ಮುದ್ದೇಬಿಹಾಳ: ಬಡಜನರಿಗೆ ಗುಣಮಟ್ಟದ ಆಯುರ್ವೇದ ಚಿಕಿತ್ಸೆ ದೊರೆಯಲೆಂದು ಇಂದಿರಾ ನಗರದ ಎಸ್‌ಎಸ್‌ಎಂ ಹೈಸ್ಕೂಲ್ ಹತ್ತಿರವಿರುವ ತಾಲೂಕು ಮಟ್ಟದ ಸರ್ಕಾರಿ ಆಯುಷ್ ಆಸ್ಪತ್ರೆ ಅಗತ್ಯ ಸೌಲಭ್ಯಗಳಿದ್ದರೂ ಸೂಕ್ತ ನಿರ್ವಹಣೆ ಕೊರತೆಯಿಂದ ನಿಷ್ಪ್ರಯೋಜಕವಾಗಿದೆ.
ಎರಡು ವರ್ಷಗಳ ಹಿಂದೆ ಆಯುಷ್ ಇಲಾಖೆಯಿಂದ ಸ್ವತಂತ್ರ ಕಾರ್ಯನಿರ್ವಹಣೆಯಡಿ ಪ್ರಾರಂಭಗೊಂಡಿರುವ ಈ ಆಸ್ಪತ್ರೆಗೆ ಪ್ರಾರಂಭದಲ್ಲಿ ಸಮಸ್ಯೆ ಇರಲಿಲ್ಲ. ಆದರೆ ಉದ್ಘಾಟನೆ ವಿಷಯ ಜನರ ಗಮನಕ್ಕೆ ಬರದ ಕಾರಣ ಕೆಲ ತಿಂಗಳು ಅನಾಥವಾಗಿಯೇ ಇತ್ತು. ನಂತರ ಪ್ರಚಾರಕ್ಕೆ ಬಂದರೂ ಜನರಿಗೆ ಆಯುಷ್ ಚಿಕಿತ್ಸೆಯಲ್ಲಿ ಹೆಚ್ಚಿನ ನಂಬಿಕೆ ಇಲ್ಲದ್ದರಿಂದ ಜನರಿಗೆ ಅರಿವು ಮೂಡಿಸಿ ತನ್ನತ್ತ ಸೆಳೆಯಲು ಆಸ್ಪತ್ರೆ ನಿರ್ವಹಣೆ ಹೊಂದಿದವರು ವಿಫಲರಾಗಿದ್ದರು. ಪರಿಣಾಮ ಬೆರಳೆಣಿಕೆಯಷ್ಟು ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದರು.
ಕುಂಟುತ್ತ ಸಾಗಿದೆ ಆಸ್ಪತ್ರೆ: ಆಸ್ಪತ್ರೆಯಲ್ಲಿ ಪಂಚಕರ್ಮ ಸೇರಿದಂತೆ ಅಗತ್ಯ ಚಿಕಿತ್ಸಾ ಪರಿಕರಗಳಿವೆ. ಆದರೆ ಇದರ ಚಿಕಿತ್ಸೆಗೆ ತಜ್ಞ ವೈದ್ಯರು ಇಲ್ಲದ್ದರಿಂದ ಇವೆಲ್ಲ ನಿಷ್ಪ್ರಯೋಜಕ ಎನ್ನಿಸಿಕೊಂಡಿವೆ. ವಿಜಯಪುರದಿಂದ ಡಾ| ಬಸವರಾಜ ನಂದಿಕೋಲ ಎಂಬ ವೈದ್ಯರು ವಾರದಲ್ಲಿ ಮೂರು ದಿನ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಆದರೆ ಏಕಾಏಕಿ 5-6 ತಿಂಗಳ ಹಿಂದೆ ಇವರ ವರ್ಗಾವಣೆಯಾದಾಗಿನಿಂದ ಆಸ್ಪತ್ರೆ ಕುಂಟುತ್ತ ಸಾಗಿದೆ.
ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯಕೀಯ ತಪಾಸಣೆ ಅನುಭವ ಹೊಂದಿಲ್ಲದ ಸಿಬ್ಬಂದಿಯೊಬ್ಬರೇ ಕಾಟಾಚಾರಕ್ಕೆ ಎಂಬಂತೆ ರೋಗಿಗಳಿಗೆ ಔಷ ಧ ನೀಡಿ ಹೇಗೋ ಆಸ್ಪತ್ರೆ ನಿಭಾಯಿಸುತ್ತಿದ್ದರು. ಆದರೆ ಸಿಗಬೇಕಾದ ಚಿಕಿತ್ಸೆ ಮಾತ್ರ ದೊರೆಯುತ್ತಿರಲಿಲ್ಲ. ಪಂಚಕರ್ಮ ಸೌಲಭ್ಯವಿದ್ದರೂ ತಜ್ಞರಿಲ್ಲದ ಕಾರಣಅದೂ ನಿರುಪಯುಕ್ತ ಎನ್ನಿಸಿಕೊಂಡಿದೆ ಎನ್ನುತ್ತಾರೆ ಸ್ಥಳೀಯರು. ತಾಲೂಕು ಮಟ್ಟದ ಆಸ್ಪತ್ರೆಯಾಗಿದ್ದರೂ ತಲಾ ಒಂದು ಆಯುಷ್ ವೈದ್ಯ, ಫಾರ್ಮಾಸಿಸ್ಟ್, ಎಸ್‌ಡಿಸಿ, ಪ್ಯೂನ್ ಹುದ್ದೆ ಮಾತ್ರ ಮಂಜೂರುಮಾಡಲಾಗಿದೆ. ಪ್ರಾರಂಭದಿಂದಲೂ ಪ್ಯೂನ್ ಹುದ್ದೆಗೆ ಯಾರನ್ನೂ ನೇಮಿಸಿಲ್ಲ. ಹೀಗಾಗಿ ವೈದ್ಯರೇ ಆಸ್ಪತ್ರೆ ಕಸ ಗೂಡಿಸುವುದೂ ಸೇರಿ ಎಲ್ಲ ಕೆಲಸ ಮಾಡಿಕೊಳ್ಳಬೇಕು. ಇದು ಸಾಧ್ಯವಾಗದಿದ್ದಲ್ಲಿ ಕೂಲಿಕೊಟ್ಟು ಯಾರನ್ನಾದರೂ ಕರೆಸಿ ಸ್ವತ್ಛತೆ ಮಾಡಿಸುವ ಪರಿಸ್ಥಿತಿ ಇದೆ.
ಸಿಬ್ಬಂದಿಗೆ ತಲೆನೋವು: ಎಂಡಿ ಸ್ನಾತಕೋತ್ತರ ಪದವಿ ಹೊಂದಿದ್ದ ಡಾ| ನಂದಿಕೋಲ ವರ್ಗಾವಣೆಗೊಂಡ ಮೇಲೆ ಬಿಎಎಂಎಸ್ ಪದವಿಯೊಂದಿಗೆ 30 ವರ್ಷದ ಅನುಭವ ಇರುವ ಡಾ| ಎಂ.ಪಿ. ಬಶೆಟ್ಟಿ ಅವರನ್ನು ವಾರದ ಎರಡು ದಿನ ಮಾತ್ರ ಕರ್ತವ್ಯಕ್ಕೆನಿಯೋಜಿಸಲಾಗಿದೆ. ಇವರು ಬಳಬಟ್ಟಿ ಆಯುಷ್ ಆಸ್ಪತ್ರೆಗೂ ನಿಯೋಜನೆಗೊಂಡಿದ್ದಾರೆ. ಹೀಗಾಗಿಇವರು ಮಂಗಳವಾರ, ಶುಕ್ರವಾರ ಮಾತ್ರ ಇಲ್ಲಿಗೆ ಕರ್ತವ್ಯಕ್ಕೆ ಬರುತ್ತಾರೆ. ಇವರು ಬಾರದ ದಿನಗಳಲ್ಲಿಈಗಿರುವ ಫಾರ್ಮಸಿಸ್ಟ್ ಅವರೇ ಆಸ್ಪತ್ರೆ, ರೋಗಿಗಳನ್ನು ನೋಡಿಕೊಳ್ಳುತ್ತಾರೆ. ಇನ್ನು ಎಸ್‌ಡಿಸಿ ಹುದ್ದೆಗೆ ಯಾರೂ ಇಲ್ಲದ್ದರಿಂದ ಆಸ್ಪತ್ರೆ ಲೆಕ್ಕಪತ್ರ, ಇತರೆ ದಾಖಲೆ ನಿರ್ವಹಣೆ ಇದ್ದ ಸಿಬ್ಬಂದಿಗೇ ತಲೆನೋವಾಗಿದೆ.
ಒಟ್ಟಾರೆ ಜನರ ಆರೋಗ್ಯಕ್ಕೆ ಬೆಳಕಾಗಬೇಕಿದ್ದ ಈ ಆಯುಷ್ ಆಸ್ಪತ್ರೆ ಅಗತ್ಯ ಸಿಬ್ಬಂದಿ ಇಲ್ಲದೆ, ತಜ್ಞ ವೈದ್ಯರಿಲ್ಲದೆ ಬಿಕೋ ಎನ್ನುತ್ತಿದ್ದು ಸರ್ಕಾರದಯೋಜನೆಗಳು ಹೇಗೆ ವಿಫಲಗೊಳ್ಳುತ್ತಿವೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಆಸ್ಪತ್ರೆ ಸರಿಯಾಗಿಯೇ ನಡೆಯುತ್ತಿದೆ. ಸಿಬ್ಬಂದಿ ಸಮಸ್ಯೆ ಇರುವುದರಿಂದ ಸ್ವಲ್ಪ ತೊಂದರೆ ಆಗಿರಬಹುದು. ಮೊದಲೆಲ್ಲ ಒಳ್ಳೆಯ ಹೆಸರು ಇತ್ತು. ಈಗೀಗ ಸ್ವಲ್ಪ ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಸರಿಪಡಿಸಲು ಕ್ರಮ ಜರುಗಿಸಲಾಗುತ್ತದೆ.
–ಡಾ| ಅನುರಾಧಾ ಚಂಚಲಕರ್, ಜಿಲ್ಲಾ ಆಯುಷ್ ಆರೋಗ್ಯಾಧಿಕಾರಿ, ವಿಜಯಪುರ
ನಾನು ವಾರಕ್ಕೆ ಎರಡು ದಿನ ಮಂಗಳವಾರ, ಶುಕ್ರವಾರ ಆಸ್ಪತ್ರೆಗೆ ಬಂದು ರೋಗಿಗಳ ತಪಾಸಣೆ ಮಾಡುತ್ತೇನೆ. ಉಳಿದ ದಿನ ಫಾರ್ಮಾಸಿಸ್ಟ್ ಅವರೇ ನಿರ್ವಹಿಸುತ್ತಾರೆ. ಆಸ್ಪತ್ರೆಯಲ್ಲಿ ಯಾರೂ ಇಲ್ಲದಿದ್ದಾಗ ಬೀಗ ಹಾಕುತ್ತಿರಬಹುದು. ಸಿಬ್ಬಂದಿ ಸಮಸ್ಯೆ ಇರುವುದರಿಂದ ಸಮಸ್ಯೆ ಆಗಿರಬಹುದು. ನಾನಂತೂ ನನ್ನ ಕರ್ತವ್ಯ ಸರಿಯಾಗಿ ಮಾಡುತ್ತೇನೆ.
–ಡಾ| ಎಂ.ಪಿ. ಬಶೆಟ್ಟಿ, ಆಯುಷ್ ವೈದ್ಯಾಧಿಕಾರಿ, ಮುದ್ದೇಬಿಹಾಳ
ತಾಲೂಕು ಮಟ್ಟದ ಆಯುಷ್ ಆಸ್ಪತ್ರೆ ತಜ್ಞ ವೈದ್ಯರು, ಸಮರ್ಪಕ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ನನ್ನ ವಾರ್ಡ್‌ನಲ್ಲಿ ಇರುವುದರಿಂದ ನಾನು ಕಾಳಜಿ ವಹಿಸುತ್ತೇನೆ. ಸಂಬಂಧಿಸಿದ ಹಿರಿಯ ಅಧಿಕಾರಿಗಳ ಗಮನಕ್ಕೆ ಸಮಸ್ಯೆ ತಂದು ಸರಿಪಡಿಸಲು ಪ್ರಯತ್ನಿಸುತ್ತೇನೆ.
–ಶಿವು ಚಲವಾದಿ (ಶಿವಪುರ), ಪುರಸಭೆ ಸದಸ್ಯ
–ಡಿ.ಬಿ. ವಡವಡಗಿ