Advertisement

ಪ್ರತಿಭಾವಂತರಿಗೆ ಮಾರ್ಗದರ್ಶನ ಕೊರತೆ: ಡಾ|ಈಶ್ವರ

11:02 AM Jul 07, 2019 | Team Udayavani |

ಶಿರಸಿ: ಮಲೆನಾಡು ಹಾಗೂ ಕರಾವಳಿ ಭಾಗದ ವಿದ್ಯಾರ್ಥಿಗಳು ಪ್ರತಿಭಾವಂತರು. ಆದರೆ ಮಾರ್ಗದರ್ಶನದ ಕೊರತೆಯಿಂದಾಗಿ ಈ ಭಾಗದ ವಿದ್ಯಾರ್ಥಿಗಳು ನಾಗರಿಕ ಸೇವಾ ಪರೀಕ್ಷೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುತ್ತಿಲ್ಲ. ನಾಗರಿಕ ಸೇವಾ ಪರೀಕ್ಷೆಯ ಕ್ಷೇತ್ರ ವ್ಯಾಪ್ತಿ ವಿಶಾಲವಾಗಿದೆ ಎಂದು ಇಲ್ಲಿನ ಸಹಾಯಕ ಆಯುಕ್ತ ಡಾ| ಈಶ್ವರ ಉಳ್ಳಾಗಡ್ಡಿ ಹೇಳಿದರು.

Advertisement

ಅವರು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಸಮುತ್ಕರ್ಷ ಸಂಸ್ಥೆ ಹುಬ್ಬಳ್ಳಿ, ಮೊಡರ್ನ ಎಜ್ಯಕೇಶನ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ನಾಗರಿಕ ಸೇವಾ ಪರೀಕ್ಷೆಗಳ ಕುರಿತಾದ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸತತ ಪರಿಶ್ರಮ ನಿರಂತರ ಅಭ್ಯಾಸದಿಂದ ಪರೀಕ್ಷೆಗಳಲ್ಲಿ ಯಶಸ್ಸು ಸಾಧ್ಯ. ಶಿಸ್ತು ಹಾಗೂ ವಿಷಯಗಳಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳುವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ಸಲಹೆ ನೀಡಿ ಅನೇಕ ಉದಾಹರಣೆಗಳನ್ನು ಮುಂದಿಟ್ಟರು.

ಅತಿಥಿ ಸ್ವಯಂ ಸಂಸ್ಥೆ ಶಿರಸಿ ಅಧ್ಯಕ್ಷ ಎನ್‌.ಎಂ. ಹೆಗಡೆ, ತಂದೆ ತಾಯಿಗಳ ಕನಸನ್ನು ನನಸು ಮಾಡಬೇಕೆಂಬುದನ್ನು ವಿದ್ಯಾರ್ಥಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ದೊರೆಯುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸತತ ಪರಿಶ್ರಮ ಹಾಗೂ ಸೂಕ್ತ ಮಾರ್ಗದರ್ಶನದಿಂದ ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆ ಪ್ರಕಟವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂದರು.

Advertisement

ಸ್ವಯಂ ಸಂಸ್ಥೆ ಕಾರ್ಯದರ್ಶಿ ಆರ್‌.ಎಸ್‌. ಹೆಗಡೆ, ಮಗುವಿನಲ್ಲಿರುವ ಸುಪ್ತ ಪ್ರತಿಭೆ ಅರಳಿಸುವುದೇ ಶಿಕ್ಷಣ, ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು. ಅಂತಹ ಛಲ ವಿದ್ಯಾರ್ಥಿಗಳಲ್ಲಿ ಬೆಳೆದು ಬರಬೇಕು ಸತತ ಪರಿಶ್ರಮ ಅಭ್ಯಾಸ ಗುರಿಯೆಡೆಗೆ ತಲುಪುವ ಇಚ್ಛಾಶಕ್ತಿ ಇದ್ದರೆ ಯಾವುದೂ ಅಸಾಧ್ಯವಲ್ಲ ಎಂದರು.

ಜು.20 ರಿಂದ ಶಿರಸಿಯ ಚೈತನ್ಯ ಮಹಾವಿದ್ಯಾಲಯದಲ್ಲಿ ಪ್ರತೀ ಶನಿವಾರ, ಭಾನುವಾರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪ್ರಾರಂಭವಾಗಲಿದ್ದು ಕೊನೆಯ ವರ್ಷದ ಪದವಿ ವಿದ್ಯಾರ್ಥಿಗಳು ಹಾಗೂ ಈಗಾಗಲೇ ಪದವೀಧದರು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಪ್ರಾಂಶುಪಾಲ ಡಾ| ಎ.ಕೆ ಕಿಣಿ ಅಧ್ಯಕ್ಷತೆವಹಿಸಿ, ಹಿಂದಿನ ಕಾಲದಂತೆ ಇಂದಿನ ಯುಗದಲ್ಲಿ ಮಾಹಿತಿ ಕೊರತೆಯಿಲ್ಲ. ಸ್ವಯಂನಂತಹ ಸಂಸ್ಥೆಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ನೀಡುತ್ತಿರುವುದು ಶ್ಲಾಘನೀಯವಾದದ್ದು ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ನಿವೃತ್ತ ಪ್ರಾಚಾರ್ಯ ಕೆ.ಎನ್‌ ಹೊಸ್ಮನಿ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಎಂ.ಪಿ. ಭಟ್ಟ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನೇಹಾ ವಂದಿಸಿದರು. ಮೇಘನಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next