ತಿಪಟೂರು: ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಕಲಿಕೆ ಜೊತೆಗೆ ಗುಣಾತ್ಮಕ ಮತ್ತು ಮೌಲ್ಯಾಧಾರಿತ ಶಿಕ್ಷಣ ನೀಡುವ ಸಲುವಾಗಿ ರಾಜ್ಯ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭಿಸಿದ್ದು, ಹೊನ್ನವಳ್ಳಿಯಲ್ಲಿ ಪಬ್ಲಿಕ್ ಶಾಲೆ ತೆರೆದಿದ್ದರೂ ಮೂಲಸೌಕರ್ಯ ಒದಗಿಸಿಲ್ಲ. ನೀರು, ಶೌಚಗೃಹ, ಕೊಠಡಿ, ಗ್ರಂಥಾಲಯ ಸೇರಿ ಉಪನ್ಯಾಸಕರು, ಶಿಕ್ಷಕರು ಹಾಗೂ ಸಿಬ್ಬಂದಿ ನಿಯೋಜಿಸದಿರುವುದು ಮಕ್ಕಳ ಉತ್ತಮ ಶಿಕ್ಷಣಕ್ಕೆ ಕುತ್ತು ಬರುವಂತಾಗಿದೆ. ಖಾಸಗಿ ಶಾಲೆಗಳತ್ತ ಪೋಷಕರ ವ್ಯಾಮೋಹ ಕಡಿಮೆ ಮಾಡಿ ಎಲ್ಕೆಜಿಯಿಂದ ದ್ವಿತೀಯ ಪಿಯುಸಿಯವರೆಗೂ ಒಂದೇ ಸೂರಿನಡಿ ಶಿಕ್ಷಣ ನೀಡಬೇಕೆಂಬ ಸರ್ಕಾರದ ಉದ್ದೇಶ ಸರಿಯಾಗಿದ್ದರೂ ಅದಕ್ಕೆ ಬೇಕಾದ ಅವಶ್ಯಕತೆ ಒದಗಿಸದಿರುವುದು ಪಬ್ಲಿಕ್ ಶಾಲೆಗಳಿಗೆ ಆರಂಭದಲ್ಲೆ ಗ್ರಹಣ ಬಡಿದಂತಾಗಿದೆ.
ಶೌಚಗೃಹ ಕೊರತೆ: ಹೊನ್ನವಳ್ಳಿಯಲ್ಲಿಯೂ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಲ್.ಕೆ.ಜಿಯಿಂದ ದ್ವಿತೀಯ ಪಿಯುಸಿಯವರೆಗೂ ಶಿಕ್ಷಣ ನೀಡಲಾಗು ತ್ತಿದ್ದು, 850ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ 200ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದು, ಎಲ್ಕೆಜಿ- ಯುಕೆಜಿಯಲ್ಲಿ 72, 1-7ನೇ ತರಗತಿ-290, 8ರಿಂದ 10ನೇ ತರಗತಿ-200, ಪ್ರಥಮ-ದ್ವಿತೀಯ ಪಿಯುಸಿ- 180 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಕುಡಿಯವ ನೀರು, ಶೌಚಗೃಹ ಮತ್ತು ಶಿಕ್ಷಕರು, ಉಪನ್ಯಾಸಕ ಕೊರತೆ ಇದೆ. ಅಲ್ಲದೆ ದ್ವಿತೀಯ ದರ್ಜೆ ಸಹಾಯಕರು ಮತ್ತು ಡಿ’ಗ್ರೂಪ್ ನೌಕರರ ಜಾಗ ಖಾಲಿ ಇದ್ದು, ಕಾಲೇಜು ಅಭಿವೃದ್ಧಿ ಸಮಿತಿಯಿಂದ ಕೆಲಸಗಾರರ ನೇಮಕ ಮಾಡಿಕೊಳ್ಳಲಾಗಿದೆ. ಮಕ್ಕಳ ಸಂಖ್ಯೆಗೆ ಇನ್ನೆರಡು ಶೌಚಗೃಹಗಳ ಅವಶ್ಯಕತೆ ಇದೆ. ಕೊಠಡಿಗಳ ಕೊರತೆ ಒಂದು ಕಡೆಯಾದರೆ ಕುಡಿ ಯುವ ನೀರನ್ನು ಶಾಲೆ ಮುಂಭಾಗದಲ್ಲಿರುವ ಶುದ್ಧ ಕುಡಿವ ನೀರಿನ ಘಟಕದಿಂದ ತರುವಂತಾಗಿದ್ದು, ಅದೇನಾದರೂ ಕೆಟ್ಟರೆ ಮಕ್ಕಳಿಗೆ ಕುಡಿಯಲು ನೀರೇ ಇಲ್ಲ ದಾಗುತ್ತದೆ. ಶೌಚಗೃಹ ಮತ್ತು ಮಕ್ಕಳ ಬಿಸಿಯೂಟದ ಪಾತ್ರೆ, ಗಿಡಗಳಿಗೆ ನೀರು ಹಾಕಲು ಗ್ರಾಮ ಪಂಚಾಯಿತಿಯಿಂದ ಎರಡು ದಿನಗಳಿಗೊಮ್ಮೆ ಬಿಡುವ ನೀರು ನಂಬಿಕೂರುವಂತಾಗಿದೆ.
ಸರ್ಕಾರಿ ಶಾಲೆಯಲ್ಲಿ ನೀಡುವ ಬಿಸಿಯೂಟ, ಹಾಲು, ಶೂ, ಸಮವಸ್ತ್ರ, ಪಠ್ಯಪುಸ್ತಕ ಮಕ್ಕಳಿಗೆ ನೀಡ ಲಾಗುತ್ತಿದ್ದು, ಆದ ಕಾರಣ ದಾಖಲಾತಿ ಹೆಚ್ಚಿದೆ. ಅಲ್ಲದೆ ಎಲ್ಕೆಜಿ, ಯುಕೆಜೆ ಮತ್ತು 1ನೇ ತರಗತಿಯಿಂದ ಈ ವರ್ಷದಿಂದ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸಲಾಗಿದೆ. ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ಗ್ರಾಮಗಳಲ್ಲಿ ಜಾಥಾ ನಡೆಸಿ ಪೋಷಕರಲ್ಲಿ ಪಬ್ಲಿಕ್ ಶಾಲೆ ಅರಿವು ಮೂಡಿಸಿ ಶಾಲೆಗೆ ಹೆಚ್ಚಿನ ಮಕ್ಕಳು ದಾಖಲಾಗುವಂತೆ ಮಾಡಿದ್ದಾರೆ. ಅಲ್ಲದೆ ಶಾಲಾ ಪರಿಸರ ಸ್ವಚ್ಛ ಮತ್ತು ಸುಂದರವಾಗಿದ್ದರೆ ಪೋಷಕರಲ್ಲಿ ಪಬ್ಲಿಕ್ ಶಾಲೆಗಳ ಮೇಲೆ ಒಲವು ಮೂಡಲಿದೆ ಎಂಬ ಕಾರಣಕ್ಕೆ ಶಾಲಾವರಣ, ಕೊಠಡಿ ಸೇರಿ ಶಾಲಾ ವಾತಾವರಣ ಬದಲಿಸಿದ್ದು, ಪೋಷಕರು ಮತ್ತು ಮಕ್ಕಳನ್ನು ಸೆಳೆಯುವಂತಾಗಿದೆ.
ಇಕೋ ಕ್ಲಬ್ ಮೂಲಕ ನೆಟ್ಟಿರುವ ಗಿಡಗಳಿಗೆ ಪರಿಸರ ಪ್ರೇಮಿಗಳ ಹೆಸರಿಟ್ಟು ಮಕ್ಕಳಿಗೆ ಪಾಲನೆ ಪೋಷಣೆ ಜವಾಬ್ದಾರಿ ವಹಿಸಲಾಗಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಅರಿವು ಮೂಡಿಸಲಾಗುತ್ತಿದೆ. ಸರ್ಕಾರ ಗ್ರಾಮೀಣ ಮಕ್ಕಳಿಗೆ ಅನುಕೂಲವಾಗ ಬೇಕೆಂದು ಪಬ್ಲಿಕ್ ಶಾಲೆ ತೆರೆದು ಅಗತ್ಯ ಸೌಲಭ್ಯ ಒದಗಿಸದರೆ ಖಾಸಗಿ ಶಾಲೆಗೆಳಿಗೆ ಸಮಾನವಾಗಿರ ಬಹುದು. ಪೋಷಕರಲ್ಲಿ ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ ಕಡಿಮೆಗೊಳಿಸಬಹುದು. ಈ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಬೇಕಿದೆ.
● ಬಿ. ರಂಗಸ್ವಾಮಿ