Advertisement

ಬೆಳೆಗೆ ಮಳೆ ಕೊರತೆ, ಕಾಡು ಪ್ರಾಣಿಗಳ ಕಾಟ

12:32 PM Sep 13, 2019 | Suhan S |

ಬೇತಮಂಗಲ: ಮಳೆಯಿಲ್ಲದೆ, ಕಂಗಾಲಾಗಿರುವ ಬರಪೀಡಿತ ಜಿಲ್ಲೆಯ ರೈತರು, ಬೋರ್‌ವೆಲ್ನಲ್ಲಿ ಬರುವ ಅಲ್ಪ-ಸ್ವಲ್ಪ ನೀರಿನಲ್ಲಿ ಸಾವಿರಾರು ರೂ. ಖರ್ಚು ಮಾಡಿ ಬೆಳೆದಿದ್ದ ಬೆಳೆಯನ್ನು, ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಜೀವ ಕೈಯಲ್ಲಿ ಹಿಡಿದು ಹೋರಾಡಬೇಕಾಗಿದೆ.

Advertisement

ಹೋಬಳಿಯ ಮಹದೇವಪುರ, ರಾಮಸಾಗರ, ಗೆನ್ನೇರಹಳ್ಳಿ, ಮೋತಕಪಲ್ಲಿ, ಕಂಗಾಡ್ಲಹಳ್ಳಿ, ಸುಂದರಪಾಳ್ಯ, ಎನ್‌.ಜಿ ಹುಲ್ಕೂರು ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಮುಂಗಾರು ಪೂರ್ವದಲ್ಲಿ ಸುರಿದ ಅಲ್ಪ ಸ್ವಲ್ಪ ಮಳೆಯ ಹದಕ್ಕೆ ಬಿತ್ತನೆ ಮಾಡಿದ್ದ ಶೇಂಗಾ, ಮುಂತಾದ ಮಳೆಯಾಶ್ರಿತ ಬೆಳೆ ಈಗ ಬಾಡಿದ್ದು, ಅದನ್ನೂ ಜಿಂಕೆ, ಕಾಡುಹಂದಿ, ನವಿಲು ತಿನ್ನುತ್ತಿವೆ.

ಪಾಣಿಗಳಿಗೂ ಇಲ್ಲ ಆಹಾರ: ರೈತರು ಎಷ್ಟು ಸಂಕಷ್ಟ ಎದುರಿಸುತ್ತಿದ್ದಾರೋ ಅದೇ ಪರಿಸ್ಥಿತಿ ಕಾಡು ಪ್ರಾಣಿಗಳಿಗೂ ಬಂದಿದೆ. ಆರಣ್ಯದಲ್ಲಿ ಹಸಿರು ಇಲ್ಲದೆ, ಹೊಟ್ಟೆ ಪಾಡಿಗಾಗಿ ಅರಣ್ಯದಂಚಿನ ರೈತರ ಜಮೀನಿಗೆ, ಕೆಲವೊಮ್ಮೆ ಊರಿಗಳಿಗೆ ನುಗ್ಗುತ್ತಿವೆ. ಇವುಗಳಿಂದ ಬೆಳೆ ಉಳಿಸಿಕೊಳ್ಳಲು ಇಡೀ ರಾತ್ರಿ ಜಮೀನಿನಲ್ಲೇ ಕಾವಲು ಕಾಯುವಂತಹ ಪರಿಸ್ಥಿತಿ ರೈತರದ್ದಾಗಿದೆ.

ರೈತರ ಗೋಳು ಕೇಳ್ಳೋರಿಲ್ಲ: ರೈತರು ಒಂದು ಬೆಳೆ ಬೆಳೆಯಲು ಸಾವಿರಾರು ಖರ್ಚು ಮಾಡಬೇಕಿದೆ. ಬೀಜ ಬಿತ್ತನೆ, ಗೊಬ್ಬರ, ಕೀಟನಾಶಕ, ಕೂಲಿ, ಸಾಗಣೆ ಇತರೆ ಖರ್ಚುಗಳು ರೈತರನ್ನು ಹೈರಾಣಾಗಿಸಿವೆ. ಬೆಳೆ ಕೈಗೆ ಬಂದು ಇನ್ನೇನು ಮಾರುಕಟ್ಟೆಗೆ ಸಾಗಿಸಬೇಕು ಎನ್ನುವಷ್ಟರಲ್ಲಿ ಕಾಡು ಹಂದಿ, ಜಿಂಕೆ, ನವಿಲುಗಳು ಬಂದು ಬೆಳೆ ನಾಶ ಮಾಡುತ್ತವೆ. ಅಲ್ಲಿಗೆ ರೈತರು ಪಟ್ಟ ಕಷ್ಟ ನೀರಿನಲ್ಲಿ ಹೋಮ ಮಾಡಿದಂತೆ.

ರಾತ್ರಿ ಇಡೀ ಶಬ್ಧ: ಕಾಡು ಹಂದಿಗಳು, ನವೀಲು, ಇತರೆ ಕಾಡು ಪ್ರಾಣಿಗಳನ್ನು ಓಡಿಸಲು ರಾತ್ರಿ ವೇಳೆ ಪಟಾಕಿ ಸುಡುವುದು, ಖಾಲಿ ಬಾಟಲಿ ತೋಟಗಳಲ್ಲಿ ಕಟ್ಟುವುದು, ಜೋರಾಗಿ ಕೂಗಿ ಓಡಿಸುವ ಪ್ರಯತ್ನ ರೈತರು ಮಾಡುತ್ತಿದ್ದರೂ ಪ್ರಾಣಿಗಳು ಜಗ್ಗುತ್ತಿಲ್ಲ. ಇವು ಹೆಚ್ಚಾಗಿ ಮುಸುಕಿನ ಜೋಳ, ಆಲೂಗಡ್ಡೆ, ಶೇಂಗಾ, ರಾಗಿ, ಕ್ಯಾರೇಟ್, ಇತರೆ ತರಕಾರಿ ತೋಟಗಳಿಗೆ ಹೆಚ್ಚಾಗಿ ದಾಳಿ ಮಾಡಿ ರೈತರ ಬೆಳೆಗಳನ್ನು ನಾಶಪಡಿಸಿ ಲಕ್ಷಾಂತರ ರೂ. ನಷ್ಟ ತಂದೊಡ್ಡುತ್ತಿವೆ.

Advertisement

ಕಾಡು ಪ್ರಾಣಿಗಳ ಆಹಾರಕ್ಕೆ ಬರ ಕಾಡುತ್ತಿದೆ. ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಎದುರಾಗಿರುವುದರಿಂದ ಅವು ಇತ್ತ ಲಗ್ಗೆ ಇಡಲು ಪ್ರಮುಖ ಕಾರಣ ಎಂಬುದಕ್ಕೆ ರಾತ್ರೋರಾತ್ರಿ ದಾಳಿ ಮಾಡುತ್ತಿರುವುದೇ ನಿದರ್ಶನವಾಗಿದೆ.

ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ರಕ್ಷಿಸಿಕೊಳ್ಳಲು ಜಮೀನಿನ ಸುತ್ತಾ ಕಡ್ಡಿಗಳನ್ನು ಹೂಳುವುದು, ಅದಕ್ಕೆ ವಿದ್ಯುತ್‌ ದ್ವೀಪ ಹಾಕಿ ರಾತ್ರಿ ಇಡೀ ಕಾವಲು ಕಾಯಲಾಗುತ್ತದೆ. ರಾತ್ರಿ ವಿದ್ಯುತ್‌ ದ್ವೀಪ ಉರಿಯುತ್ತಿದ್ದರೆ, ಶಬ್ಧ, ಬೆಳಕಿನಿಂದಾದರೂ ಈ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ರೈತರು ವಿವಿಧ ಕ್ರಮಕೈಗೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಕಂಣ್ಗಾವಲಿನ ನಡುವೆಯೂ ಆಲೂಗಡ್ಡೆ, ಕ್ಯಾರೇಟ್, ಬೀಟ್ರೋಟ್, ಮತ್ತಿತರ ಬೆಳೆಯನ್ನು ತನ್ನ ಮೂತಿಯಿಂದಲೇ ಆಗೆದು ತಿನ್ನುವ ಕಾಡು ಹಂದಿ, ಚಿಗುರೆಲೆಯನ್ನೇ ಜಿಂಕೆಗಳು ತಿನ್ನುತ್ತಿವೆ. ನೀರಿಗಾಗಿ ಹನಿ ನೀರಾವರಿಗೆ ಅಳವಡಿಸಿ ರುವ ಪೈಪ್‌ಗ್ಳನ್ನು ನವಿಲುಗಳು ತೂತು ಮಾಡುತ್ತಿವೆ, ಕಾಡು ಪ್ರಾಣಿಗಳ ಉಪಟಳ ನಿಯಂತ್ರಿಸಲು ಸಾಧ್ಯ ವಾಗದಂತಹ ಪರಿಸ್ಥಿತಿ ಇದೆ. ಹೊಟ್ಟೆಪಾಡಿಗಾಗಿ ರೈತರು, ಪ್ರಾಣಿಗಳ ನಡುವೆ ನಡೆಯುತ್ತಿರುವ ಈ ಸಂಘರ್ಷಕ್ಕೆ ಕೊನೆ ಎಂಬುದೇ ಈಗ ಯಕ್ಷ ಪ್ರಶ್ನೆಯಾಗಿದೆ.

 

● ಆರ್‌.ಪುರುಷೋತ್ತಮರೆಡ್ಡಿ

Advertisement

Udayavani is now on Telegram. Click here to join our channel and stay updated with the latest news.

Next