ಬೆಂಗಳೂರು: ಚರ್ಮ ದಾನಿಗಳು ಹಿಂದೇಟು ಹಾಕುತ್ತಿರುವುದರಿಂದ ನಗರದ ವಿಕ್ಟೋರಿಯಾ ಸ್ಕೀನ್ ಬ್ಯಾಂಕ್‌ನಲ್ಲಿ ಚರ್ಮದ ಕೊರತೆ ಎದುರಾಗಿದೆ. ಜಾಗೃತಿ ಕೊರತೆಯಿಂದ ಚರ್ಮ ದಾನಕ್ಕೆ ಹಿಂದೇಟು ಹಾಕಲಾಗುತ್ತಿದ್ದು ಇದರಿಂದಾಗಿ ಸ್ಕೀನ್ ಬ್ಯಾಂಕ್‌ನಲ್ಲಿ ಚರ್ಮ ಸಂಗ್ರಹಣೆಗೆ ಹಿನ್ನಡೆಯಾಗಿದೆ. ಕಳೆದ ಮೂರು ವರ್ಷದ ಅವಧಿಯಲ್ಲಿ 34 ಮಂದಿ ಮಾತ್ರ ಚರ್ಮ ದಾನ ಮಾಡಿದ್ದಾರೆ.
234 ರೋಗಿಗಳಿಗೆ ತುರ್ತು ಚಿಕಿತ್ಸೆಗೆ ಚರ್ಮದ ಅಗತ್ಯ ವಿತ್ತು. ಅವರಲ್ಲಿ 145 ದಾನಿಗಳ ಚರ್ಮ ಬಳಸಿ 128 ಮಂದಿಗೆ ಮಾತ್ರ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಬೆಂಕಿ ಅವಘಡ ಹಾಗೂ ರಸ್ತೆ ಅಪಘಾತ ಪ್ರಕ ರಣಗಳ ಗಾಯಾಳುಗಳಿಗೆ ಚರ್ಮ ಕಸಿ ಚಿಕಿತ್ಸೆ ಅಗತ್ಯ. ಶೇ. 25-30ರಷ್ಟು ಸುಟ್ಟ ಗಾಯಗಳಾದಲ್ಲಿ ರೋಗಿಯ ದೇಹದ ಇತರೆ ಭಾಗದಿಂದ ಚರ್ಮ ತೆಗೆದು ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಆದರೆ ಶೇ. 30ಕ್ಕಿಂತ ಹೆಚ್ಚು ಸುಟ್ಟಗಾಯಗಳಾದ ರೋಗಿಗಳಿಗೆ ದಾನಿಗಳ ಚರ್ಮ ಬಳಸಲಾಗುತ್ತದೆ. ಆದರೆ ಪ್ರಸ್ತುತ ಚರ್ಮ ನೀಡಲು ದಾನಿಗಳು ಮುಂದೆ ಬಾರದ ಕಾರಣ ಶೇ 80ರಷ್ಟು ಗಾಯಾಳುಗಳು ಚರ್ಮ ಕಸಿ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ ಎಂದು ವೈದ್ಯರು ತಿಳಿಸುತ್ತಾರೆ.
ಸಹಾಯವಾಣಿ 080-26703633, 82775 76147, 080-26701150 ಕರೆ ಮಾಡ ಬಹುದಾಗಿದೆ. ಮೃತ ದಾನಿ ಇರುವ ಸ್ಥಳಕ್ಕೆ ಸ್ಕೀನ್ ಬ್ಯಾಂಕ್ ಸಿಬ್ಬಂದಿ ಆಗಮಿಸಿ ಚರ್ಮ ಸಂಗ್ರಹಿಸಲಿದ್ದಾರೆ ಎಂದು ಹೇಳುತ್ತಾರೆ. 18ವರ್ಷ ಮೇಲ್ಪಟ್ಟ ವ್ಯಕ್ತಿಯ ಮರಣ ಹೊಂದಿದ 6ಗಂಟೆಯೊಳಗೆ ಆರೋಗ್ಯಕರವಾದ ವ್ಯಕ್ತಿಯ ಚರ್ಮ ಚಿಕಿತ್ಸೆಗೆ ಯೋಗ್ಯ. ಎಚ್‌ಐವಿ, ಎಚ್‌ಸಿವಿ, ಚರ್ಮದ ಕ್ಯಾನ್ಸರ್ ಇಲ್ಲದ ದಾನಿಗಳು ಸ್ಕೀನ್ ದಾನ ಮಾಡಬಹುದು. ದಾನಿಯ ತೊಡೆ ಹಾಗೂ ಕಾಲಿನ ಭಾಗದ ಚರ್ಮದ ಮೇಲ್ಪದರವನ್ನು ಚರ್ಮವನ್ನು 30ರಿಂದ 40 ನಿಮಿಷದಲ್ಲಿ ತೆಗೆಯಲಾಗುತ್ತದೆ. ಈ ವೇಳೆ ರಕ್ತ ಸ್ರಾವ ಹಾಗೂ ದೇಹ ವಿರೂಪವಾಗುವುದಿಲ್ಲ. ಈ ಚರ್ಮ ಸಂಸ್ಕರಿಸಲು ಸುಮಾರು 30ರಿಂದ 45ದಿನಗಳ ಅಗತ್ಯವಿದೆ. ಸಂಸ್ಕರಿಸಿದ ಚರ್ಮವನ್ನು 5ವರ್ಷಗಳ ವರೆಗೆ ಜೀವತಾವಧಿ ಇದೆ.
ವಿಕ್ಟೋರಿಯಾ ಆಸ್ಪತ್ರೆಯ ಸ್ಕಿನ್ ಬ್ಯಾಂಕ್‌ಗೆ ಕೇವಲ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೇ ಹೊರ ರಾಜ್ಯವಾದ ಆಂಧ್ರ ಪ್ರದೇಶದಿಂದ ಸಹ ತುರ್ತು ಚಿಕಿತ್ಸೆಗೆ ಅಗತ್ಯವಿರುವ ಸ್ಕಿನ್ ಬೇಡಿಕೆ ಇದೆ. ಮೃತ ವ್ಯಕ್ತಿಗಳ ಮನೆಯವರು ಚರ್ಮ ದಾನಕ್ಕೆ ಮುಂದಾಗಬೇಕು.
– ಡಾ. ರಮೇಶ್ ಕೆ.ಟಿ., ಮುಖ್ಯಸ್ಥರು, ಪ್ಲಾಸ್ಟಿಕ್ ಸರ್ಜರಿ ವಿಭಾಗ, ವಿಕ್ಟೋರಿಯ ಆಸ್ಪತ್ರೆ