Advertisement

ರಾಜೂರಲ್ಲಿ ರಾರಾಜಿಸದ ಗ್ರಂಥಾಲಯ

02:23 PM Nov 06, 2019 | Suhan S |

ಗಜೇಂದ್ರಗಡ: ಪುಸ್ತಗಳನ್ನು ಇಡಲು ಸ್ಥಳವಿಲ್ಲ, ನಾಲ್ಕು ಖುರ್ಚಿಗಳ ಹೊರತುಪಡಿಸಿ ಐದನೇ ಖುರ್ಚಿ ಇಡಲೂ ಸ್ಥಳವಿಲ್ಲ, ವಿದ್ಯುತ್‌ ಸಂಪರ್ಕವಂತೂ ಇಲ್ಲವೇ ಇಲ್ಲ. ಹೀಗೆ ಇಲ್ಲಗಳ ನಡುವೆ ಸಮೀಪದ ರಾಜೂರ ಗ್ರಾಮದ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿದೆ.

Advertisement

ರಾಜೂರು ಗ್ರಂಥಾಲಯ ಹಲವಾರು ವರ್ಷಗಳಿಂದ 10 ಅಡಿ ಅಗಲ, 10 ಅಡಿ ಉದ್ದದ ಸಣ್ಣ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಓದುಗರಿಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಗ್ರಂಥಾಲಯ ಕೊಠಡಿ ಮೊದಲೇ ತೀರಾ ಕಿರಿದಾಗಿದ್ದು, ಅದರಲ್ಲಿಯೇ 3 ಅಲ್ಮೇರಾ, 1 ರ್ಯಾಕ್‌ ಇಡಲಾಗಿದೆ. ಕುಳಿತು ಓದಲು ಜಾಗವಿಲ್ಲದ್ದರಿಂದ ಅದೆಷ್ಟೋ ಸಲ ಓದುಗರು ಮರಳಿ ಹೋದ ಉದಾಹರಣೆಗಳಿವೆ. ಗ್ರಂಥಾಲಯದಲ್ಲಿ ಕೇವಲ 5 ರಿಂದ 6 ಖುರ್ಚಿಗಳು ಮಾತ್ರ ಇದ್ದು, ಅವುಗಳನ್ನಿಡಲೂ ಸಹ ಜಾಗವಿಲ್ಲ. ಅಷ್ಟೊಂದು ಕಿರಿದಾದ ಕೊಠಡಿಯಲ್ಲಿ ಗ್ರಂಥಾಲಯ ನರಕಯಾತನೆ ಅನುಭವಿಸುತ್ತಿದೆ. 1994ರಿಂದ ಆರಂಭವಾಗಿರುವ ಈ ಗ್ರಂಥಾಲಯದಲ್ಲಿ 115ಕ್ಕೂ ಅ ಧಿಕ ಸದಸ್ಯರಿದ್ದು, 3311 ಪುಸ್ತಕಗಳಿವೆ. ಆದರೆ ಸ್ಥಳಾವಕಾಶ ಕೊರತೆಯಿಂದ ಬಹುತೇಕ ಪುಸ್ತಕಗಳು ಅಲ್ಮೇರಾ ಸೇರಿಕೊಂಡಿವೆ.

ಧೂಳು ಹಿಡಿದ ಪುಸ್ತಕಗಳು: ಸೂಕ್ತ ಕಟ್ಟಡ ಕೊರತೆಯಿಂದ ಪುಸ್ತಕಗಳು ಓದುಗರ ಕೈಸೇರುತ್ತಿಲ್ಲ. ಪುಸ್ತಕಗಳನ್ನು ಮುಕ್ತವಾಗಿ ತೆರೆದಿಡಲು ರ್ಯಾಕ್‌ ಗಳಲ್ಲಿಲ್ಲ. ಜಾಗ ಇಲ್ಲದ್ದರಿಂದ 3 ಸಾವಿರಕ್ಕೂ ಅಧಿಕ ಪುಸ್ತಕಗಳು ಅಲ್ಮೇರಾ ಸೇರಿವೆ.

ಸ್ಪರ್ಧಾತ್ಮಕ ಪೂರಕ ಪುಸ್ತಕಗಳು ಬೇಕು: ಸ್ಪರ್ಧಾತ್ಮಕಪರೀಕ್ಷೆ ಬರೆಯುವ ಸಾಕಷ್ಟು ವಿದ್ಯಾರ್ಥಿಗಳು ಗ್ರಂಥಾಲಯಗಳನ್ನೇ ಅವಲಂಬಿಸಿರುವುದರಿಂದ ಅನುದಾನ ಕೊರತೆಯಿಂದ ರಾಜೂರ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪುಸ್ತಕಗಳನ್ನು ಕೊಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿಯಮಿತವಾಗಿ ಹಣ ಬಿಡುಗಡೆಯಾದರೆ ಈ ತೊಂದರೆ ತಪ್ಪುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಪತ್ರಿಕೆ ಖರೀದಿಗೆ ಕೇವಲ 400 ರುಪಾಯಿ: ದಿನಪತ್ರಿಕೆಗಳ ಖರೀದಿಗೆ ತಿಂಗಳಿಗೆ 400 ಮಾತ್ರ ಬಿಡುಗಡೆ ಮಾಡಲಾಗುತ್ತದೆ. ಆ ಹಣದಲ್ಲಿ ಕೇವಲ ಮೂರು ಪತ್ರಿಕೆಗಳನ್ನು ಸಹ ಖರೀದಿಸಲಾಗುತ್ತಿಲ್ಲ. ಇನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿ ಸಿದ ಪತ್ರಿಕೆ ಖರೀದಿ ದೂರದ ಮಾತು. ಆದ್ದರಿಂದ ಈ ಹಣವನ್ನು ಕನಿಷ್ಠ 800 ರೂ.ಗಳಿಗೆ ಹೆಚ್ಚಿಸಲು ಮುಂದಾಗಬೇಕು ಎನ್ನುವುದು ಗ್ರಂಥಪಾಲಕರ ಸಾಮೂಹಿಕ ಮನವಿ.

Advertisement

ಗ್ರಂಥಾಲಯದಲ್ಲಿ ಪತ್ರಿಕೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಕ್ಕಾಗಿ ಕೇವಲ 400 ರೂಪಾಯಿಗಳನ್ನು ನೀಡಲಾಗುತ್ತಿದೆ. ಇದು ದಿನಪತ್ರಿಕೆಗೂ ಸಾಕಾಗಲ್ಲ. ಹೀಗಾಗಿ ಸ್ಪರ್ಧಾತ್ಮಕ ಪುಸ್ತಕಗಳಿಗಾಗಿ ಯುವಕರು ನಿತ್ಯ ಮನವಿ ಮಾಡುತ್ತಿದ್ದಾರೆ. ಅವುಗಳ ಪೂರೈಕೆಗೆ ಇಲಾಖೆ ಮುಂದಾಗಬೇಕು.ಎಸ್‌.ವಿ ಪಾಟೀಲ, ರಾಜೂರ ಗ್ರಂಥಪಾಲಕ

 

-ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next