Advertisement

ಬಸ್‌ ನಿಲ್ದಾಣದಲ್ಲಿಲ್ಲ ಮೂಲ ಸೌಕರ್ಯ

02:25 PM Apr 11, 2022 | Team Udayavani |

ಸಿರುಗುಪ್ಪ: ನಗರದ ಹೃದಯ ಭಾಗದಲ್ಲಿರುವ ಬಸ್‌ನಿಲ್ದಾಣವನ್ನು ರೂ. 2.48 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದರೂ ಪ್ರಯಾಣಿಕರು ಮೂಲ ಸೌಕರ್ಯಗಳಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಹಳೇ ಬಸ್‌ನಿಲ್ದಾಣವು ಚಿಕ್ಕದಾಗಿದ್ದು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇಲ್ಲಿ ಹೊಸ ಬಸ್‌ನಿಲ್ದಾಣವನ್ನು ಸರ್ಕಾರ ನಿರ್ಮಾಣ ಮಾಡಿದೆ. ಆದರೆ ಬಸ್‌ನಿಲ್ದಾಣದಲ್ಲಿರಬೇಕಾದ ಕನಿಷ್ಟ ಸೌಲಭ್ಯಗಳಿಲ್ಲದೆ ಪ್ರತಿನಿತ್ಯವೂ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಇರುತ್ತದೆ.

ತಾಲೂಕಿನ ವಿವಿಧ ಗ್ರಾಮಗಳಿಂದ ಶಾಲಾ ಕಾಲೇಜುಗಳಿಗಾಗಿ ಸುಮಾರು 4-5 ಸಾವಿರ ವಿದ್ಯಾರ್ಥಿಗಳು ಮತ್ತು ವ್ಯಾಪಾರ ವಹಿವಾಟು, ಸರ್ಕಾರಿ ಕಚೇರಿಗಳಲ್ಲಿ ವಿವಿಧ ಕೆಲಸ ಕಾರ್ಯಗಳಿಗಾಗಿ ಒಂದು ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ನಗರಕ್ಕೆ ಬರುತ್ತಿದ್ದಾರೆ. ಬೀದರ್‌ನಿಂದ ಚಾಮರಾಜ ನಗರದವರೆಗೆ ಮತ್ತು ರಾಯಚೂರಿನಿಂದ ಬೆಂಗಳೂರುವರೆಗೆ ಪ್ರತಿನಿತ್ಯವೂ ನೂರಾರು ಬಸ್‌ಗಳು ಇದೇ ನಿಲ್ದಾಣಕ್ಕೆ ಬಂದು ಹೋಗುತ್ತವೆ. ಈ ನಿಲ್ದಾಣದಲ್ಲಿ ಪ್ರತಿನಿತ್ಯ ಸುಮಾರು 10ಸಾವಿರಕ್ಕೂ ಹೆಚ್ಚು ಜನರು ಪ್ರಯಾಣ ಮಾಡುತ್ತಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯ ಪ್ರಯಾಣಿಕರು ಸಂಚರಿಸುವ ನಿಲ್ದಾಣದಲ್ಲಿ ಕುಡಿಯುವ ನೀರು, ಉತ್ತಮ ಶೌಚಾಲಯ, ಕುಳಿತುಕೊಳ್ಳಲು ಆಸನಗಳು, ಬಿಸಿಲಿನ ತಾಪ ತಣಿಸಲು ಫ್ಯಾನ್‌ಗಳು, ಮನರಂಜನೆಗಾಗಿ ದೊಡ್ಡ ಪರದೆಯ ಟಿವಿಗಳನ್ನು ಅಳವಡಿಸಬೇಕಾಗಿದೆ.

ಹೊಸ ಬಸ್‌ನಿಲ್ದಾಣವು ನಿರ್ಮಾಣವಾಗಿ ಒಂದೂವರೆ ವರ್ಷದ ನಂತರ 20 ಫೆಬ್ರವರಿ 2022ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು ಬಸ್‌ನಿಲ್ದಾಣವನ್ನು ಲೋಕಾರ್ಪಣೆ ಮಾಡಿ ಹೋಗಿದ್ದರೂ ಮೂಲ ಸೌಕರ್ಯಗಳ ಕೊರತೆ ಮಾತ್ರ ನೀಗಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನ ರೂ. 30ಲಕ್ಷ ವೆಚ್ಚದಲ್ಲಿ ಈ ನಿಲ್ದಾಣದಲ್ಲಿ ಉತ್ತಮವಾದ ಶೌಚಾಲಯಗಳನ್ನು ನಿರ್ಮಿಸುವುದಾಗಿ ಈ ಕಾರ್ಯವನ್ನು ಆದಷ್ಟು ಶೀಘ್ರವಾಗಿ ಕೈಗೆತ್ತಿಕೊಳ್ಳುವುದಾಗಿ ಶಾಸಕ ಎಂ.ಎಸ್‌. ಸೋಮಲಿಂಗಪ್ಪ ನೀಡಿದ ಭರವಸೆಯೂ ಈಡೇರಿಲ್ಲ.

ಹಳೆಯ ಶೌಚಾಲಯಗಳಿದ್ದು, ಇವುಗಳು ಸರಿಯಾದ ನಿರ್ವಹಣೆ ಇಲ್ಲದೆ ಹಾಳಾಗಿದ್ದು, ಅನಿವಾರ್ಯವಾಗಿ ಸಾರ್ವಜನಿಕರು ಈ ಶೌಚಾಲಯಗಳನ್ನೇ ಬಳಸುತ್ತಿದ್ದಾರೆ. ಇನ್ನೂ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ನೆಲದ ಮೇಲೆಯೇ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಬಸ್‌ನಿಲ್ದಾಣದಲ್ಲಿರುವ ಬೇಕರಿ ಮತ್ತು ನಿಲ್ದಾಣದ ಮುಂದಿರುವ ಹೋಟೆಲ್‌ ಅಂಗಡಿಗಳಲ್ಲಿ ದುಡ್ಡುಕೊಟ್ಟು ನೀರು ಖರೀದಿಸಿ ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಆದರೂ ಕೂಡ ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ನಿಲ್ದಾಣದಲ್ಲಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಲು ಪ್ರಯತ್ನಿಸದೇ ಇರುವುದರಿಂದ ನಿತ್ಯವೂ ಪ್ರಯಾಣಿಕರು ಪರದಾಡುವಂತಾಗಿದೆ ಎಂದು ಪ್ರಯಾಣಿಕರಾದ ಹುಸೇನಪ್ಪ, ರಾಘವೇಂದ್ರರೆಡ್ಡಿ, ಮಂಜುನಾಥ, ಎಂ.ಎಸ್‌.ವೀರೇಶ, ಎಂ.ದೊಡ್ಡಬಸಪ್ಪ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಲ್ದಾಣದಲ್ಲಿ ಆಸನಗಳ ವ್ಯವಸ್ಥೆ ಮಾಡಬೇಕೆಂದು ನಮ್ಮ ಮೇಲಧಿ ಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರವಾಗಿ ಆಸನಗಳ ವ್ಯವಸ್ಥೆಯನ್ನು ಪ್ರಯಾಣಿಕರಿಗೆ ಮಾಡಿಕೊಡಲಾಗುವುದು. ಕೆ.ಎಂ.ತಿರುಮಲೇಶ, ಸಾರಿಗೆ ಘಟಕದ ವ್ಯವಸ್ಥಾಪಕ, ಸಿರುಗುಪ್ಪ

ಆರ್‌.ಬಸವರೆಡ್ಡಿ ಕರೂರು

Advertisement

Udayavani is now on Telegram. Click here to join our channel and stay updated with the latest news.

Next