ಇದ್ದು, ಇನ್ನೂ ಕೂಡಾ ಹೊಸದಾಗಿ ಬಂದಿರುವ ಪುಸ್ತಕಗಳನ್ನು ವಹಿಯಲ್ಲಿ ದಾಖಲಿಸುವ ಕಾರ್ಯವು ನಡೆಯುತ್ತಿದ್ದೂ, ಏನಿಲ್ಲವೆಂದರೂ ಕನಿಷ್ಟ ಮೂವತ್ತು ಸಾವಿರ ಪುಸ್ತಕಗಳ ಭಂಡಾರವೇ ಈ ಗ್ರಂಥಾಲಯದ ಒಡಲಿನಲ್ಲಿ ಅಡಗಿದೆ.

Advertisement

ಜೀವಮಾನದ ಸದಸ್ಯರು: ಈ ಗ್ರಂಥಾಲಯಕ್ಕೆ ಜೀವಮಾನದ ಸದಸ್ಯರ ಸಂಖ್ಯೆಯು 699 ಇದ್ದು, ಪ್ರತಿದಿನವೂ ಎನಿಲ್ಲವೆಂದರೂ ಕನಿಷ್ಟ ಹತ್ತು ಜನ ಸದಸ್ಯರು ಪುಸ್ತಕಗಳನ್ನು ಎರವಲು ಪಡೆಯುತ್ತಾರೆ. ಪಟ್ಟಣದ ಜನಸಂಖ್ಯೆಯು ಮೂವತ್ತು ಸಾವಿರದಷ್ಟಿದ್ದು, ಜೀವಮಾನದ ಸದಸ್ಯರು ಕನಿಷ್ಟ ಮೂರು ಸಾವಿರದಷ್ಟು ಇರಬೇಕಾಗಿತ್ತು. ಆದರೆ ಯುವಕರು, ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ತಲೆ ತೂರಿಸಿಕೊಂಡಿರುವುದರಿಂದ ಗ್ರಂಥಾಲಯದತ್ತ ಮುಖ ಮಾಡುವದು ಕಷ್ಟದ ಮಾತಾಗಿದೆ.

ಓದುಗರು-ದಿನಪತ್ರಿಕೆಗಳು: ಗ್ರಂಥಾಲಯಕ್ಕೆ ರಾಜ್ಯ, ಜಿಲ್ಲೆ, ಸ್ಥಳೀಯ ಪತ್ರಿಕೆಗಳು ಸೇರಿದಂತೆ 13 ಪತ್ರಿಕೆಗಳು ಬರುತ್ತವೆ. ಆ ಪತ್ರಿಕೆಗಳಲ್ಲಿ 12 ಕನ್ನಡ ಮತ್ತು 1 ಇಂಗ್ಲಿಷ್‌ ಭಾಷಾ ಪತ್ರಿಕೆಯು ಇದೆ. ಜತೆಗೆ ನಾಲ್ಕು ವಾರಪತ್ರಿಕೆಗಳು, ಮಾಸಿಕ ಪತ್ರಿಕೆಗಳು, ಸ್ಪರ್ಧಾತ್ಮಕ ಪರೀಕ್ಷೆಯ ಮಾಹಿತಿಯುಳ್ಳ ಪತ್ರಿಕೆಗಳು ಕೂಡಾ ಇವೆ. ಗ್ರಂಥಾಲಯಕ್ಕೆ ಪ್ರತಿದಿನವು ಪತ್ರಿಕೆಗಳು ಓದಲು ಕನಿಷ್ಟ 50ರಿಂದ 80 ಜನ ಬರುತ್ತಾರೆ. ಪುರಸಭೆಯ ವ್ಯಾಪ್ತಿಯ ಜನಸಂಖ್ಯೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೇ ಓದುಗರ ಸಂಖ್ಯೆಯು ಕಡಿಮೆಯಂತೂ ಇದೆ. ಈಗಿರುವ ಗ್ರಂಥಾಲಯದ ಕಟ್ಟಡವು ಗಟ್ಟಿ ಮುಟ್ಟಾಗಿದ್ದರೂ, ಸ್ಥಳಾವಕಾಶದ ಕೊರತೆಯಂತೂ ಇದೆ. ಆದ್ದರಿಂದ ಸಾರ್ವಜನಿಕ ಗ್ರಂಥಾಲಯದ ಅಧಿಕಾರಿಗಳು ಇತ್ತ ಕಡೆಗೆ ಗಮನ ಹರಿಸಿ, ಪಕ್ಕದಲ್ಲಿ ಇರುವ ಪುರಸಭೆಯ ಕಟ್ಟಡ ಪಡೆದುಕೊಂಡು ಗ್ರಂಥಾಲಯ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.

 

-ಹು.ಬಾ. ವಡ್ಡಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next