ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯ ಪರಿಣಾಮ ರೈತರಿಗೆ ನೈಸರ್ಗಿಕವಾಗಿ ಬೆಟ್ಟ, ಗುಡ್ಡಗಳಲ್ಲಿ ಕೈಗೆಟುಕುತ್ತಿದ್ದ ಸೀತಾಫಲ ಹಣ್ಣುಗಳು ಈ ಬಾರಿ ಅಪರೂವಾಗಿದ್ದು, ಮಳೆ ಇಲ್ಲದ ಕಾರಣ ಸೀತಾಫಲ ಹಣ್ಣುಗಳ ಗಿಡಗಳು ಒಣಗಿ ರೈತರಿಗೆ ತೀವ್ರ ನಿರಾಸೆ ಮೂಡಿಸುತ್ತಿವೆ.
ಹೌದು, ಜಿಲ್ಲೆಯಲ್ಲಿ ಸತತ ಎರಡು, ಮೂರು ವರ್ಷಗಳಿಂದ ನಿರೀಕ್ಷೆಗೂ ಮೀರಿ ಮಳೆ ಸುರಿದಿದ್ದ ಪರಿಣಾಮ ನಿಸರ್ಗದತ್ತವಾಗಿ ಸಿಗುವ ಸೀತಾಫಲ ಹಣ್ಣುಗಳ ಭರ್ಜರಿ ಫಸಲು ಸಿಕ್ಕಿದರೆ, ಈ ಬಾರಿ ಬರಗಾಲಕ್ಕೆ ಸೀತಾಫಲ ಹಣ್ಣುಗಳನ್ನು ಕಣ್ಮರೆ ಆಗುವಂತೆ ಮಾಡಿದೆ.
ಮಳೆಗಾಲದ ವಿಶೇಷ ಅತಿಥಿ ಎಂದೇ ಕರೆಯುವ ಸೀತಾಫಲ ಹಣ್ಣಿಗೆ ರೈತಾಪಿ ವಲಯದಲ್ಲಿ ವಿಶೇಷ ಸ್ಥಾನ ಇದೆ. ಕಾಡಂಚಿನಲ್ಲಿ ಅದರಲ್ಲೂ ಬೆಟ್ಟ, ಗುಡ್ಡಗಳಲ್ಲಿ ಮರಗಳ ಪೊದೆಗಳಲ್ಲಿ ಅಪರೂಪಕ್ಕೆ ಕಂಡು ಬರುವ ಈ ಸೀತಾಫಲ ಹಣ್ಣುಗಳು ರುಚಿಯಲ್ಲಿ ಅಂತೂ ಯಾವ ಹಣ್ಣುಗಳಗಿಂತ ಕಡಿಮೆ ಇಲ್ಲ. ಎರಡು, ಮೂರು ವರ್ಷದಿಂದ ಉತ್ತಮ ಮಳೆಯಾಗಿ ನಿರೀಕ್ಷೆಗೂ ಮೀರಿ ಗಿಡಗಳಲ್ಲಿ ಸೀತಾಫಸಲು ಭರ್ಜರಿ ಫಸಲು ಬಿಟ್ಟು ಮಾರುಕಟ್ಟೆಗೆ ಪ್ರವೇಶ ಮಾಡಿ ಗ್ರಾಹಕರನ್ನು ಕೈಬಿಸಿ ಕರೆದಿದ್ದವು. ಅಲ್ಲದೇ ಸೆಪ್ಪೆಂಬರ್ ತಿಂಗಳ ಆರಂಭದಲ್ಲಿಯೆ ಎಲ್ಲಿ ನೋಡಿದರೂ ಮಾರಾಟಕ್ಕೆ ಗ್ರಾಮೀಣ ಮಹಿಳೆಯರು ಬುಟ್ಟಿಗಳಲ್ಲಿ ಸೀತಾಫಲ ಹಣ್ಣುಗಳ ಜೋಡಿಸಿಟ್ಟಿದ್ದ ದೃಶ್ಯಗಳು ಕಂಡು ಬಂದ್ದಿದವು. ಆದರೆ, ಈ ವರ್ಷ ಜಿಲ್ಲೆಯಲ್ಲಿ ವಾಡಿಕೆ ಮಳೆ ಆಗದೇ ಬರಗಾಲ ಆವರಿಸಿದ್ದು, ರೈತರು ಸಾಲ ಮಾಡಿ ನೆಟ್ಟಿರುವ ಕೃಷಿ ಬೆಳೆಗಳು ತೇವಾಂಶ ಇಲ್ಲದ ಒಣಗುತ್ತಿದ್ದು, ಇದೀಗ ಇವುಗಳ ಸಾಲಿಗೆ ಜಿಲ್ಲೆಯ ಕಾಡುಗಳಲ್ಲಿ ಸಿಗುವ ಸೀತಾಫಲ ಹಣ್ಣುಗಳಿಗೂ ಬರ ಆವರಿಸಿದೆ.
ಗ್ರಾಮೀಣರಲ್ಲಿ ಬೇಸರ: ಮುಂಗಾರು ಹಂಗಾಮಿ ನಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದ ರೈತರಿಂದ ಅದರಲ್ಲೂ ಗ್ರಾಮೀಣ ಭಾಗದದಲ್ಲಿ ಕುರಿ, ಮೇಕೆ, ದನ ಕಾಯುವ ಹುಡುಗರಿಗೆ ಹಾಗೂ ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವ ರೈತರಿಗೆ ಕೃಷಿ ಕೂಲಿ ಕಾರ್ಮಿಕರಿಗೆ ಸೀತಾಫಲ ಹಣ್ಣುಗಳು ಕಾಶ್ಮೀರ ಸೇಬುನಷ್ಟೆ ರುಚಿ ನೀಡುವ ಮೂಲಕ ಮಳೆಗಾದಲ್ಲಿ ಸೀತಾಫಲ ಹಣ್ಣುಗಳು ಗ್ರಾಮೀಣ ಜನರಿಗೆ ಖಾಯಂ ಅತಿಥಿಯಾಗಿದ್ದವು. ಆದರೆ, ಈ ಬಾರಿ ಮಳೆ ಕೈ ಕೊಟ್ಟಿರುವ ಪರಿಣಾಮ ಜಿಲ್ಲಾದ್ಯಂತ ಆವರಿಸಿರುವ ಬರದ ಛಾಯೆಗೆ ಈ ಅಪರೂಪದ ಸೀತಾಫಲ ಹಣ್ಣುಗಳು ಕಣ್ಮರೆಯಾಗಿ ಗ್ರಾಮೀಣ ಜನರಲ್ಲಿ ಬೇಸರ ಮೂಡಿಸಿದೆ.
ರೈತರ ಪಾಲಿಗೆ ವಾಣಿಜ್ಯ ಬೆಳೆ ಆಗಲಿಲ್ಲ : ಜಿಲ್ಲೆಯಲ್ಲಿ ಇಂದಿಗೂ ಕೂಡ ಸೀತಾಫಲ ಗಿಡಗಳನ್ನು ರೈತರು ಒಂದು ವಾಣಿಜ್ಯ ಬೆಳೆಯಾಗಿ ಬೆಳೆಯುವುದಕ್ಕೆ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹ ರೈತರಿಗೆ ಸಿಗದಿರುವುದು ಎದ್ದು ಕಾಣುತ್ತಿದೆ. ಮಳೆಗಾಲದಲ್ಲಿ ಅಷ್ಟೇ ಸೀತಾಫಲ ಹಣ್ಣಿನ ರುಚಿಯನ್ನು ಸವಿಯಬೇಕಿದೆ. ಆದರೆ, ಈ ಬಾರಿ ಮಳೆ ಕೊರತೆಯಿಂದ ಸೀತಾಫಲ ಹಣ್ಣುಗಳು ಕಾಣುವುದೇ ಅಪರೂಪವಾಗಿದೆ.
ಸ್ವಾವಲಂಬಿ ಬದುಕಿಗೆ ಕೈ ಹಿಡಿಯುತ್ತಿದ್ದ ಸೀತಾಫಲ!: ಜಿಲ್ಲಾದ್ಯಂತ ಮಳೆಗಾಲದಲ್ಲಿ ಎಲ್ಲಿ ನೋಡಿದರೂ ಸೀತಾಫಲ ಹಣ್ಣುಗಳ ಘಮಲು ಕಂಡು ಬರುತ್ತಿದ್ದವು.. ವಯೋ ವೃದ್ಧರು, ರೈತರು, ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಗ್ರಾಮೀಣ ಭಾಗದ ಬೆಟ್ಟಗುಡ್ಡಗಳಲ್ಲಿ ಸಿಗುತ್ತಿದ್ದ ಸೀತಾಫಲ ಹಣ್ಣುಗಳನ್ನು ಹುಡಕಿ ಕಿತ್ತು ತಂದು ನಗರದ ಶಾಲಾ, ಕಾಲೇಜು, ಸರ್ಕಾರಿ ಕಚೇರಿ ಸಮೀಪ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದರು. ಆದರೆ, ಮಳೆಯ ಅವಕೃಪೆ ಪರಿಣಾಮ ಈ ಬಾರಿ ಸೀತಾಫಲ ಹಣ್ಣುಗಳ ಫಸಲು ಕ್ಷೀಣಿಸಿದ್ದು ಅಪರೂಪಕ್ಕೆ ಅಲ್ಲೊಬ್ಬರು ಇಲ್ಲೋಬ್ಬರು ಸೀತಾಫಲ ಹಣ್ಣುಗಳನ್ನು ಮಾರಾಟ ಮಾಡುವಂತಾಗಿದೆ.
-ಕಾಗತಿ ನಾಗರಾಜಪ್ಪ