ತಿಪಟೂರು: ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದು ರಾಗಿ ಬಿತ್ತನೆಗೆ ಮಳೆ ಬರತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿ ದಿನವೂ ಆಕಾಶದೆಡೆಗೆ ರೈತರು ನೋಡುವಂತಾಗಿದ್ದು, ಬರಗಾಲದ ಛಾಯೆ ಬೆಳೆಗಾರರಲ್ಲಿ ಆತಂಕವನ್ನು ಮೂಡಿಸಿದೆ.
ಕಳೆದ ಎರಡು ತಿಂಗಳಿಂದಲೂ ತಾಲೂಕಾದ್ಯಂತ ಕೇವಲ ಮೋಡಮುಸುಕಿದ ವಾತಾವರಣವೇ ಇದ್ದು ಮಳೆ ಮೋಡಗಳು ಬರಿ ಆಸೆ ಹುಟ್ಟಿಸುತ್ತಿವೆ. ಆದರೆ ಮಳೆ ಮಾತ್ರ ಬರುತ್ತಿಲ್ಲ. ಈ ವರ್ಷವೂ ಪೂರ್ವ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಬೆಳೆ ಗಳಾದ ಹೆಸರು, ಉದ್ದು, ಎಳ್ಳು, ತೊಗರಿ ಮತ್ತಿತರೆ ಬೆಳೆಗಳು ಬಾರದೆ ರೈತರಿಗೆ ಸಮಸ್ಯೆ ಸೃಷ್ಟಿಯಾಗಿದೆ.
ಜಾನುವಾರುಗಳಿಗೆ ಮೇವು ಇಲ್ಲದಂತಾಗಿ ರೈತರು ಸಾಕಷ್ಟು ನಷ್ಟ ಅನುಭವಿಸು ವಂತಾಗಿದೆ. ಅಲ್ಪಸ್ವಲ್ಪವಾದರೂ ಪೂರ್ವಮುಂಗಾರು ಮಳೆಗಳಾಗುತ್ತಿದ್ದರಿಂದ ರೈತರು ಮನೆ ಬಳಕೆಗಲ್ಲದೆ ಮಾರಾಟಕ್ಕೂ ಹೆಸರು, ತೊಗರಿ ಬೆಳೆದು ರಾಗಿ ಬಿತ್ತನೆಗೆ ಅಗತ್ಯವಾದ ಬೀಜ, ಗೊಬ್ಬರ ಬೇಸಾಯದ ಖರ್ಚಿಗೆ ಹಣ ಹೊಂದಿಸಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ರೈತರ ಪಾಲಿಗೆ ಪೂರ್ವ ಮುಂಗಾರು ಕೈಕೊಟ್ಟ ಪರಿಣಾಮ ಬರಗಾಲದ ಭೀತಿ ಸೃಷ್ಟಿಯಾಗಿದೆ.
ರಾಗಿ ಬಿತ್ತನಗೆ ಮಳೆಯನ್ನು ಕಾಯುತ್ತಿರುವ ರೈತರು: ತಾಲೂಕಿನ ಜನ-ಜಾನುವಾರುಗಳ ಪ್ರಮುಖ ಆಹಾರ ಹಾಗೂ ಇತ್ತೀಚೆಗೆ ವಾಣಿಜ್ಯ ಬೆಳೆಯಾಗಿ ಪರಿವರ್ತನೆ ಯಾಗಿರುವ ದೀರ್ಘಾವದಿ ರಾಗಿಯನ್ನು ಜೂ. 15 ರಿಂದ ಬಿತ್ತನೆ ಮಾಡಬೇಕಾಗಿತ್ತು. ಆದರೆ ಈವರೆಗೂ ಭೂಮಿ ಹದ ಮಾಡುಕೊಳ್ಳುವಷ್ಟೂ ಮಳೆ ಬಂದಿಲ್ಲ. ಮಳೆರಾಯನ ಈ ಮುನಿಸು ತಾಲೂಕಿನ ರೈತರಲ್ಲಿ ತೀವ್ರ ಆತಂಕವನ್ನುಂಟು ಮಾಡಿದ್ದು, ಈ ವರ್ಷ ರಾಗಿ ಬೆಳೆ ಕೈಕೊಟ್ಟರೆ ಎಂಬ ಚಿಂತೆ ರೈತರಲ್ಲಿ ಮೂಡಿದೆ. ಬಿತ್ತನೆಗೆ 5-6 ಬಾರಿ ಭೂಮಿ ಉಳುಮೆ ಮಾಡಿ, ಕುಂಟೆ ಹಾಯಿಸಿ ಕಳೆ ಹತೋಟಿಗೆ ತಂದು ಭೂಮಿ ಯನ್ನು ಸಿದ್ಧಮಾಡಿಕೊಂಡು ರಾಗಿಯನ್ನು ಬಿತ್ತನೆ ಮಾಡಬೇಕು. ಭರಣಿ, ರೋಹಿಣಿ ಮಳೆ ಮುಗಿದು ಹೋಗಿ ಈಗ ಮೃಗಶಿರ ಮಳೆ ಆರಂಭವಾಗಿದ್ದರೂ ಮಳೆಯ ಮುನ್ಸೂಚನೆಯೇ ಇಲ್ಲದಿರುವುದು ರೈತ ರಲ್ಲಿ ಬೇಸರ ಮೂಡಿಸಿದೆ. ರಾಗಿ ಬಿತ್ತಲು ಸಾವಿರಾರು ರೂ. ಸಾಲ ಮಾಡಿ ಬಿತ್ತನೆ ಬೀಜ, ಗೊಬ್ಬರ ಖರೀದಿಸಿ ಮಳೆರಾಯನಿಗಾಗಿ ಕಾದು ಕುಳಿತಿದ್ದಾರೆ.
ಒಣಗುತ್ತಿರುವ ಕೆರೆಕಟ್ಟೆಗಳು: ಕಳೆದ ವರ್ಷ ಸಾಕಷ್ಟು ಮಳೆಯಾದ ಪರಿಣಾಮ ಕೆರೆಕಟ್ಟೆಗಳು ತುಂಬಿಹೋಗಿದ್ದವು. ಆದರೆ, ಈ ವರ್ಷ ಮಳೆ ಬಾರದೆ ತಾಲೂಕಿನಲ್ಲಿರುವ ಕೆರೆ- ಕಟ್ಟೆಗಳು ನೀರಿಲ್ಲದೆ ಬರಿದಾಗಿರುವುದರಿಂದ ಅಂತರ್ ಜಲದ ಕೊರತೆ ತೀವ್ರವಾಗಿದೆ. ಜಾನು ವಾರುಗಳಿಗೆ ಮೇವಿನ ಕೊರತೆ ಕಾಡುತ್ತಿದ್ದು ಬೋರ್‌ವೆಲ್ ಆಶ್ರಯಿಸಿರುವ ರೈತ ಮುಂದೇನು ಗತಿ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಮುಂದಿನ ದಿನಗಳಲ್ಲಿ ಮಳೆರಾಯ ಕೃಪೆ ತೋರದಿದ್ದರೆ ಬೋರ್‌ವೆಲ್ ಗಳಲ್ಲಿಯೂ ಅಂತರ್ಜಲ ಬತ್ತಿಹೋಗುವುದು ನಿಶ್ಚಿತ ಎಂಬ ದುಗುಡವೂ ಆವರಿಸಿದೆ.
ಕಳೆದ ವರ್ಷ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆಗಳು ಸಕಾಲಕ್ಕೆ ಬಂದು ರೈತರು ನೆಮ್ಮದಿಯಾಗಿದ್ದರು. ಆದರೆ ಈ ವರ್ಷ ಮಳೆಗಳು ಕೈಕೊಟ್ಟಿದ್ದು ಈವರೆಗೂ ಕೆರೆಕಟ್ಟೆಗಳಿಗೆ ನೀರು ಬರುವಂತಹ ಯಾವುದೇ ಮಳೆಯಾಗಿಲ್ಲ. ಇದರಿಂದ ತೆಂಗು ಹಾಗೂ ಜನ-ಜಾನುವಾರುಗಳು ಪ್ರಮುಖ ಆಹಾರ ರಾಗಿ ಬಿತ್ತನೆಗೂ ತುಂಬಾ ತೊಂದರೆಯಾಗಿದೆ. ಜೋರು ಮಳೆ ಬಾರದಿದ್ದರೆ ಕುಡಿವ ನೀರಿಗೂ ತೊಂದರೆಯಾಗಲಿದೆ.
-ಗುರುಮೂರ್ತಿ, ತಡಸೂರು ರೈತ
ಮಳೆ ಅಭಾವದಿಂದ ಅಲ್ಲಲ್ಲಿ ಬಿತ್ತನೆ ಯಾಗಿರುವ ಪೂರ್ವ ಮುಂಗಾರು ಬೆಳೆಗಳು ರೈತರ ಕೈಸೇರುವುದು ತುಸು ಅನುಮಾನವಾಗಿದೆ. ಈಗ ಪೂರ್ವ ಮುಂಗಾರು ಮುಗಿದು ಮುಂಗಾರು ಪ್ರಾರಂಭವಾಗಿದ್ದು, ತಾಲೂಕಿನ ಅಲ್ಲಲ್ಲಿ ಸೊನೆ ಮಳೆ ಬಿಟ್ಟರೆ ಜೋರು ಮಳೆ ಎಲ್ಲಿಯೂ ಆಗಿಲ್ಲ. ಈಗಾಗಲೇ ರೈತರು ರಾಗಿ ಬಿತ್ತನೆಗೆ ಸಜ್ಜಾಗುತ್ತಿದ್ದು ಮಳೆ ಬಂದರೆ ರಾಗಿ ಬಿತ್ತಿನೆ ಸುಸಮಯವಾಗಿದೆ.
-ಬಿ. ಪೂಜಾ, ತಿಪಟೂರು ಸಹಾಯಕ ಕೃಷಿ ನಿರ್ದೇಶಕಿ
-ಬಿ.ರಂಗಸ್ವಾಮಿ, ತಿಪಟೂರು