ಹಾಸನ: ಜೂನ್ ಮುಗಿಯುತ್ತಾ ಬಂದರೂ ಮುಂಗಾರು ಮಳೆ ಆರಂಭವಾಗದಿದ್ದರಿಂದ ಬಿತ್ತಿದ ಬೆಳೆಗಳೂ ಒಣಗುತ್ತಿವೆ. ಜೂನ್ ತಿಂಗಳಲ್ಲಿ ಶೇ.65 ರಷ್ಟು ಮಳೆಯ ಕೊರತೆಯಾಗಿದ್ದು, ಜಿಲ್ಲೆಯಲ್ಲಿ ಬರದ ಛಾಯೆ ಕಾಣಿಸಿಕೊಂಡಿದೆ.
ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ವಾಡಿಕೆ ಮಳೆ 48.6 ಮಿ.ಮೀ.ಆಗಬೇಕಾಗಿತ್ತು. ಆದರೆ, ಕೇವಲ 17.2 ಮಿ. ಮೀ. ಮಳೆಯಾಗಿದ್ದು, ಶೇ.65ರಷ್ಟು ಮಳೆಯ ಕೊರತೆ ಕಾಣಿಸಿಕೊಂಡಿದೆ. ಬೆಳೆಗಳ ಬಿತ್ತನೆಯೂ ಶೇ. 28.68 ರಷ್ಟಾಗಿದೆ. ಮುಸುಕಿನ ಜೋಳದ ಬಿತ್ತನೆಯಲ್ಲಿಯೂ ಹಿನ್ನಡೆ ಯಾಗಿದೆ. ಜಿಲ್ಲೆಯಲ್ಲಿ ಈ ವರ್ಷ 1,05,300 ಹೆಕ್ಟೇರ್ ನಲ್ಲಿ ಮುಸುಕಿನ ಜೋಳದ ಬಿತ್ತನೆ ಗುರಿಯಿದೆ. ಆದರೆ, ಇದುವರೆಗೂ 48,115 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದ್ದು, ಶೇ. 45.69 ರಷ್ಟು ಮಾತ್ರ ಬಿತ್ತನೆಯಾಗಿದೆ. ಬಿತ್ತನೆಯಾಗಿದ್ದ ಮುಸುಕಿನ ಜೋಳವೂ ಒಣಗಲಾರಂಭಿಸಿದೆ.
ಬೆಳಗಳ ಬಿತ್ತನೆ ವಿವರ: ದ್ವಿದಳ ಧಾನ್ಯಗಳ ಬಿತ್ತನೆ ಗುರಿ 19,389 ಹೆಕ್ಟೇರ್ ಪೈಕಿ 11,717ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ. 60.46 ರಷ್ಟು ಪ್ರಗತಿಯಾಗಿದ್ದರೆ ಎಣ್ಣೆಕಾಳುಗಳ ಬಿತ್ತನೆ ಗುರಿ 3025 ಹೆಕ್ಟೇರ್‌ಗೆ ಬದಲಾಗಿ 479 ಹೆಕ್ಟೇರ್ ನಲ್ಲಿ ಮಾತ್ರ ಬಿತ್ತನೆಯಾಗಿ ಶೇ. 15.83 ರಷ್ಟು ಮಾತ್ರ ಸಾಧನೆಯಾಗಿದೆ. ವಾಣಿಜ್ಯ ಬೆಳೆಗಳ ಬಿತ್ತನೆ ಗುರಿ 12,914 ಹೆಕ್ಟೇರ್ ಇದ್ದು, 10 ,084 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 2,45,569 ಹೆಕ್ಟೇರ್ ನಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿಯಿದ್ದು, ಇದುವರೆಗೂ 70,432 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದ್ದು, ಕೇವಲ ಶೇ.28 .68 ರಷ್ಟು ಮಾತ್ರ ಬಿತ್ತನೆಯಲ್ಲಿ ಸಾಧನೆಯಾಗಿದೆ.
ಆತಂಕದಲ್ಲಿ ಅನ್ನದಾತ: ಜೂನ್ ತಿಂಗಳಲ್ಲಿ ಅರಕಲಗೂಡು ತಾಲೂಕು ಹೊರತು ಪಡಿಸಿ ಎಲ್ಲ ತಾಲೂಕುಗಳಲ್ಲಿಯೂ ಮಳೆಯ ಕೊರತೆಯಾಗಿದೆ. ಅರಕಲಗೂಡು ತಾಲೂಕಿನಲ್ಲಿ ಮಾತ್ರ ವಾಡಿಕೆಯ ಮಳೆಗಿಂತ ಶೇ. 31 ರಷ್ಟು ಹೆಚ್ಚು ಮಳೆಯಾಗಿದೆ. ಇನ್ನುಳಿದ ಎಲ್ಲ ತಾಲೂಕುಗಳಲ್ಲಿಯೂ ಮಳೆಯ ಕೊರತೆಯಿಂದಾಗಿ ಮುಂಗಾರು ಬೆಳೆಗಳ ಬಿತ್ತನೆಗೆ ಹಿನ್ನಡೆಯಾಗಿದೆ. ಬಿತ್ತನೆಯಾಗಿರುವ ಬೆಳೆಗಳೂ ಒಣಗಿ ರೈತರು ಭಾರೀ ನಷ್ಟದ ಆತಂಕದಲ್ಲಿದ್ದಾರೆ.
– ಎನ್. ನಂಜುಂಡೇಗೌಡ