Advertisement

ದಶಕದ ಕನಿಷ್ಠ ವರ್ಷಧಾರೆ ದಾಖಲು

11:54 AM Sep 01, 2020 | Suhan S |

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳು ಈ ಬಾರಿ ಆಗಸ್ಟ್‌ನಲ್ಲಿ ಗರಿಷ್ಠ ಮಳೆಯ ಮೂಲಕ ದಾಖಲೆ\ ಬರೆದಿವೆ. ಆದರೆ, ಇದೇ ಅವಧಿಯಲ್ಲಿ ಬೆಂಗಳೂರು ಕನಿಷ್ಠ ಮಳೆಯ ದಾಖಲೆಗೆ ಸಾಕ್ಷಿಯಾಗಿದೆ.

Advertisement

ನಗರದಲ್ಲಿ ಇಡೀ ತಿಂಗಳು ಕೇವಲ 75.9 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಸುಮಾರು ಶೇ. 50 ಕಡಿಮೆ ಬಿದ್ದಿದೆ. ಇದು ಕಳೆದ ಒಂದು ದಶಕದಲ್ಲಿ ದಾಖಲಾದ ಅತ್ಯಂತ ಕನಿಷ್ಠ ಮಳೆ ಇದಾಗಿದ್ದು, ಮೂರು ದಶಕಗಳ ಸರಾಸರಿ 147 ಮಿ.ಮೀ.ಗೆ ಲೆಕ್ಕಹಾಕಿದರೂ ಇದು ಹೆಚ್ಚು-ಕಡಿಮೆ ಶೇ. 50ರಷ್ಟು ಕೊರತೆ ಆಗುತ್ತದೆ. 2016ರಲ್ಲಿ ಸುರಿದ 82.1 ಮಿ.ಮೀ. ಮಳೆ, ಕಳೆದ ಹತ್ತು ವರ್ಷಗಳಲ್ಲಿ ಆಗಸ್ಟ್‌ ನಲ್ಲಿ ದಾಖಲಾದ ಅತಿ ಕಡಿಮೆ ಮಳೆ ಆಗಿದೆ.

ಆಗಸ್ಟ್‌ನಲ್ಲಿ ರಾಜ್ಯದ 26 ಜಿಲ್ಲೆಗಳಲ್ಲಿ ವಾಡಿಕೆ ಅಥವಾ ವಾಡಿಕೆಗಿಂತ ಹೆಚ್ಚು ಮಳೆ ದಾಖಲಾಗಿದೆ. ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಕೊರತೆ ಕಂಡು ಬಂದಿದ್ದು, ರಾಮನಗರ (ಶೇ. 58ರಷ್ಟು ಕೊರತೆ) ಹೊರತುಪಡಿಸಿದರೆ, ಬೆಂಗಳೂರು ನಗರ (ಶೇ. 51) ಎರಡನೇ ಅತಿ ಕಡಿಮೆ ಮಳೆಗೆ ಸಾಕ್ಷಿಯಾಗಿದೆ. ಹಾಗೆ ನೋಡಿದರೆ, ಜೂನ್‌ ಮತ್ತು ಜುಲೈಗಿಂತ ವಾಡಿಕೆ ಆಗಸ್ಟ್‌ನಲ್ಲೇ ಹೆಚ್ಚಿದೆ. ಆದರೆ, ಹಿಂದಿನ ಎರಡೂ ತಿಂಗಳಿಗಿಂತ ಕಡಿಮೆ ಮಳೆ ದಾಖಲಾಗಿದೆ.

ಮೂರ್‍ನಾಲ್ಕು ದಿನಗಳಲ್ಲಿ ಮಳೆ ನಿರೀಕ್ಷೆ: ಜೂನ್‌ನಲ್ಲಿ ವಾಡಿಕೆ ಮಳೆ 87 ಮಿ.ಮೀ. ಬಿದ್ದದ್ದು 115.8 ಮಿ. ಮೀ., ಜುಲೈನಲ್ಲಿ 109 ಮಿ.ಮೀ. ಬದಲಿಗೆ 159.1 ಮಿ.ಮೀ. ಬಿದ್ದಿದೆ. ಜತೆಗೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಅಂದರೆ, ನಗರದ ಸುತ್ತಲಿನ ವಾತಾವರಣದಲ್ಲ ತೇವಾಂಶ ಅಧಿಕವಾಗಿದ್ದು, ಒತ್ತಡ ಹೆಚ್ಚಾಗಿದೆ. ಈ ಮಧ್ಯೆ ವಾತಾವರಣದಲ್ಲಿ ಯಾವುದೇ ಬೆಳವಣಿಗೆಗಳು ಕಂಡುಬರದಿರುವುದು ಬೆಂಗಳೂರಿನಲ್ಲಿ ಮಳೆ ಕೊರತೆಗೆ ಕಾರಣ ಎಂದು ಹೇಳಬಹುದು. ಮುಂದಿನ ಮೂರ್‍ನಾಲ್ಕು ದಿನಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್‌. ಪಾಟೀಲ ಮಾಹಿತಿ ನೀಡಿದರು.

ಈ ಹಿಂದೆ ಹಲವಾರು ಬಾರಿ ಆಗಸ್ಟ್‌ನಲ್ಲಿ ಕಡಿಮೆ ಮಳೆಯಾದ ಉದಾಹರಣೆಗಳಿವೆ. 1907ರಲ್ಲಿ ಇಡೀ ತಿಂಗಳಲ್ಲಿ ಕೇವಲ 24.3 ಮಿ.ಮೀ. ದಾಖಲಾಗಿತ್ತು. ಅಷ್ಟೇ ಅಲ್ಲ, ಸುಮಾರು 12 ಬಾರಿ 50 ಮಿ.ಮೀ.ಗಿಂತ ಕಡಿಮೆ ಮಳೆಯಾಗಿದ್ದೂ ಇದೆ. 2000ದಿಂದ ಈಚೆಗೆ ಆಗಸ್ಟ್‌ನಲ್ಲಿ ಸಾಮಾನ್ಯವಾಗಿ ಉತ್ತಮ ಮಳೆ ದಾಖಲಾಗುತ್ತಿತ್ತು. 2010ರಿಂದ 2020 ಮಧ್ಯೆ ಎರಡು ಬಾರಿ 100 ಮಿ.ಮೀ. ಗಿಂತ ಕಡಿಮೆ ದಾಖಲಾಗಿದೆ. ಹಾಗೂ ಇದೇ ತಿಂಗಳಲ್ಲಿ ಗರಿಷ್ಠ 387.1 ಮಿ.ಮೀ. (1998ರಲ್ಲಿ) ಮಳೆಗೂ ಬೆಂಗಳೂರು ಸಾಕ್ಷಿಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

Advertisement

ಇನ್ನು ಜೂ. 1ರಿಂದ ಆ. 31ರವರೆಗಿನ ಅಂಕಿ-ಅಂಶಗಳನ್ನು ಲೆಕ್ಕಹಾಕಿದರೆ, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ವಾಡಿಕೆಗಿಂತ ಶೇ. 19 ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆ 293.2 ಮಿ.ಮೀ. ಇದ್ದು, ಬಿದ್ದ ಮಳೆ 348.6 ಮಿ.ಮೀ. ಆಗಿದೆ.

……………………………………………………………………………………………………………………………………………………..

ರಾತ್ರಿ ಮಳೆಗೆ ಧರೆಗುರುಳಿದ ಮರಗಳು : ಬೆಂಗಳೂರು: ನಗರದಲ್ಲಿ ಭಾನುವಾರ ತಡರಾತ್ರಿ ಸುರಿದ ಭಾರೀ ಮಳೆಗೆ ನಗರದ ವಿವಿಧೆಡೆ ಐದಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಮರದ ರಂಬೆ- ಕೊಂಬೆಗಳು ಧರೆಗುರುಳಿವೆ. ಒಂದು ಆಟೋ ಜಖಂಗೊಂಡಿದೆ.

ಜೆಜೆ ನಗರದ ಮುಖ್ಯರಸ್ತೆ, ಸಿಬಿಎಲ್‌ ರಸ್ತೆ ಹಾಗೂ ಕೆ.ಆರ್‌.ಪುರದಲ್ಲಿ ತಲಾ ಒಂದು ಮರ ಧರೆಗುರುಳಿದೆ. ಕಾಟನ್‌ಪೇಟೆ ಟ್ಯಾಂಕ್‌ ಬಂಡ್‌ ರಸ್ತೆಯಲ್ಲಿ ರಾತ್ರಿ ತೀವ್ರ ಗಾಳಿ ಮಳೆಗೆ ಮರವೊಂದು ಧರೆಗುರುಳಿದ್ದು, ಆಟೋರಿಕ್ಷಾದ ಮೇಲೆ ಬಿದ್ದ ಪರಿಣಾಮ ಆಟೋ ಜಖಂಗೊಂಡಿದೆ. ಚಾಲಕ ಮತ್ತು ಪ್ರಯಾಣಿಕರನ್ನು ಗಸ್ತು ತಿರುಗುತ್ತಿದ್ದ ಪೊಲೀಸರು ರಕ್ಷಿಸಿದ್ದಾರೆ. ಆದರೆ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಬಿಬಿಎಂಪಿಯ ಸಹಾಯವಾಣಿ ಸಿಬ್ಬಂದಿ ತಿಳಿಸಿದ್ದಾರೆ.

ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಮೆಜೆಸ್ಟಿಕ್‌ ಸುತ್ತಮುತ್ತಲಿನ ಪ್ರದೇಶ, ಹೆಬ್ಟಾಳ, ಜಯಮಹಲ್‌ ರಸ್ತೆ, ಬನಶಂಕರಿ ಭಾಗದ ಮೇಲ್ಸೇವೆ ಸೇರಿದಂತೆ ವಿವಿಧೆಡೆ ಮಳೆಯಿಂದ ನೀರು ನಿಂತು ವಾಹನ ಸವಾರರು ಪರದಾಡುವ ವಾತಾವರಣ ನಿರ್ಮಾಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next