ಮಹಾನಗರ: ಹಲವಾರು ತಿಂಗಳುಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಳು ಬಿದ್ದಿದ್ದ ಮಲ್ಲಿಕಟ್ಟೆ ಪಾರ್ಕ್‌ನ ಮೊದಲ ಹಂತದ ಕಾಮಗಾರಿ ಸುಮಾರು ಈಗಾಗಲೇ ಪೂರ್ಣಗೊಂಡಿದ್ದರೂ ಎರಡನೇ ಹಂತದ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಪರಿಣಾಮ ಪಾರ್ಕ್ ಇದೀಗ ನಿರಾಶ್ರಿತರ ತಾಣವಾಗಿ ಮಾರ್ಪಾಡಾಗಿದೆ.
ಪಾರ್ಕ್‌ನ ಸುತ್ತಲೂ ತಡೆಗೋಡೆ ನಿರ್ಮಾಣವಾಗಿದ್ದರೂ ನಾಲ್ಕೂ ಕಡೆಯಿಂದ ಪಾರ್ಕ್ ಪ್ರವೇಶಿಸಲು ಅವಕಾಶ ನೀಡಿರು ವುದು ಇದಕ್ಕೆ ಪ್ರಮುಖ ಕಾರಣ. ಪಾಲಿಕೆಯ 14ನೇ ಹಣಕಾಸು ಯೋಜನೆ ಯಲ್ಲಿ ಪಾರ್ಕ್‌ನ ಮೊದಲನೇ ಹಂತದ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದ್ದು, 14.30 ಲಕ್ಷ ರೂ. ವೆಚ್ಚದಲ್ಲಿ ಪಾರ್ಕ್‌ಗೆ ಆವರಣ ಸಹಿತ ಪಾರ್ಕ್ ಒಳಾಂಗಣದ ಕೆಲವೊಂದು ಕಾಮಗಾರಿ ನಡೆದಿದೆ. ಇನ್ನೂ ಸುಮಾರು 40ರಿಂದ 50 ಲಕ್ಷ ರೂ. ಕಾಮಗಾರಿ ಬಾಕಿ ಇದ್ದು, ಅನುದಾನದ ಹೊಂದಾಣಿಕೆ ನಡೆಯುತ್ತಿದೆ. ಪರಿಣಾಮ, ಕಾಮಗಾರಿಗೆ ಸದ್ಯಕ್ಕೆ ಸ್ಥಗಿತ ಗೊಂಡಿದೆ.
2ನೇ ಹಂತದ ಕಾಮಗಾರಿಯಲ್ಲಿ ಪಾರ್ಕ್ ನೊಳಗೆ ವಿಶೇಷವಾಗಿ ಆಕ್ಯುಪಂಕ್ಚರ್ ಟ್ರಾಕ್ ನಿರ್ಮಾಣಗೊಳ್ಳಬೇಕಿದೆ. ಹುಲ್ಲುಹಾಸು, ಕುಳಿತುಕೊಳ್ಳಲು ಆಸನ, ಸಿಸಿಟಿವಿ ಸಹಿತ ಮೂಲ ಸೌಕರ್ಯ ಕಾಮಗಾರಿ ಇನ್ನಷ್ಟೇ ನಡೆಯಬೇಕಿದೆ. ಈ ಪಾರ್ಕ್ ನೊಳಗೆ ಗ್ರಂಥಾಲಯವಿದ್ದು, ಅದಕ್ಕೆ ಹೊಸ ಸ್ಪರ್ಶ ನೀಡಲು ಚಿಂತನೆ ನಡೆಯುತ್ತಿದೆ.
ಪಾರ್ಕ್ ಒಳಗೆ ಗ್ರಂಥಾಲಯವಿದ್ದು, ಆಕರ್ಷಣೆ ಪಡೆದಿತ್ತು. ಆದರೆ ಇಲ್ಲಿನ ಪರಿಸ್ಥಿತಿ ಯಿಂದಾಗಿ ಸಾರ್ವಜನಿಕರು ಗ್ರಂಥಾಲಯ ಪ್ರವೇಶಕ್ಕೆ ಹಿಂಜರಿಯುತ್ತಿದ್ದರು. ಯಾಕೆಂದರೆ ಈ ಪಾರ್ಕ್ ಹಲವು ತಿಂಗಳುಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಸುತ್ತಮುತ್ತಲೂ ಗಿಡ-ಗಂಟಿ ಬೆಳೆದಿತ್ತು. ಕಲ್ಲು ಬೆಂಚುಗಳು ಮುರಿದು ಅನಾಥ ಸ್ಥಿತಿಯಲ್ಲಿತ್ತು. ಪಾರ್ಕ್ ಸುತ್ತಮುತ್ತಲೂ ಮದ್ಯದ ಬಾಟಲ್‌ಗಳು ಬಿದ್ದಿತ್ತು. ಭಿಕ್ಷುಕರು ಕೂಡ ಇಲ್ಲೇ ಮಲಗುತ್ತಿದ್ದರು. ಬೀದಿ ನಾಯಿಗಳ ಆವಾಸಸ್ಥಾನವಾಗಿತ್ತು. ಮಲ್ಲಿಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಪಾರ್ಕ್ ಇಲ್ಲದ ಕಾರಣ, ಮಲ್ಲಿ ಕಟ್ಟೆ ಪಾರ್ಕ್ ಸಾರ್ವಜನಿಕರ ವಾಯು ವಿಹಾರಕ್ಕೆ ಅನುಕೂಲವಾಗಿತ್ತು.
ಸಾಮಾಜಿಕ ಹೋರಾಟಗಾರ ಜೆರಾರ್x ಟವರ್ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಪಾರ್ಕ್ ಕಾಮಗಾರಿ ಆರಂಭದಿಂದಲೇ ಕುಂಟುತ್ತಾ ಸಾಗುತ್ತಿತ್ತು. ಕೆಲವು ದಿನಗಳಿಂದ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಂಡಿದೆ. ಸದ್ಯ ಪಾರ್ಕ್ ಕುಡುಕರ ತಾಣವಾಗುತ್ತಿದ್ದು, ಪಾರ್ಕ್‌ನೊಳಗೆ ಇರುವ ಗ್ರಂಥಾಲಯಕ್ಕೆ ಸಾರ್ವಜನಿಕರು ಬರಲು ಹಿಂಜರಿಯುವಂತಾಗಿದೆ. ಮೂಲ ಸೌಕರ್ಯಕ್ಕೆ ಒತ್ತು ನೀಡಿ, ಸಾರ್ವಜನಿಕ ಸ್ನೇಹಿ ಪಾರ್ಕ್ ಆಗಿ ರೂಪಿಸಬೇಕಿದೆ’ ಎನ್ನುತ್ತಾರೆ.
ಸದ್ಯದಲ್ಲೇ ಕಾಮಗಾರಿ ಆರಂಭ:
ಮಲ್ಲಿಕಟ್ಟೆ ಪಾರ್ಕ್ ಇದೀಗ ಅಭಿವೃದ್ಧಿ ಕಾಣುತ್ತಿದ್ದು, ಮೊದಲನೇ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಪಾರ್ಕ್ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸಲಾಗಿದ್ದು, ಎರಡನೇ ಹಂತದ ಕಾಮಗಾರಿಗೆ ಅನು ದಾನ ಹೊಂದಾಣಿಕೆ ಕೆಲಸ ನಡೆಯುತ್ತಿದೆ. ಸದ್ಯದಲ್ಲಿಯೇ ಕಾಮಗಾರಿ ಆರಂಭಿಸಿ ವೇಗ ನೀಡಲಾಗುವುದು. ಇದರೊಂದಿಗೆ ಪಾರ್ಕ್ ಸುಂದರೀಕರಣಕ್ಕೆ ಆದ್ಯತೆ ನೀಡಲಾಗುವುದು.
-ಕದ್ರಿ ಮನೋಹರ್ ಶೆಟ್ಟಿ , ಸ್ಥಳೀಯ ಮನಪಾ ಸದಸ್ಯ