Advertisement

ಸೋಂಕಿತರ ಚಿಕಿತ್ಸೆಗೆ ಶುಶ್ರೂಷಕರ ಕೊರತೆ

01:17 PM Aug 16, 2020 | Suhan S |

ಮೈಸೂರು: ಸೋಂಕಿತರಿಗೆ ಚಿಕಿತ್ಸೆ ನೀಡಲು ಶುಶ್ರೂಷಕರು ಹಾಗೂ ಡಿ ಗ್ರೂಪ್‌ ನೌಕರರ ಸಮಸ್ಯೆ ಎದುರಾಗಿದೆ. ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಲು ತಡವಾಗುತ್ತಿದೆ ಎಂದು ಅಧಿಕಾರಿಗಳು ವಾಸ್ತವಾಂಶ ಬಿಚ್ಚಿಟ್ಟರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಜಿಲ್ಲಾ  ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ನೇತೃತ್ವದಲ್ಲಿ ಕೋವಿಡ್‌ ನಿರ್ವಹಣೆ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಜಿಲ್ಲಾ ಕೋವಿಡ್‌ ಆಸ್ಪತ್ರೆ, ಕೆ.ಆರ್‌. ಆಸ್ಪತ್ರೆಯಲ್ಲಿ ಸೋಂಕಿತರನ್ನು ನೋಡಿಕೊಳ್ಳಲು ನರ್ಸ್‌ಗಳೇ ಬರುತ್ತಿಲ್ಲ. ಡಿ ಗ್ರೂಪ್‌ ನೌಕರರಂತೂ ಸಿಗುತ್ತಿಲ್ಲ. ಕೋವಿಡ್‌ ಭಯದಿಂದ ಕೆಲಸ ಬಿಟ್ಟು ಹೋಗುತ್ತಿದ್ದಾರೆ. ನೇಮಕ ಪಕ್ರಿಯೆ ನಡೆಸಿದರೂ ಯಾರು ಬರುತ್ತಿಲ್ಲ. ಇದರಿಂದ ಸೋಂಕಿತರನ್ನು ನೋಡಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ ಎಂದು ವಾಸ್ತವಾಂಶ ಬಿಚ್ಚಿಟ್ಟರು.

ಚಿಕಿತ್ಸೆಗೆ ನುರಿತ ವೈದ್ಯರ ತಂಡ: ಕೋವಿಡ್‌ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ಮಾತನಾಡಿ, ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆಗೆ ನುರಿತ ವೈದ್ಯರ ತಂಡವೇ ಇದೆ. ಆದರೆ, ರೋಗಿಗಳನ್ನು ನೋಡಿಕೊಳ್ಳಲು ನರ್ಸ್‌ಗಳಿಲ್ಲ. 230 ಮಂದಿ ರೋಗಿಗಳನ್ನು ನೋಡಿಕೊಳ್ಳಲು ಅಗತ್ಯವಾದ ನರ್ಸ್  ಗಳ ಕೊರತೆ ಇದೆ. ಕೇವಲ 17 ಮಂದಿ ಡಿ ಗ್ರೂಪ್‌ ನೌಕರರಿದ್ದಾರೆ. ಇದರಿಂದ ಸಮಸ್ಯೆಯಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಡೀಸಿ ಅಭಿರಾಮ್‌ ಜಿ.ಶಂಕರ್‌, ನರ್ಸ್‌ ಮತ್ತು ಡಿ. ಗ್ರೂಪ್‌ ನೌಕರರನ್ನು ನೇಮಕ ಮಾಡಿಕೊಳ್ಳಲು ಟೆಂಡರ್‌ ಕರೆಯಲಾಗಿದೆ. ಶೀಘ್ರವೇ ನೇಮಕ ಮಾಡಿಕೊಳ್ಳ ಲಾಗುವುದು. ಇದರೊಂದಿಗೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಕಾಲೇಜುಗಳ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿ, ಅಲ್ಲಿನ ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ನರ್ಸಿಂಗ್‌ ವಿದ್ಯಾರ್ಥಿಗಳನ್ನು ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ನಿಯೋಜಿಸಿಕೊಳ್ಳಲಾಗುವುದು ಎಂದು ಹೇಳಿದರು.

ಅಂತ್ಯಸಂಸ್ಕಾರಕ್ಕೆ ಕ್ರಮ: ಸೋಂಕಿತರು ಮೃತಪಟ್ಟ ಬಳಿಕ ಅವರ ಕುಟುಂಬದವರು ಮುಖ ಸಹ ನೋಡಲು ಸಾಧ್ಯವಾಗುತ್ತಿಲ್ಲ. ಕೋವಿಡ್‌ ಭಯದಿಂದ ಅಂತ್ಯ ಸಂಸ್ಕಾರಕ್ಕೆ ಜನರೇ ಬಾರದಂತೆ ಆಗಿದೆ. ಅಂತ್ಯ ಸಂಸ್ಕಾರಕ್ಕೆ ಇರುವ ಕಠಿಣ ನಿಯಮ ಸಡಿಲಗೊಳಿಸಿ, ಮೃತರ ಅಂತ್ಯ ಸಂಸ್ಕಾರ ಗೌರವಯುತವಾಗಿ ನಡೆಯಲು ಅವಕಾಶ ಕಲ್ಪಿಸ ಬೇಕು ಎಂದು ಸಭೆಯಲ್ಲಿದ್ದ ಶಾಸಕರಾದ ಅಶ್ವಿ‌ನಿ ಕುಮಾರ್‌, ಜಿ.ಟಿ.ದೇವೇಗೌಡ ಅವರು ಸಲಹೆ ನೀಡಿದರು.

Advertisement

ಅದಕ್ಕೆ ಪತ್ರಿಕ್ರಿಯಿಸಿದ ಡೀಸಿ, ಸೋಂಕಿತರು ಮೃತಪಟ್ಟರೆ ಅವರ ಮೃತದೇಹ ಅಂತ್ಯಕ್ರಿಯೆಗೆ ಅನುಕೂಲವಾಗುವಂತೆ ಸಮಿತಿ ರಚನೆ ಮಾಡಿ, ಅಂತ್ಯಸಂಸ್ಕಾರವನ್ನು ಮಾರ್ಗಸೂಚಿಯನ್ವಯ ಮಾಡುವ ಬಗ್ಗೆ ನಿಗಾ ಇಡಲು ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.

ಚಿಕಿತ್ಸೆ ವಿಚಾರದಲ್ಲಿ ತಾತ್ಸಾರ ಬೇಡ: ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಮಾತನಾಡಿ, ಕೋವಿಡ್‌ ನಿರ್ವಹಣೆಗೆ ಸಂಬಂಧ ಕೇವಲ ಜಿಲ್ಲಾಧಿಕಾರಿಗಳು ಮಾತ್ರ ಮಾತನಾಡುತ್ತಾರೆ. ಇಲ್ಲವೇ ಶಾಸಕರು ಮಾತನಾಡುತ್ತಾರೆ. ಆದರೆ, ಅಧಿಕಾರಿಗಳು ಏನು ಮಾತನಾಡದೇ ಬಹಳ

ನಿಧಾನಗತಿ ಧೋರಣೆ ತಾಳುತ್ತಿದ್ದಾರೆ. ಇಂತಹ ಬೆಳವಣಿಗೆ ಬೇಡ, ನಾನು ಸಹಿಸುವುದಿಲ್ಲ. ಸೋಂಕಿತರ ಚಿಕಿತ್ಸೆ ವಿಚಾರದಲ್ಲಿ ತಾತ್ಸಾರ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೆಆರ್‌ಎಸ್‌, ಕಬಿನಿಗೆ ಸಿಎಂ ಬಾಗಿನ: ಕೋವಿಡ್‌ -19 ಹಾಗೂ ನೆರೆ ಹಾವಳಿ ಇದ್ದ ಹಿನ್ನೆಲೆ ದಸರಾ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆ.20ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ದಸರಾ ಆಚರಣೆ ಬಗ್ಗೆ ವಿಷಯ ಪ್ರಸ್ತಾಪ ಮಾಡಲಾಗುವುದು. ಬಳಿಕ ಆ.21 ರಂದು ಕೆಆರ್‌ ಎಸ್‌ ಮತ್ತು ಕಬಿನಿ ಜಲಾಶಯಗಳಿಗೆ ಸಿಎಂ ಯಡಿಯೂರಪ್ಪ ಬಾಗಿನ ಅರ್ಪಿಸಲಿದ್ದಾರೆ. ಅಂದು ದಸರಾ ಸಂಬಂಧ ಅವರೇ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.

ಚಿತಾಗಾರ ಸದ್ಬಳಕೆಗೆ ಸೂಚನೆ: ತಕ್ಷಣ ಚಿತಾಗಾರಕ್ಕೆ ಭೇಟಿ ನೀಡಿ ಯಾವ ಪರಿಸ್ಥಿತಿಯಲ್ಲಿದೆ. ಏನು ಸೌಲಭ್ಯಬೇಕು ಎಂಬ ಬಗ್ಗೆ ತಿಳಿದುಕೊಂಡು ಕಾರ್ಯಪ್ರವೃತ್ತರಾಗಿ ಎಂದು ಸಚಿವರು ಸೂಚನೆ ನೀಡಿದರು. ಸಭೆಯಲ್ಲಿ ಶಾಸಕರಾದ ಜಿ.ಟಿ.ದೇವೇ ಗೌಡ, ತನ್ವೀರ್‌ ಸೇಠ್, ಹರ್ಷವರ್ಧನ್‌, ಅಶ್ವಿ‌ನ್‌ ಕುಮಾರ್‌, ಧರ್ಮಸೇನಾ , ಮೈಸೂರು ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ, ಎಸ್ಪಿ ಸಿ.ಬಿ.ರಿಷ್ಯಂತ್‌, ಪಾಲಿಕೆ ಆಯುಕ್ತ ಗುರುದತ್‌ ಹೆಗಡೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next