ಬಾದಾಮಿ: ತಾಲೂಕಿನ ಅನಂತಗಿರಿ ಗ್ರಾಮ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಬಾದಾಮಿ ತಾಲೂಕಿನ ಅಂಡಮಾನ ನಿಕೋಬಾರ್ ಎಂದೇ ಹೆಸರಾಗಿರುವ ಈ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. 1964ರಿಂದಲೂ ಬೆಟ್ಟದ ಮೇಲೆ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಈ ಗ್ರಾಮಕ್ಕೆ ಹೋಗಲು ಸಮರ್ಪಕ ರಸ್ತೆ ಇಲ್ಲ. ಹೀಗಾಗಿ ಇದುವರೆಗೂ ಸಾರಿಗೆ ಸಂಚಾರ ವಾಹನದ ವ್ಯವಸ್ಥೆ ಇಲ್ಲ. ಪ್ರಾಥಮಿಕ ಶಾಲೆ ಬಿಟ್ಟರೆ, ಪ್ರೌಢಶಾಲೆಯ ಶಿಕ್ಷಣ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಹೇಳತೀರದು. ಬೆಟ್ಟದ ಮೇಲೆ ಈ ಗ್ರಾಮ ಇರುವುದರಿಂದ ಬೋರ್ ಹಾಕಿದರೂ ಸಹಿತ ನೀರು ಬರುವುದಿಲ್ಲ. ಹೀಗಾಗಿ ಬೇಸಿಗೆಯ ಸಮಯದಲ್ಲಿ ಸುಮಾರು 5 ಕಿ.ಮೀ. ದೂರದಿಂದ ನೀರು ತರುತ್ತಾರೆ. ಇಲ್ಲವೇ ಹಣ ಕೊಟ್ಟು ನೀರು ತೆಗೆದುಕೊಳ್ಳುವ ಪರಿಸ್ಥಿತಿಯಿದೆ.
ಡಿಸಿ ಬಂದು ಭರವಸೆ ನೀಡಿದ್ದರು: ಕಳೆದ 2018 ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬಹಿಷ್ಕಾರ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಕಾರಿ ಕೆ.ಜಿ. ಶಾಂತಾರಾಮ, ಎಸ್‌ಪಿ ಸಿ.ಬಿ.ರಿಷ್ಯಂತ ಸೇರಿದಂತೆ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ನೀರಿನ ಸಮಸ್ಯೆ, ಸಾರಿಗೆ, ರಸ್ತೆ ಸೇರಿದಂತೆ ಮೂಲಭೂತ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಹೊಸೂರ ಗ್ರಾಮದಿಂದ ಪೈಪ್‌ಲೈನ್ ಮೂಲಕ ನೀರು ಒದಗಿಸುವ ಯೋಜನೆ ಚಾಲನೆಯಲ್ಲಿದ್ದು, ಶೀಘ್ರದಲ್ಲಿಯೇ ನೀರಿನ ಸಮಸ್ಯೆ ಬಗೆಹರಿಯಲಿದೆ. ಉಳಿದಂತೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ ಮಾಡಬೇಕಾಗಿದೆ. ಇದರಿಂದ ಬೇರೆ ಊರಿಗೆ ತೆರಳಲು ಅನುಕೂಲವಾಗಲಿದೆ ಎನ್ನುತ್ತಾರೆ ಗ್ರಾಮಸ್ಥರು.
ಶಾಸಕರಿಗೆ ಮನವಿ ಸಲ್ಲಿಕೆ: ಅನಂತಗಿರಿ ಮೂಲಭೂತ ಸಮಸ್ಯೆಗಳ ಬಗ್ಗೆ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರಿಗೆ ರಸ್ತೆ, ಕುಡಿಯುವ ನೀರು, ಸಾರಿಗೆ ಸಂಚಾರ ಕುರಿತಂತೆ ಮೂಲಭೂತ ಸೌಕರ್ಯ ಕಲ್ಪಿಸಲು ಸಾಕಷ್ಟು ಬಾರಿ ಮೌಖೀಕ ಮತ್ತು ಲಿಖೀತ ಮನವಿ ಸಲ್ಲಿಸಲಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲ: ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲ. ಖಾಸಗಿ ವಾಹನ ಬಾಡಿಗೆ ಮಾಡಿಕೊಂಡು ಬೇಲೂರ ಅಥವಾ ಬಾದಾಮಿ ತಾಲೂಕಾ ಆರೋಗ್ಯ ಕೇಂದ್ರಕ್ಕೆ ಬರಬೇಕು. ಅಧಿಕಾರಕ್ಕೆ ಬರುವ ಮುನ್ನ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ ಇಲ್ಲಿಗೆ ಭೇಟಿ, ಸಮಸ್ಯೆ ಬಗೆಹರಿಸುವುದಾಗಿ ಹೇಳಿ, ಹೋಗಿದ್ದಾರೆ. ಯಾವುದೇ ಕಾರ್ಯ ಮಾಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯ ಪ್ರದೇಶವಾಗಿರುವುದರಿಂದ ಇಲ್ಲಿನ ನಿವಾಸಿಗಳು ಮನೆ ಕಟ್ಟಿಸಿಕೊಳ್ಳುವಂತಿಲ್ಲ. ಅಲ್ಲದೇ ಬ್ಯಾಂಕಿನಿಂದಲೂ ಸಾಲ ಸೌಲಭ್ಯ ದೊರಕುತ್ತಿಲ್ಲ. ವೃದ್ದಾಪ್ಯ ವೇತನ, ಮಾಸಾಶನ ಸೇರಿದಂತೆ ಸರಕಾರದ ಯೋಜನೆಗಳು ದೊರಕುತ್ತಿಲ್ಲ. ಇಲ್ಲಿನ ಜನತೆ ಇನ್ನು ಶಿಲಾಯುಗದ ಕಾಲದಂತೆ ಜೀವನ ಸಾಗಿಸುತ್ತಿದ್ದಾರೆ.
•ಶಶಿಧರ ವಸ್ತ್ರದ