Advertisement
ಈ ಮೀನುಗಾರಿಕಾ ಋತುವಿನ ಆರಂಭದಿಂದಲೇ ಒಂದಿಲ್ಲೊಂದು ಪ್ರತಿಕೂಲ ಪರಿಸ್ಥಿತಿಯನ್ನೇ ಎದುರಿಸಿ ಕೊಂಡು ಬರುತ್ತಿರುವ ಮೀನುಗಾರರಿಗೆ ಈಗ ಮತ್ತಷ್ಟು ಸಂಕಷ್ಟಕ್ಕೀಡು ಮಾಡುವಂತಾಗಿದೆ.
ಮಾರುಕಟ್ಟೆಗಳಲ್ಲಿ ಅಗತ್ಯದಷ್ಟು ಮೀನು ಸಿಗುತ್ತಿಲ್ಲ. ಇದರಿಂದ ಮೀನಿನ ದರ ಗಗನಕ್ಕೇರಿದೆ. ಗಂಗೊಳ್ಳಿಯಲ್ಲಿ 1 ಕೆ.ಜಿ. ಬಂಗುಡೆಗೆ 150 ರಿಂದ 160 ರೂ. ಇದ್ದರೆ, ಕುಂದಾಪುರ ಮತ್ತಿತರ ಮಾರುಕಟ್ಟೆಗಳಲ್ಲಿ 20-30 ರೂ. ಹೆಚ್ಚಿರುತ್ತದೆ. ಬೂತಾಯಿ (ಬೈಗೆ) 120 ರಿಂದ 130 ರೂ. ಇದ್ದರೆ, ಬೇರೆಡೆ 150 ರೂ.ವರೆಗೆ ಮಾರಾಟವಾಗುತ್ತಿದೆ. ಆದರೆ ಈ ಬಾರಿ ಮಾರುಕಟ್ಟೆಗಳಲ್ಲಿ ಬೈಗೆ ಕಾಣಲು ಸಿಗುವುದೇ ಅಪರೂಪ ಎನ್ನುವಂತಾಗಿದೆ. ಇನ್ನು ಅಂಜಲ್ 560-600 ರೂ. ಇದ್ದರೆ, ಬೇರೆ ಕಡೆಗಳಲ್ಲಿ ಇದಕ್ಕಿಂತ 50 ರೂ. ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದೆ.
Related Articles
ಮತ್ಸ್ಯ ಪ್ರಿಯರಿಗಂತೂ ಈ ವರ್ಷ ಕಹಿಯಾಗಿದೆ. ಮೀನಿನ ದರದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಹೋಟೆಲ್‌ಗಳಲ್ಲಿಯೂ ಮೀನಿನ ಖಾದ್ಯಗಳ ಬೆಲೆಯೂ ಸಿಕ್ಕಾಪಟ್ಟೆ ಹೆಚ್ಚಳವಾಗಿದೆ. ಕೆಲವೆಡೆಗಳಲ್ಲಿ ಈಗ ಕೆಲವೇ ಕೆಲವು ಮೀನಿನ ಖಾದ್ಯವನ್ನು ಮಾತ್ರ ತಯಾರಿಸಲಾಗುತ್ತಿದೆ. ಈಗ ಮೀನಿಗಿಂತ ಕೋಳಿ ಖಾದ್ಯವೇ ವಾಸಿ ಎನ್ನುತ್ತಿದ್ದಾರೆ ಜನ.
Advertisement
ಸಂಕಷ್ಟದಲ್ಲಿ ಸಾವಿರಾರು ಕುಟುಂಬಗಂಗೊಳ್ಳಿಯಲ್ಲಿ ಪರ್ಸಿನ್, ಟ್ರಾಲ್ ಬೋಟ್, ಪಾತಿ, ಗಿಲ್‌ನೆಟ್, ನಾಡದೋಣಿಗಳೆಲ್ಲ ಸೇರಿ ಸುಮಾರು 3,500 ಕ್ಕೂ ಮಿಕ್ಕಿ ಬೋಟುಗಳಿವೆ. ಇನ್ನು ಇಲ್ಲಿ ಈ ಮೀನುಗಾರಿಕೆ ವೃತ್ತಿಯನ್ನೇ ಮಾಡುತ್ತಿರುವವರು 10 ಸಾವಿರಕ್ಕೂ ಅಧಿಕ ಮಂದಿಯಿದ್ದರೆ, ಇದನ್ನೆ ನಂಬಿಕೊಂಡ ಸಾವಿರಾರು ಕುಟುಂಬಗಳು ಇವೆ. ಎಲ್ಲರೂ ಮೀನುಗಾರಿಕೆಯಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ. ಸಾಲ ಪಾವತಿಗೂ ಕುತ್ತು
ಮಾರ್ಚ್ ಈ ಆರ್ಥಿಕ ವರ್ಷದ ಕೊನೆಯ ತಿಂಗಳಾಗಿದ್ದು, ಬ್ಯಾಂಕ್‌ಗಳಿಂದ, ಸಹಕಾರಿ ಸಂಘಗಳಿಂದ ಮೀನುಗಾರರು ಮೀನುಗಾರಿಕೆಯನ್ನೇ ನಂಬಿಕೊಂಡು ಸಾಲ ಪಡೆದವರು ಅನೇಕ ಮಂದಿಯಿದ್ದಾರೆ. ಆದರೆ ಈ ಋತುವಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮೀನುಗಾರಿಕೆ ಇಲ್ಲದ ಕಾರಣ, ಸಾಲ ಮರು ಪಾವತಿ ಮಾಡುವುದು ಹೇಗೆ ಎನ್ನುವ ಚಿಂತೆಯಲ್ಲಿ ಮೀನುಗಾರರಿದ್ದಾರೆ. ಅವಧಿಗೆ ಮುನ್ನವೇ
ಸ್ಥಗಿತ ಸಂಭವ
ಯಾಂತ್ರೀಕೃತ ಮೀನುಗಾರಿಕೆಯು ಆಗಸ್ಟ್‌ನಿಂದ ಆರಂಭಗೊಂಡು ಮೇವರೆಗೆ ಕಾಲಾವಕಾಶವಿದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಮೀನಿಲ್ಲದೆ, ಗಂಗೊಳ್ಳಿಯಲ್ಲಿ ಅವಧಿಗಿಂತ ಮೊದಲೇ ಮೀನುಗಾರಿಕೆಯನ್ನು ಸ್ಥಗಿತಗೊಳಿಸುವ ಸಂಭವ ಕಂಡು ಬರುತ್ತಿದೆ. ಇಲ್ಲಿರುವ ನೂರಾರು ಬೋಟುಗಳ ಪೈಕಿ ಪ್ರಸ್ತುತ ಮೀನುಗಾರಿಕೆಗೆ ತೆರಳುವುದು ದಿನವೊಂದಕ್ಕೆ ಕನಿಷ್ಠ 10 ಕೂಡ ಇಲ್ಲ. ಹೆಚ್ಚಿನ ಬೋಟು ಮಾಲಕರು ತೆರಳಿದರೂ ಲಾಭಕ್ಕಿಂತ ನಷ್ಟವೇ ಹೆಚ್ಚು ಆಗುವುದಿರಿಂದ ತೆರಳದೇ ಇರುವುದೇ ವಾಸಿ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಶೇ.80 ರಷ್ಟು ಕುಸಿತ
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಗಂಗೊಳ್ಳಿಯ ದಿನಸಿ ಸಾಮಗ್ರಿ, ಇನ್ನಿತರ ವಸ್ತುಗಳ ಅಂಗಡಿಗಳಲ್ಲಿ ಶೇ. 80ರಷ್ಟು ವ್ಯಾಪಾರ – ವಹಿವಾಟು ಕುಸಿತಗೊಂಡಿದೆ. ಈಗ ಇಲ್ಲಿನ ಜನರಲ್ಲಿ ಸಂಪಾದನೆಯೇ ಕಷ್ಟ ಅನ್ನುವಂತಹ ಸ್ಥಿತಿಯಿದೆ. ಮೊದಲೆಲ್ಲ ಒಮ್ಮೆಗೆ 50 ಕೆ.ಜಿ. ಅಕ್ಕಿ ತೆಗೆದುಕೊಳ್ಳುವವರು ಈಗ ಇವತ್ತಿಗೆ ಸಾಕು ಎನ್ನುವಂತೆ ಬರೀ 5 ಕೆ.ಜಿ.ಯಷ್ಟೇ ಖರೀದಿಸಿಕೊಳ್ಳುತ್ತಿದ್ದಾರೆ. ಮೀನುಗಾರರಿಗೆ ಮಾತ್ರವಲ್ಲ ಇಲ್ಲಿನ ವರ್ತಕರಿಗೂ ಇದರ ಬಿಸಿ ಎದುರಾಗಿದೆ.
– ವಿಟಲ ಶೆಣೈ ಗಂಗೊಳ್ಳಿ, ವ್ಯಾಪಾರಿಗಳು – ಸದಸ್ಯರು, ಉಡುಪಿ ಜಿಲ್ಲಾ ವರ್ತಕರ ಸಂಘ ಎಲ್ಲರಿಗೂ ಸಮಸ್ಯೆ
ಜನರ ಬೇಡಿಕೆಯಷ್ಟು ಮೀನು ಸಿಗುತ್ತಿಲ್ಲ. ಇದ್ದ ಮೀನಿನ ಬೆಲೆ ದುಬಾರಿಯಾಗಿದೆ. ಇದರಿಂದ ಮೀನು ಖರೀದಿಯ ಪ್ರಮಾಣವೂ ಕುಂಠಿತಗೊಂಡಿದೆ. ಮತ್ಸ್ಯಕ್ಷಾಮದಿಂದಾಗಿ ಮೀನುಗಾರರಿಗೆ, ಮೀನು ವ್ಯಾಪಾರಸ್ಥರು, ಅಂಗಡಿ ವ್ಯಾಪಾರಸ್ಥರು, ಐಸ್ ಪ್ಲಾಂಟ್‌ನವರು, ವಾಹನ ಚಾಲಕ- ಮಾಲಕರ ಸಹಿತ ಎಲ್ಲರಿಗೂ ಸಮಸ್ಯೆಯಾಗಿದೆ.
– ವಾಸುದೇವ ಖಾರ್ವಿ, ಅಧ್ಯಕ್ಷರು, ಹಸಿ ಮೀನು ವ್ಯಾಪಾರಸ್ಥರ ಸಂಘ -ಪ್ರಶಾಂತ್ ಪಾದೆ