ಪಾಂಡವಪುರ: ಪುರಾಣ ಪ್ರಸಿದ್ಧ ಐತಿಹಾಸಿಕ ಕುಂತಿಬೆಟ್ಟದಲ್ಲಿರುವ ಕಲ್ಯಾಣಿಕೊಳ ಸೂಕ್ತ ನಿರ್ವಹಣೆ ಇಲ್ಲದೆ ಸಂಪೂರ್ಣ ಪಾಳು ಬಿದ್ದಂತಾಗಿದೆ. ತಾಲೂಕಿನ ಪ್ರವಾಸಿ ತಾಣಗಳ ಪೈಕಿ ಕುಂತಿಬೆಟ್ಟ ಅತ್ಯಂತ ಪ್ರಸಿದ್ಧಿ ಪಡೆದಿದ್ದು, ತನ್ನದೇ ಆದ ಇತಿಹಾಸ ಹೊಂದಿದೆ. ಇಲ್ಲಿನ ಪ್ರಕೃತಿಕ ಸೌಂದರ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.
ಕುಂತಿಬೆಟ್ಟದಲ್ಲಿ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯ ಸೇರಿದಂತೆ ಅನೇಕ ದೇವಾಲಯಗಳಿವೆ. ಇಂದು ಅವುಗಳು ಅವಸಾನ ಅಂಚಿನಲ್ಲಿವೆ. ಜತೆಗೆ ಶ್ರೀಶಂಕರಾನಂದ ಭಾರತಿ ವಿದ್ಯಾಪೀಠ ಇದೆ. ಪಾಂಡವರು ವನವಾಸಕ್ಕೆ ಹೊರಟಾಗ ಇಲ್ಲಿ ಬಂದು ನೆಲೆಸಿದ್ದರು ಎನ್ನುವುದು ಪುರಾಣದಲ್ಲಿ ದಾಖಲಾಗಿದೆ.
ಪುರಾಣ ಕುರುಹುಗಳಿವೆ: ಕುಂತಿಬೆಟ್ಟದಲ್ಲಿ ಭಕಾಸುರನೆಂಬ ರಾಕ್ಷಕ ವಾಸವಾಗಿದ್ದು, ಪಾಂಡವರು ತಂಗಿದ್ದ ವೇಳೆ ಭಕಾಸುರನನ್ನು ಪಾಂಡವರಲ್ಲಿ ಅತ್ಯಂತ ಬಲಶಾಲಿಯಾದ ಭೀಮ ಕೊಂದಿದ್ದನು ಎಂಬ ಇತಿಹಾಸವಿದೆ. ಇದಕ್ಕೆ ಪುರಾವೆ ಎಂಬಂತೆ ಬೆಟ್ಟದಲ್ಲಿ ಭೀಮನ ಪಾದ, ಕುಂತಿದೇವಿ ಸೀರೆ ಒಣಹಾಕಿದ ಸ್ಥಳ, ಅರ್ಜುನ ತನ್ನ ಬಾಣದಿಂದ ಭೂಮಿಗೆ ಸ್ಪರ್ಶಿಸಿ ನೀರು ಬರುವಂತೆ ಮಾಡಿರುವ ದೃಶ್ಯಗಳು ಇಂದಿಗೂ ಪ್ರಸ್ತುತವಾಗಿದ್ದು, ಮತ್ತಷ್ಟು ಕುರುಹುಗಳಿವೆ. ಇದಕ್ಕಾಗಿ ಈ ಬೆಟ್ಟಕ್ಕೆ ಕುಂತಿ ಬೆಟ್ಟ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಬ್ರಿಟೀಷರ ಕಾಲದಲ್ಲಿ ಫ್ರೆಂಚ್ ತುಕಡಿಯೊಂದು ಕುಂತಿಬೆಟ್ಟದ ತಪ್ಪಲಲ್ಲಿ ತಂಗಿದ್ದರು ಎನ್ನುವುದು ಮತ್ತೂಂದು ಇತಿಹಾಸ.
ಹಿರೋಡೆ ಕೆರೆ: ಕುಂತಿಬೆಟ್ಟಕ್ಕೆ ಹೊಂದಿಕೊಂಡಂತೆ ಹಿರೋಡೆ ಕೆರೆ ಇದೆ. ಇದು ಪ್ರಕೃತಿಯ ಮಡಿಲಲ್ಲಿದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯಯವನ್ನು ವೀಕ್ಷಿಸಲು ನಿತ್ಯ ನೂರಾರು ಪ್ರವಾಸಿಗರು ದೂರದೂರುಗಳಿಂದ ಆಗಿಮಿಸುತ್ತಾರೆ. ಇವುಗಳ ಜತೆಗೆ ಬೆಟ್ಟದಲ್ಲಿ ಐತಿಹಾಸಿಕ ಕಲ್ಯಾಣಿ ಕೊಳವೊಂದು ನಿರ್ಮಿಸಲಾಗಿದೆ. ಇಂದು ಕಲ್ಯಾಣಿ ಕೊಳ ಸೂಕ್ತ ನಿರ್ವಹಣೆ ಇಲ್ಲದೆ ಅವನತಿ ಹೊಂದುತ್ತಿದೆ. ಈ ಹಿಂದೆ ಕಲ್ಯಾಣಿಯಲ್ಲಿ ದೇವರ ವಿಗ್ರಹ ಸ್ವಚ್ಛಗೊಳಿಸಲು ಈ ನೀರನ್ನೇ ಬಳಕೆ ಮಾಡಲಾಗುತ್ತಿತ್ತು.
ಕೊಳದ ವಿಶೇಷತೆ: ಸುತ್ತ-ಮುತ್ತಲಿನ ಗ್ರಾಮಸ್ಥರು ಮದುವೆ ಮತ್ತಿತರೆ ಶುಭ ಸಮಾರಂಭ ಮಾಡುವ ವೇಳೆ ಅಡುಗೆಗೆ ಈ ಕೊಳದ ನೀರನ್ನೆ ಬಳಸುತ್ತಿದ್ದರಂತೆ. ಎಂತಹ ಬೇಸಿಗೆ ಕಾಲದಲ್ಲೂ ಈ ಕಲ್ಯಾಣಿಕೊಳದಲ್ಲಿ ನೀರು ಬತ್ತುತ್ತಿರಲಿಲ್ಲ. ಆದರೆ, ಇಲ್ಲಿಗೆ ಬರುವ ಪ್ರವಾಸಿಗರು ಮತ್ತು ಸ್ಥಳೀಯ ಯುವಕರು ಕಲ್ಯಾಣಿ ಕೊಳದ ಸುತ್ತ ಸ್ವಚ್ಛತೆ ಕಾಪಾಡದೆ ಹಾಳು ಮಾಡಿದ್ದಾರೆ. ಪ್ರವಾಸಿಗರು ಕಸಕಡ್ಡಿ, ಪ್ಲಾಸ್ಟಿಕ್, ಬಾಟಿಲು, ಬಟ್ಟೆ, ಚಪ್ಪಲಿ ಸೇರಿದಂತೆ ಇನ್ನಿತರ ತ್ಯಾಜ್ಯ ಕಲ್ಯಾಣಿ ಕೊಳದಲ್ಲಿ ಎಸೆದು ಕಸ ತುಂಬಿಕೊಂಡಿದೆ.
ನೀರು ಕಲುಷಿತ: ಕಲ್ಯಾಣಿಕೊಳದ ನೀರು ಸಂಪೂರ್ಣ ಕಲುಷಿತಗೊಂಡು ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಕೊಳದಲ್ಲಿ ಹಲವಾರು ವರ್ಷಗಳಿಂದ ಹೂಳು ತೆಗೆಯದ ಕಾರಣ ಕಲ್ಯಾಣಿಕೊಳದ ಜಲಕಣ್ಣುಗಳು ಹೂಳಿನಲ್ಲಿ ಮುಚ್ಚಿಹೋಗಿವೆ. ಕಲ್ಯಾಣಿಯ ಸುತ್ತಲು ಕಲ್ಲಿನಿಂದ ಕಟ್ಟಿದ ತಡೆಗೊಡೆ ಕುಸಿದು ಕಲ್ಯಾಣಿಯೊಳಗೆ ಬಿದ್ದಿದೆ. ಕಲ್ಯಾಣಿ ಸುತ್ತಲು ಇರುವ ಮರಗಳ ಎಲೆಗಳು ತೆಂಗಿನ ಗರಿಗಳು ಕೊಳದೊಳಗೆ ಬಿದ್ದಿವೆ. ಕಲ್ಯಾಣಿಯ ನೀರು ಯಾವುದಕ್ಕೂ ಪ್ರಯೋಜನಕ್ಕೆ ಬಾರದಂತಾಗಿದೆ.
ಸ್ವಚ್ಛತೆ ಅಗತ್ಯ: ಇಲ್ಲಿನ ದೇವಸ್ಥಾನದ ಆಡಳಿತ ಮಂಡಳಿ ಅಥವಾ ಪ್ರವಾಸೋದ್ಯಮ ಇಲಾಖೆ ಕಲ್ಯಾಣಿ ಕೊಳ ಸ್ವಚ್ಛಗೊಳಿಸುವ ಮೂಲಕ ನಿರ್ವಹಣೆ ಮಾಡಿ ಸಂರಕ್ಷಣೆ ಮಾಡಬೇಕೆಂಬ ಗೋಜಿಗೆ ಮುಂದಾಗದಿರುವುದು. ನಿಜಕ್ಕೂ ಶೋಚನೀಯ ಸಂಗತಿಯಾಗಿದೆ. ಸ್ಥಳೀಯ ಆಡಳಿತ ಮಂಡಳಿ ಅಥವಾ ಪ್ರವಾಸೋದ್ಯಮ ಇಲಾಖೆಯಾಗಲಿ ಕ್ರಮ ತೆಗೆದುಕೊಂಡು ಸ್ವಚ್ಛಗೊಳಿಸಿ ಪ್ರವಾಸಿ ತಾಣ ಅಭಿವೃದ್ಧಿ ಪಡಿಸುವರೇ ಕಾದು ನೋಡಬೇಕಾಗಿದೆ.
ಕುಮಾರಸ್ವಾಮಿ