Advertisement

ನಾರಾಯಣರಾವ್‌ ಉದ್ಯಾನವನದಲ್ಲಿ ನಿರ್ವಹಣೆ ಕೊರತೆ!

10:58 AM Feb 05, 2019 | |

ಬಳ್ಳಾರಿ: ನಗರದ ಹೃದಯಭಾಗದಲ್ಲಿ ನಿರ್ಮಿಸಲಾಗಿರುವ ನಗರೂರು ನಾರಾಯನರಾವ್‌ (ಕಾಗೆ) ಉದ್ಯಾನವನ ನಿರ್ವಹಣೆಯ ಕೊರತೆ ಎದುರಿಸುತ್ತಿದೆ. ಸ್ವಚ್ಛತೆ ಕಾಪಾಡಬೇಕಿದ್ದ ಮಹಾನಗರ ಪಾಲಿಕೆ ನಿರ್ಲಕ್ಷ್ಯದಿಂದಾಗಿ ಉದ್ಯಾನವನದಲ್ಲಿನ ಕನ್ನಡ ತಾಯಿ ಭುವನೇಶ್ವರಿ ವಿಗ್ರಹ ಬಳಿಯೆಲ್ಲ ಮದ್ಯದ ಬಾಟಲ್‌ಗ‌ಳೇ ರಾರಾಜಿಸುತ್ತಿದ್ದು, ಕಿಡಿಗೇಡಿಗಳ ಹಾವಳಿ ಅಧಿಕವಾಗಿದೆ.

Advertisement

ನಗರದ ಡಾ. ರಾಜ್‌ಕುಮಾರ್‌ ರಸ್ತೆಯಲ್ಲಿ ಕಳೆದ ಎರಡು ದಶಕಗಳ ಹಿಂದೆ ನಿರ್ಮಿಸಲಾಗಿದ್ದ ನಗರೂರು ನಾರಾಯಣರಾವ್‌ ಉದ್ಯಾನವನ ಸದ್ಯ ನಿರ್ವಹಣೆ ಕೊರತೆ ಎದುರಿಸುತ್ತಿದೆ. ಆರಂಭದಲ್ಲಿ ಒಂದಷ್ಟು ವರ್ಷಗಳ ಕಾಲ ಸಾರ್ವಜನಿಕರ ಬಳಕೆಗೆ ಅಣಿಯಾಗಿದ್ದ ಉದ್ಯಾನವನ ನಂತರದ ದಿನಗಳಲ್ಲಿ ನಿರ್ವಹಣೆ ಕೊರತೆಯಿಂದಾಗಿ ಸ್ವಚ್ಛತೆಯಿಲ್ಲದೆ, ಮೂಲೆಗುಂಪಾಗಿದೆ. ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶರ ಅಧಿಕಾರವಧಿಯಲ್ಲಿ ಉದ್ಯಾನವನದಲ್ಲಿ ಕನ್ನಡತಾಯಿ ಭುವನೇಶ್ವರಿ ಮೂರ್ತಿ ಸ್ಥಾಪಿಸಲಾಗಿದೆ. ಉದ್ಯಾನದ ಮೂಲೆಯಲ್ಲಿ ಈ ಮೂರ್ತಿಯನ್ನ ಸ್ಥಾಪಿಸಿದ್ದು, ಅದರ ಹಿಂದುಗಡೆ ಕಾರಂಜಿ ನಿರ್ಮಿಸಲಾಗಿದೆ. ಆದರೆ, ಸಂಜೆಯೊತ್ತಿಗೆ ಈ ಕಾರಂಜಿ ಬಳಿ ಮಗದೊಂದು ಲೋಕ ತೆರೆದುಕೊಳ್ಳುತ್ತದೆ. ಉದ್ಯಾನದ ಹಿಂಭಾಗ ಕೊಳಚೆ ಪ್ರದೇಶದ ನಿವಾಸಿಗಳು ವಾಸಿಸುತ್ತಿದ್ದಾರೆ. ಉದ್ಯಾನದ ಮುಖ್ಯರಸ್ತೆಯ ಗೇಟ್‌ಗೆ ಬೀಗ ಜಡಿದರೂ ಸಹ ಉದ್ಯಾನದ ಒಳಗಡೆಯಿಂದಲೇ ವಾಮಮಾರ್ಗವಿದೆ. ಆ ಮಾರ್ಗವಾಗಿ ಕೊಳಚೆ ಪ್ರದೇಶದ ಯುವಜನರ ತಂಡೋಪ ತಂಡವಾಗಿ ತಡರಾತ್ರಿ ಒಳಪ್ರವೇಶಿಸಿ, ಮದ್ಯ ಸೇವನೆ ಮಾಡುತ್ತಾರೆ. ಮದ್ಯದ ಬಾಟಲ್‌ ಭುವನೇಶ್ವರಿ ಮೂರ್ತಿಯ ಬಳಿಯಿರುವ ನೀರಿನ ಕಾರಂಜಿಯಲ್ಲೇ ಬಿಸಾಡಿ ಹೋಗುತ್ತಾರೆ. ಅದರಿಂದ ಕಾರಂಜಿಯಲ್ಲಿ ನೀರು ಪಾಚಿಗಟ್ಟಿದೆ. ಉದ್ಯಾನದಲ್ಲಿ ವಾಯುವಿಹಾರ ಮಾಡುತ್ತಿರುವವರಿಗಂತೂ ಸೊಳ್ಳೆಗಳ ಕಾಟ ವಿಪರೀತವಾಗಿರುವ ಅನುಭವ ಆಗಿದೆ ಎನ್ನುತ್ತಾರೆ ವಾಯುವಿಹಾರಿಯೊಬ್ಬರು.

ತಾಯಿ ಭುವನೇಶ್ವರಿ ಮೂರ್ತಿ ಬಳಿಯೇ ಮದ್ಯದ ಬಾಟಲ್‌ಗ‌ಳು ಪ್ರತ್ಯಕ್ಷವಾಗಿರುವುದು ದುರ್ದೈವದ ಸಂಗತಿ. ಆ ಕಾರಂಜಿಯ ತುಂಬೆಲ್ಲಾ ಮದ್ಯದ ಬಾಟಲ್‌ ಬಿಸಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕುಡಿದ ಅಮಲಿನಲ್ಲಿ ಮೂರ್ತಿ ಭಗ್ನಗೊಳಿಸಿದೂ ಅಚ್ಚರಿಪಡಬೇಕಿಲ್ಲ. ಹೀಗಾಗಿ, ಪಾಲಿಕೆಯು ಕೂಡಲೇ ಎಚ್ಚೆತ್ತುಕೊಂಡು ಮೂರ್ತಿ ರಕ್ಷಣೆಗೆ ಮುಂದಾಗಬೇಕು. ಅಲ್ಲದೇ, ಉದ್ಯಾನ ಪ್ರವೇಶಿಸಲು ಇರುವ ಹಲವು ವಾಮ ಮಾರ್ಗಗಳನ್ನು ಬಂದ್‌ ಮಾಡಬೇಕು. ಅದಕ್ಕಾಗಿ ಸಿಸಿ ಕ್ಯಾಮೆರಾ ಅಳವಡಿಸಿ, ಉದ್ಯಾನವನಕ್ಕೆ ಸೂಕ್ತ ಭದ್ರತೆ ಒದಗಿಸಬೇಕೆಂಬುದು ನವಕರ್ನಾಟಕ ಯುವಶಕ್ತಿ ಸಂಘಟನೆಯ ಯುವ ಮುಖಂಡ ಮಹೇಶ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next