Advertisement

Gram panchayat ಸಿಬಂದಿ ಕೊರತೆ: ನೇಮಿಸುವ ಅಧಿಕಾರ ಗ್ರಾ.ಪಂ.ಗಿಲ್ಲ ; ಸರಕಾರ ಮಾಡುತ್ತಿಲ್ಲ!

08:11 AM Aug 24, 2023 | Team Udayavani |

ಉಡುಪಿ: ಗ್ರಾಮ ಪಂಚಾಯತ್‌ಗಳಲ್ಲಿ ಸಿಬಂದಿ ಕೊರತೆಯಿಂದಾಗಿ ಸೇವೆಗಳು ನಿಗದಿತ ಅವಧಿಯಲ್ಲಿ ಲಭ್ಯವಾಗದೆ ಜನಸಾಮಾನ್ಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

Advertisement

ನಾಲ್ಕೈದು ವರ್ಷಗಳಿಂದ ಸಮಸ್ಯೆ ಇದ್ದು, ಇತ್ತೀಚೆಗೆ ಗಂಭೀರವಾಗಿದೆ. ಗ್ರಾ.ಪಂ.ಗೆ ತಾನಾಗಿಯೇ ಸಿಬಂದಿ ನೇಮಕ ಮಾಡಿಕೊಳ್ಳುವ ಅಧಿಕಾರವಿಲ್ಲ; ಸರಕಾರವು ನೇಮಕ ಮಾಡದೆ ಇರುವುದರಿಂದ ಗ್ರಾ.ಪಂ. ಆಡಳಿತ ವ್ಯವಸ್ಥೆ ಅಡಕತ್ತರಿಯಲ್ಲಿ ಸಿಲುಕಿದೆ. 2017-18ರಿಂದ ಗ್ರಾ.ಪಂ. ಮಟ್ಟದಲ್ಲಿ ಹೊಸ ನೇಮಕಾತಿಯನ್ನು ಸರಕಾರ ರದ್ದುಪಡಿಸಿದೆ. ಅನಂತರ ಜಿ.ಪಂ. ಸಿಇಒ ಅವರ ಸಮಿತಿಯಲ್ಲಿ ನೇಮಕಾತಿಗೆ ಅವಕಾಶ ನೀಡಿದ್ದರೂ ಬಳಿಕ ಹಿಂದೆಗೆದುಕೊಂಡಿದೆ.

ಉಡುಪಿಯ 5 ತಾಲೂಕುಗಳ 155 ಗ್ರಾ.ಪಂ.ಗಳಲ್ಲಿ 102, ದ.ಕ.ದ 9 ತಾಲೂಕುಗಳ 223 ಗ್ರಾ.ಪಂ.ಗಳಲ್ಲಿ 112 ಹುದ್ದೆಗಳು ಖಾಲಿ ಇವೆ. ಬಿಲ್‌ ಕಲೆಕ್ಟರ್‌, ಕ್ಲರ್ಕ್‌ ಅಥವಾ ಡಾಟಾ ಎಂಟ್ರಿ ಆಪರೇಟರ್‌, ಪಂಪು ಚಾಲಕ, ಜವಾನ ಹಾಗೂ ಸ್ವತ್ಛತಾಗಾರ ಸಿಬಂದಿ ಹುದ್ದೆಗಳು ಇದರಲ್ಲಿ ಸೇರಿವೆ. ಕನಿಷ್ಠ ಶೇ. 50ರಷ್ಟು ಭರ್ತಿಗಾದರೂ ಅವಕಾಶ ನೀಡುವಂತೆ ಆಗ್ರಹ ಕೇಳಿ ಬರುತ್ತಿದೆ.

ಯೋಜನೆಗಳಿಗೆ ಹಿನ್ನಡೆ
ಸಿಬಂದಿ ಕೊರತೆಯಿಂದಾಗಿ ಕೇಂದ್ರ, ರಾಜ್ಯ ಸರಕಾರದ ಹಲವು ಮಹತ್ವದ ಯೋಜನೆಗಳ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ಈಗ ಇರುವ ಸಿಬಂದಿ ವರ್ಗದಿಂದ ಹೆಚ್ಚು ಕಾರ್ಯ ಮಾಡಿಸಿಕೊಳ್ಳುವುದು ಕಷ್ಟಸಾಧ್ಯ. ಕೆಲವು ಸಿಬಂದಿ ಎರಡು ಗ್ರಾ.ಪಂ.ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಸಿಬಂದಿ ಹೈರಾಣು
ಗ್ರಾ.ಪಂ.ಗಳಲ್ಲಿ ಹೊಸ ತಂತ್ರಾಂಶದಲ್ಲಿ ಬೇರೆಬೇರೆ ಹುದ್ದೆಗಳಿಗೆ ಅನುಗುಣವಾಗಿ ಪ್ರತ್ಯೇಕ ಲಾಗಿನ್‌ ವ್ಯವಸ್ಥೆ ಇದೆ. ಲಾಗಿನ್‌, ಪರಿಶೀಲನೆ, ಅನುಮೋದನೆ ಏಕವ್ಯಕ್ತಿ ನಿರ್ವಹಣೆ ಮಾಡುತ್ತಿರುವುದಿಂದ ಒತ್ತಡದ ನಡುವೆ ಸಾಕಷ್ಟು ತಪ್ಪುಗಳಾಗುತ್ತಿದ್ದು, ಸಿಬಂದಿ ಹೈರಾಣಾಗಿದ್ದಾರೆ. ಈ ನಡುವೆ ತಾ.ಪಂ., ಜಿ.ಪಂ. ಸಭೆ, ಆಗಾಗ ನಡೆಯುವ ತರಬೇತಿಗಳಿಗೆ ಹಾಜರಾಗುವುದು ಕಡ್ಡಾಯವಾಗಿರುವುದರಿಂದ ಅಲ್ಲಿಗೆ ತೆರಳಿದಲ್ಲಿ ಬಹುತೇಕ ಒಂದು ದಿನದ ಕಚೇರಿಯ ಸಾರ್ವಜನಿಕರ ಸಂಬಂಧಿದ ಕೆಲಸಗಳು ಸ್ಥಗಿತಗೊಳ್ಳುತ್ತವೆ.

Advertisement

ಸಿಬಂದಿ ಕೊರತೆಯ ಬಗ್ಗೆ ಹಾಗೂ ನೇಮಕಾತಿ ಮಾಡುವ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಲು ಎಲ್ಲ ಗ್ರಾ.ಪಂ.ಗಳು ಶ್ರಮಿಸುತ್ತಿವೆ.
-ಡಾ| ಆನಂದ್‌ ಕೆ., ಪ್ರಸನ್ನ ಎಚ್‌.
ಜಿ.ಪಂ. ಸಿಇಒಗಳು, ಉಡುಪಿ, ದ.ಕ. ಜಿಲ್ಲೆ.

ಸಿಬಂದಿ ಕೊರತೆಯಿಂದಾಗಿ ಜನರಿಗೆ ಸಮರ್ಪಕ ಸೇವೆ ಒದಗಿಸಲು ಗ್ರಾ.ಪಂ. ಆಡಳಿತಕ್ಕೆ ಕಷ್ಟವಾಗುತ್ತಿದೆ. ಸದ್ಯ ಇರುವ ಕನಿಷ್ಠ ಸಿಬಂದಿ, ಪಿಡಿಒ ಒತ್ತಡದ ನಡುವೆ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬಂದಿ ನೇಮಕಕ್ಕೆ ಸರಕಾರ ಕ್ರಮ ತೆಗೆದುಕೊಳ್ಳಬೇಕು.
– ಮಂಜುನಾಥ್‌ ಪಿ. ಶೆಟ್ಟಿ , ನಾಗೇಶ್‌ ಎಂ.
ಜಿಲ್ಲಾ ಅಧ್ಯಕ್ಷರು, ಉಡುಪಿ, ದ.ಕ. ಜಿಲ್ಲಾ ಪಿಡಿಒ ಕ್ಷೇಮಾಭಿವೃದ್ಧಿ ಸಂಘ

-ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next