ಚಿಕ್ಕಬಳ್ಳಾಪುರ: ಮುಂಗಾರು ಹಂಗಾಮಿ ನಲ್ಲಿ ಬಿತ್ತನೆ ಸಮಯಕ್ಕೆ ಸರಿಯಗಿ ಮಳೆ ಕೈ ಕೊಟ್ಟಿದ್ದರಿಂದ ಕಂಗಾಲಾಗಿರುವ ರೈತರಿಗೆ ಕೃಷಿ ಇಲಾಖೆ ಹೊಸ ಬೆಳೆ ಪರಿಚಯಿಸುವ ಮಹತ್ವಕಾಂಕ್ಷಿ ಯೋಜನೆ ರೂಪಿಸಿದ್ದು, ಹಿಂಗಾರು ಮಳೆ ಆಗುವ ಆಶಾಕಿರಣದೊಂದಿಗೆ ಜಿಲ್ಲೆಯಲ್ಲಿ ಹೊಸ ದಾಗಿ ಕಡಲೇ ಕಾಳು ಬಿತ್ತನೆಗೆ ಸದ್ದಿಲ್ಲದೇ ಸಜ್ಜಾಗುತ್ತಿದೆ.
ಹೌದು, ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದ ಬರ ಖಾಯಂ ಆಗಿದ್ದು, ಇಲ್ಲಿವರೆಗೂ ಜಿಲ್ಲೆಯಲ್ಲಿ ಶೇ.52 ರಷ್ಟು ಮಾತ್ರ ಬಿತ್ತನೆ ಗುರಿ ಸಾಧಿಸಿದ್ದು ಇನ್ನೂ ಶೇ.48 ರಷ್ಟು ಬಿತ್ತನೆ ಕಾರ್ಯ ಜಿಲ್ಲೆಯಲ್ಲಿ ಮಳೆರಾಯನ ಕೃಪೆ ತೋರದ ಕಾರಣ ಆಗಿಲ್ಲ. ಹೀಗಾಗಿ ರೈತರಿಗೆ ಹಿಂಗಾರು ಮಳೆಯಾದರೂ ಕೈ ಹಿಡಿಯಬಹುದೆಂಬ ಲೆಕ್ಕಾಚಾರದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಕಡಲೆ ಕಾಳು ಬಿತ್ತನೆಗೆ ಕೃಷಿ ಇಲಾಖೆ ಮುಂದಾಗಿದೆ.
200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ: ಈ ವರ್ಷ ಪ್ರಾಯೋಗಿಕವಾಗಿ ಕಡಲೆ ಕಾಳು ಬೆಳೆಯಲು ರೈತರಿಗೆ ಪ್ರೋತ್ಸಾಹಿಸಲು ಮುಂದಾಗಿರುವ ಕೃಷಿ ಇಲಾಖೆ ಬರೋಬ್ಬರಿ 200 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಈ ವರ್ಷ ಕಡಲೆ ಕಾಳು ಬಿತ್ತನೆಗೆ ಯೋಜನೆ ರೂಪಿಸಿದೆ. ಕೃಷಿ ಇಲಾಖೆಯಿಂದ ಆಸಕ್ತ ರೈತರಿಗೆ ಉಚಿತವಾಗಿ ಕಡಲೆ ಕಾಳ ಬಿತ್ತನೆ ಬೀಜ ವಿತರಣೆಗೂ ಮುಂದಾಗಿದ್ದು, ಶೇ.100 ರಷ್ಟು ಸಬ್ಸಿಡಿ ದರದಲ್ಲಿ ರೈತರಿಗೆ ಕಡಲೇ ಕಾಳ ಬಿತ್ತನೆ ಬೀಜ ಉಚಿತವಾಗಿ ಸಿಗಲಿದೆ. ಕಪ್ಪು ಮಿಶ್ರಿತ ಮಣ್ಣಿನಲ್ಲಿ ಮಾತ್ರ ಈ ಬೆಳೆ ಬರುವ ಹಿನ್ನಲೆಯಲ್ಲಿ ಈ ವರ್ಷ 200 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲು ನಿರ್ಧರಿಸಿದ್ದು, ಸೆಪ್ಪೆಂಬರ್ ಅಂತ್ಯಕ್ಕೆ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಬಿತ್ತನೆ ಕಾರ್ಯಕ್ಕೆ ಕೃಷಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಹುರುಳಿಗೂ ಆದ್ಯತೆ: ಜಿಲ್ಲೆಯಲ್ಲಿ ಅರ್ಧಕ್ಕರ್ಧ ಬಿತ್ತನೆ ಕುಸಿದಿರುವ ಪರಿಣಾಮ ಜಿಲ್ಲೆಯ ರೈತರು ಈಗಾಗಲೇ ಪರ್ಯಾಯ ಬೆಳೆಯಾಗಿ ಹುರುಳಿ ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ಆದರೆ ಕೃಷಿ ಇಲಾಖೆ ಕಡಲೇ ಕಾಳು ಬೆಳೆಯನ್ನು ಪರ್ಯಾಯ ಬೆಳೆಯಾಗಿ ರೈತರಿಗೆ ಪ್ರೋತ್ಸಾಹಿಸಲು ವಿಶೇಷ ಆಸಕ್ತಿ ವಹಿಸಿದ್ದು, ಈಗಾಗಲೇ ಜಿಲ್ಲೆಗೆ ಅವಶ್ಯಕವಾಗಿ ಬೇಕಾದ ಕಡಲೆ ಕಾಳು ಬಿತ್ತನೆ ಬೀಜ ಸೇರಿದಂತೆ ಪೋಷಕಾಂಶಗಳನ್ನು ತರಿಸಿಕೊಳ್ಳುತ್ತಿದೆ. ಇದಕ್ಕಾಗಿ ಕೃಷಿ ಇಲಾಖೆ ಅಧಿಕಾರಿಗಳಿಗೂ ಕೂಡ ಒಂದು ಹಂತದಲ್ಲಿ ತಾಂತ್ರಿಕ ತರಬೇತಿಗಳನ್ನು ನೀಡುವ ಮೂಲಕ ರೈತರ ಹೊಲಗಳಲ್ಲಿ ಕಡಲೇ ಕಾಳು ಬಿತ್ತನೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತರಬೇತಿ ನೀಡಲಾಗಿದೆ. ಸೆಪ್ಟೆಂಬರ್ ಅಂತ್ಯದ ವೇಳೆ ಜಿಲ್ಲೆಯಲ್ಲಿ ಕಡಲೇ ಕಾಳು ಬಿತ್ತನೆ ಕಾರ್ಯ ಶುರುವಾಗಲಿದೆ.
ಪರ್ಯಾಯ ಬೆಳೆ ಬಗ್ಗೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಹೇಳಿದ್ದೇನು?: ಕಳೆದ ಬಾರಿ ಕೆಲವೊಂದು ಕಡೆ ಕಡಲೆ ಕಾಳು ಬಿತ್ತನೆ ಆಗಿದ್ದು ಉತ್ತಮ ಫಸಲು ಬಂದಿತ್ತು. ಆದರೆ ಈ ವರ್ಷ ತೀವ್ರ ಮಳೆ ಕೊರತೆಯಿಂದಾಗಿ ಬಿತ್ತನೆ ಪ್ರದೇಶ ಹಾಗೆ ಉಳಿದುಕೊಂಡಿದೆ. ರೈತರಿಗೆ ಈ ವರ್ಷ ಪರ್ಯಾಯ ಬೆಳೆಯಾಗಿ ಹುರುಳಿ ಜತೆಗೆ ಕಡಲೇ ಕಾಳು ಬಿತ್ತನೆಗೆ ಪ್ರೋತ್ಸಾಹಿಸಲು ಕೃಷಿ ಇಲಾಖೆ ನಿರ್ಧರಿಸಿದ್ದು, ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ಈ ವರ್ಷ ಬಿತ್ತನೆ ಗುರಿ ಹೊಂದಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಶೇ.100 ರಷ್ಟು ಸಬ್ಸಿಡಿ ದರದಲ್ಲಿ ಕಡಲೇ ಕಾಳು ಬಿತ್ತನೆ ಬೀಜಗಳನ್ನು ಆಸಕ್ತ ರೈತರಿಗೆ ವಿತರಿಸಲಾಗುವುದು. ಪ್ರಾತ್ಯಕ್ಷಿಕೆಯಡಿ ಕಡಲೇ ಕಾಳು ಬೆಳೆಯಲು ರೈತರಿಗೆ ಪ್ರೋತ್ಸಾಹಿಸಲಾಗುವುದು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ ಮಂಗಳವಾರ ಉದಯವಾಣಿಗೆ ಮಾಹಿತಿ ನೀಡಿದರು.
ಕಡಲೆ ಕಾಳಿನಲ್ಲಿ ಉತ್ತಮ ಪ್ರೋಟೀನ್: ಕಡಲೇ ಕಾಳು ಕೂಡ ಪೌಷ್ಟಿಕ ಆಹಾರದಲ್ಲಿ ಇದು ಸಹ ಒಂದು. ಅದರಲ್ಲೂ ಹೆಚ್ಚು ಪ್ರೋಟೀನ್ ಅಂಶ ಇರುವ ಕಾಳುಗೆ ಜಾಗತಿಕವಾಗಿ ಕೂಡ ಬೇಡಿಕೆ. ಇದರ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೃಷಿ ಇಲಾಖೆ ರೈತರಿಗೆ ಒಂದು ರೀತಿ ಕಡಲೇ ಕಾಳುನ್ನು ವಾಣಿಜ್ಯ ಬೆಳೆಯಾಗಿ ಹಾಗೂ ಸ್ವಂತಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಪ್ರೋತ್ಸಾಹಿಸಲು ಈಗ ಮುಂದಾಗಿದ್ದು ಪರ್ಯಾಯ ಬೆಳೆಯಾಗಿ ಜಿಲ್ಲೆಗೆ ಪರಿಚಯಿಸುತ್ತಿರುವ ಕೃಷಿ ಇಲಾಖೆ ಕಾರ್ಯಕ್ಕೆ ರೈತರ ಸ್ಪಂದನೆ ಹೇಗೆ ಇರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
– ಕಾಗತಿ ನಾಗರಾಜಪ್ಪ