ರಾಜ್ಯದಲ್ಲಿ ಮತ್ತೆ ಮಳೆ ಕೊರತೆ ಕಾಣಿಸಿದ್ದು, ಬರಗಾಲ ಎದುರಾಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ. ಜುಲೈಯಲ್ಲಿ ರಾಜ್ಯಾದ್ಯಂತ ಭಾರೀ ಮಳೆ ಬಂದಿದೆ. ಆದರೆ ಜೂನ್‌ನಲ್ಲಿ ತಡವಾಗಿ ಮುಂಗಾರು ಆರಂಭವಾಗಿದ್ದು, ಸರಿಯಾಗಿ ಮಳೆಯೂ ಆಗಿರಲಿಲ್ಲ. ಈ ಕೊರತೆಯನ್ನು ಜುಲೈ ತಿಂಗಳಲ್ಲಿ ಸುರಿದ ಮಳೆ ನೀಗಿಸಿತ್ತು. ಈಗ ಆಗಸ್ಟ್‌ನಲ್ಲಿ ರಾಜ್ಯದೆಲ್ಲೆಡೆ ಮಳೆ ಕೊರತೆ ಕಾಣಿಸುತ್ತಿದ್ದು, ಬಿಸಿಲ ಝಳವೂ ಹೆಚ್ಚಾಗಿದೆ.
ಸದ್ಯದಲ್ಲಿ ರಾಜ್ಯ ಅಪಾಯಕಾರಿ ಪರಿಸ್ಥಿತಿ ಎದುರಿಸುತ್ತಿದೆ. ಒಂದು ಕಡೆ ಮಳೆ ಕಡಿಮೆಯಾಗಿದ್ದರೆ, ಬಿಸಿಲ ಝಳ ಹೆಚ್ಚಳದಿಂದಾಗಿ ಪೈರು ಒಣಗುತ್ತಿವೆ. ಬಿತ್ತನೆ ಮಾಡಿದ್ದ ರೈತ ಈಗ ಕಂಗಾಲಾಗಿ ಕುಳಿತಿದ್ದಾನೆ. ಆದರೆ ಜುಲೈ ತಿಂಗಳಲ್ಲಿ ಮತ್ತು ಆಗಾಗ್ಗೆ ಬಂದು ಹೋಗುತ್ತಿರುವ ಮಳೆ, ಬರಗಾಲದ ಘೋಷಣೆಗೂ ಅಡ್ಡಿ ಮಾಡುತ್ತಿದೆ.
ರಾಜ್ಯದಲ್ಲಿ ಆಗಸ್ಟ್‌ನಲ್ಲಿ ಶೇ.70ರಷ್ಟು ಮಳೆ ಕೊರತೆ ಕಂಡಿದೆ. ಕಳೆದ 10 ವರ್ಷಗಳಲ್ಲೇ ದಾಖಲೆಯ ತಾಪಮಾನವೂ ಕಾಣಿಸಿಕೊಂಡಿದೆ. ಅಲ್ಲದೆ ಜೂನ್‌ನಿಂದ ಇಲ್ಲಿವರೆಗೆ ಶೇ.25ರಷ್ಟು ಮಳೆ ಕೊರತೆ ಕಾಣಿಸಿಕೊಂಡಿದೆ. ದಕ್ಷಿಣ ಒಳನಾಡಿನಲ್ಲಿ ಶೇ.70, ಉತ್ತರ ಒಳನಾಡು ಶೇ.74, ಮಲೆನಾಡು ಶೇ.81, ಕರಾವಳಿ ಶೇ.73ರಷ್ಟು ಮಳೆ ಕೊರತೆ ಕಾಣಿಸಿಕೊಂಡಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕ ಹೊರತುಪಡಿಸಿದರೆ, ಮಧ್ಯಕರ್ನಾಟಕ, ಬೆಂಗಳೂರು, ಮೈಸೂರು ಭಾಗಗಳಲ್ಲಿ ಹೆಚ್ಚು ಮಳೆ ಕೊರತೆಯಾಗಿದೆ.
ಇನ್ನು ಕಾವೇರಿ ಮತ್ತು ಕೃಷ್ಣ ನದಿಗಳು ಹುಟ್ಟುವ ಪ್ರದೇಶಗಳಲ್ಲೂ ಮಳೆ ಕಡಿಮೆಯಾಗಿರುವ ಕಾರಣ, ಸರಿಯಾದ ಪ್ರಮಾಣದಲ್ಲಿ ನೀರು ಹರಿದುಬರುತ್ತಿಲ್ಲ. ಕಳೆದ ವರ್ಷದ ಇದೇ ಅವಧಿಯಲ್ಲಿ ರಾಜ್ಯದ ಎಲ್ಲ ಜಲಾಶಯಗಳಲ್ಲಿ ಶೇ.75ಕ್ಕಿಂತ ಹೆಚ್ಚು ನೀರಿತ್ತು. ಆದರೆ ಈಗ ಶೇ.50ಕ್ಕಿಂತ ಕಡಿಮೆ ಪ್ರಮಾಣದಲ್ಲಿ ನೀರಿದೆ. ಮೊದಲೆ ಹೇಳಿದ ಹಾಗೆ, ಮಳೆ ಕೊರತೆಯ ನಡುವೆ, ಭಾರೀ ಪ್ರಮಾಣದ ಬಿಸಿಲು ಕಾಣಿಸಿಕೊಂಡಿರುವುದು ಆತಂಕಕ್ಕೆಡೆಮಾಡಿದೆ. ಬೆಳೆದು ನಿಂತಿರುವ ಪೈರು, ಮಳೆ ಇಲ್ಲದೆ ಬತ್ತಿದ್ದು, ಈಗ ಸುಡು ಬಿಸಿಲಿನಿಂದಾಗಿ ಒಣಗುವ ಹಂತಕ್ಕೆ ಬರುತ್ತಿದೆ.
ಈ ಎಲ್ಲ ಸಮಸ್ಯೆಗಳ ನಡುವೆ ರಾಜ್ಯದ ರೈತರು, ಜನ ಒದ್ದಾಡುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಸಂಕಷ್ಟದ ದಿನಗಳು ಗ್ಯಾರಂಟಿಯಾಗುತ್ತವೆ. ಕುಡಿಯುವ ನೀರಿಗೂ ಸಮಸ್ಯೆ ಬಂದೊದಗುವ ಸಾಧ್ಯತೆಗಳು ದಟ್ಟವಾಗಿವೆ. ಹೀಗಾಗಿ ರಾಜ್ಯ ಸರಕಾರ ಈಗಿನಿಂದಲೇ ಬರ ಎದುರಿಸಲು ಸಜ್ಜಾಗಬೇಕಾಗಿದೆ. ಸದ್ಯದ ಮಟ್ಟಿಗೆ ಕೇಂದ್ರ ಸರಕಾರದ ನಿಯಮಗಳಿಂದಾಗಿ ಬರ ಘೋಷಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಕೇಂದ್ರದಿಂದ ಪರಿಹಾರದ ಹಣ ಬರುವುದು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕೇಂದ್ರ ಸರಕಾರದ ಜತೆಗೆ ಮಾತನಾಡಬೇಕು. ಬರಗಾಲ ಘೋಷಣೆಗಿರುವ ಅಡ್ಡಿಗಳನ್ನು ನಿವಾರಣೆ ಮಾಡಬೇಕು. ಜತೆಗೆ ರಾಜ್ಯ ಸರಕಾರ ಪರ್ಯಾಯ ಕ್ರಮಗಳತ್ತಲೂ ಕಣ್ಣು ಹಾಯಿಸಬೇಕು. ಸಚಿವ ಚಲುವರಾಯಸ್ವಾಮಿ ಅವರು ಇನ್ನೊಂದು ವಾರದಲ್ಲಿ ಮಳೆ ಬರುವ ನಿರೀಕ್ಷೆ ಇದೆ. ಇದನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡುತ್ತೇವೆ ಎಂದಿದ್ದಾರೆ. ಸದ್ಯಕ್ಕೆ ಸಚಿವರು ಹೇಳಿರುವುದು ಉಚಿತವೇ ಆಗಿದ್ದರೂ, ಒಂದು ವೇಳೆ ಮಳೆಯಾಗದಿದ್ದರೆ ಮುಂದೇನು ಮಾಡಬೇಕು ಎಂಬ ಬಗ್ಗೆ ಈಗಿನಿಂದಲೇ ಯೋಚನೆ ಮಾಡಬೇಕು. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳೂ ಗಮನ ಹರಿಸಬೇಕು. ಸರಕಾರದ ಮುಂದೆ ರೈತರ ಹಿತ ಕಾಪಾಡುವ ಜತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಜವಾಬ್ದಾರಿಯೂ ಇರುವುದರಿಂದ ಸಮರೋಪಾದಿಯಲ್ಲಿ ತಯಾರಿ ನಡೆಸಬೇಕು.