ಕನಕಪುರ: ಕಳೆದ ಎರಡೂವರೆ ವರ್ಷದಿಂದ ದೇಶವನ್ನು ಕಾಡಿದ ಕೊರೊನಾ ಆತಂಕ ದೂರವಾಗಿದ್ದರೂ, ಸಾರ್ವಜನಿಕರಿಗೆ ಮಾತ್ರ ಸೂಕ್ತ ಸರ್ಕಾರಿ ಬಸ್ ಸೌಲಭ್ಯವಿಲ್ಲದೆ, ಪ್ರಯಾಣಿಕರ ಪ್ರತಿನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ದೇಶವನ್ನು ಕಾಡಿದ ಕೊರೊನಾದಿಂದ ವಿಶ್ವವೇ ತಲ್ಲಣಗೊಂಡಿತ್ತು. ಲೆಕ್ಕವಿಲ್ಲದಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದರು. ಜನ ಸಾಮಾನ್ಯರು ತತ್ತರಿಸಿ ಹೋಗಿ, ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಬಹುದೊಡ್ಡ ಹೊಡೆತ ಬಿದ್ದಿತ್ತು. ಕೆಲವು ಸರ್ಕಾರಿ ಕಾರ್ಯಕ್ರಮಗಳು ಸ್ಥಗಿತವಾಗಿತ್ತು. ಹಾಗೆಯೇ ಸರ್ಕಾರಿ ಸಾರಿಗೆ ವ್ಯವಸ್ಥೆಯಲ್ಲೂ ನಿಯಂತ್ರಣ ಹೇರಲಾಗಿತ್ತು. ಬಸ್‌ಗಳ ಸೇವೆ ಸ್ಥಗಿತಗೊಳಿಸಿ, ಕೊರೊನಾ ಸಂದರ್ಭದಲ್ಲಿ ಕೆಲ ಚಾಲಕರು, ನಿರ್ವಾಹಕರಿಗೆ ರಜೆ ಘೋಷಣೆ ಮಾಡಿದರು. ಈಗ ಕೊರೊನಾ ಆತಂಕದಿಂದ ಮುಕ್ತರಾಗಿ ವರ್ಷ ಕಳೆಯುತ್ತಿದೆ. ಜನಜೀವನ ಯಥಾಸ್ಥಿತಿಗೆ ಮರಳುತ್ತಿದೆ. ಆದರೆ, ಸಾರಿಗೆ ಸೇವೆ ಮಾತ್ರ ಯಥಾಸ್ಥಿತಿಗೆ ಬಂದಿಲ್ಲ ಎಂಬ ಆರೋಪ ಜನರಿಂದ ಕೇಳಿ ಬರುತ್ತಿದೆ.
ಬಸ್‌ಗಾಗಿ ಪರದಾಟ ಇನ್ನೂ ತಪ್ಪಿಲ್ಲ: ತಾಲೂಕಿನಿಂದ ಪ್ರತಿನಿತ್ಯ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅಗತ್ಯಕ್ಕೆ ತಕ್ಕಂತೆ ಸರ್ಕಾರಿ ಬಸ್ ವ್ಯವಸ್ಥೆ ಇಲ್ಲದೆ, ಪ್ರತಿನಿತ್ಯ ಪರದಾಡುವ ಪರಿಸ್ಥಿತಿ ಇಂದಿಗೂ ತಪ್ಪಿಲ್ಲ. ಕೊರೊನಾ ವೇಳೆ ಉದ್ಯೋಗ ಕಳೆದುಕೊಂಡಿದ್ದ ಅದೆಷ್ಟೋ ಜನ ನಿರುದ್ಯೋಗಿಗಳು, ಸಿಲಿಕಾನ್ ಸಿಟಿಯಲ್ಲಿ ಮತ್ತೆ ಉದ್ಯೋಗ ಗಿಟ್ಟಿಸಿಕೊಂಡು, ನೂರಾರು ಉದ್ಯೋಗಿಗಳು ಪ್ರತಿನಿತ್ಯ ತಾಲೂಕಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾರೆ. ಸ್ಥಗಿತವಾಗಿದ್ದ ಶಾಲೆ -ಕಾಲೇಜುಗಳು ಮತ್ತೆ ಆರಂಭವಾಗಿದ್ದು, ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳತ್ತ ಮುಖ ಮಾಡಿದ್ದಾರೆ. ಅದರೆ, ವಿದ್ಯಾರ್ಥಿಗಳು, ಉದ್ಯೋಗಿಗಳು ಬಸ್‌ನಲ್ಲಿ ಸೀಟಿಗಾಗಿ ಹಿಂದೆ ಕಳ್ಳರನ್ನು ಹಿಡಿಯುವ ಪೊಲೀಸರಂತೆ ಓಡುವುದು ಅನಿವಾರ್ಯವಾಗಿದೆ. ಬಸ್‌ಗಳ ಕೊರತೆಯಿಂದ ಪ್ರಯಾಣಿಕರಿಗೆ ಸೀಟು ಸಿಗದೇ ಬೆಂಗಳೂರಿಗೆ ನಿಂತು ಪ್ರಯಾಣ ಮಾಡಬೇಕಿದೆ. ಇನ್ನು ವೃದ್ಧರು, ಗರ್ಭಿಣಿ, ಬಾಣಂತಿಯರು, ದಿವ್ಯಾಂಗರ ಪರಿಸ್ಥಿತಿ ಕೇಳುವುದೇ ಬೇಡ. ಬಸ್ ಹಿಂದೆ ಓಡಿ ಸೀಟು ಹಿಡಿಯುವ ಹರಸಾಹಸ ಮಾಡುವುದು ಇವರಿಗೆ ದೂರದ ಮಾತು. ಬಸ್‌ನಲ್ಲಿ ನಿಂತು ಪ್ರಯಾಣ ಮಾಡುವುದು ಅನಿವಾರ್ಯವಾಗಿದೆ.
ಪ್ರಯಾಣಿಕರ ಸಂಖ್ಯೆ ಹೆಚ್ಚಳ: ವಾರಾಂತ್ಯ ಬಂತು ಎಂದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ. ಶನಿ ವಾರ, ಭಾನುವಾರ ಮತ್ತು ರಜಾ ದಿನಗಳಲ್ಲಿ ಬೆಂಗಳೂರಿನಲ್ಲಿರುವ ವಲಸಿಗರು, ಗ್ರಾಮಗಳಿಗೆ ಬಂದು ಸೋಮವಾರ ಬೆಳಗ್ಗೆ ವಾಪಸಾಗುತ್ತಾರೆ. ಸೋಮವಾರ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗುತ್ತದೆ. ಪ್ರತಿನಿತ್ಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸುವ ಇಲ್ಲಿನ ಘಟಕದ ವ್ಯವಸ್ಥಾಪಕರು, ಪ್ರಯಾಣಿಕರ ಪರದಾಟವನ್ನು ಕಂಡು ಕಾಣದಂತೆ ಇರುವುದು ವಿಪರ್ಯಾಸ.
ಗ್ರಾಮೀಣ ಭಾಗದ ಪ್ರಯಾಣಿಕರ ಸ್ಥಿತಿಯೂ ಇದರಿಂದ ಹೋರತಾಗಿಲ್ಲ. ತಾಲೂಕಿನಲ್ಲಿ ಕೆಲ ಗ್ರಾಮಗಳಿಗೆ ಇಂದಿಗೂ ಸಾರಿಗೆ ಸಂಪರ್ಕ ಆರಂಭಗೊಂಡಿಲ್ಲ. ಸಾರಿಗೆ ವ್ಯವಸ್ಥೆ ಇಲ್ಲದೆ ನಗರ ಪ್ರದೇಶಗಳಿಗೆ ಬರುವ ವಿದ್ಯಾರ್ಥಿಗಳು, ಉದ್ಯೋಗಿಗಳು ಪರದಾಡುತ್ತಿದ್ದಾರೆ. ಸಾರಿಗೆ ಇಲಾಖೆ ಅಧಿಕಾರಿಗಳು ಪ್ರಯಾಣಿಕರಿಗೆ ತಕ್ಕಂತೆ ಸಾರಿಗೆ ವ್ಯವಸ್ಥೆ ಕಲ್ಪಿಸದಿರುವುದು ಪ್ರಯಾ ಣಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿರುವುದು ಸುಳ್ಳಲ್ಲ. ಕೊರೊನಾದಿಂದ ಉದ್ಯೋಗವಿಲ್ಲದೆ ಪರದಾಡುತ್ತಿದ್ದ ಸಾಮಾನ್ಯರು, ಈಗಷ್ಟೇ ಮರಳಿ ಉದ್ಯೋಗಸ್ಥರಾಗಿ ಆರ್ಥಿಕ ಸುಧಾರಣೆ ಕಾಣುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾರಿಗೆ ಇಲಾಖೆ ಸಚಿವರು, ಅಧಿಕಾರಿಗಳು ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾಮಾನ್ಯರು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಟ್ರಾಫಿಕ್ ಹೆಚ್ಚಾಗಿ ಸಮಯ ವ್ಯರ್ಥವಾಗುತ್ತಿದೆ. ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಬಸ್‌ಗಳ ಕೊರತೆಯಿದೆ. ಮಾಗಡಿ, ಆನೇಕಲ್, ರಾಮನಗರ ಘಟಕದ ಕೆಲ ಬಸ್‌ಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಹಂತ ಹಂತವಾಗಿ ಸಮಸ್ಯೆ ಬಗೆಹರಿಸುತ್ತೇವೆ. ಶಾಲೆ, ಕಾಲೇಜು ಆರಂಭವಾಗಿದೆ. ಗ್ರಾಮೀಣ ಭಾಗದ ಎಲ್ಲ ಮಾರ್ಗಗಳಿಗೂ ಸಾರಿಗೆ ಸೇವೆ ಆರಂಭವಾಗಿದೆ. ಹಿಂದೆ ಸಾರಿಗೆ ಸಂಪರ್ಕವಿದ್ದ ಗ್ರಾಮಗಳಿಗೆ ಬಸ್ ಸೇವೆ ಇಲ್ಲದಿರುವುದು ಕಂಡು ಬಂದರೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು.
– ಕೃಷ್ಣಪ್ರಸಾದ್, ಘಟಕದ ವ್ಯವಸ್ಥಾಪಕ
– ಬಾಣಗಹಳ್ಳಿ ಬಿ.ಟಿ.ಉಮೇಶ್