ಜಗಳೂರು: ಪಹಣಿಯಲ್ಲಿನ ಕೆಲವು ನ್ಯೂನ್ಯತೆಗಳಿಂದಾಗಿ ರಾಗಿ ಖರೀದಿ ಕೇಂದ್ರದ ಹತ್ತಿರ ರೈತರು ಸುಳಿಯದಂತಾಗಿದ್ದು, ರಾಗಿ ಖರೀದಿಗೆ ಇರುವ ನಿಯಮಗಳನ್ನು ಸಡಿಲಗೊಳಿಸಿದರೆ ಮಧ್ಯವರ್ತಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಸರಕಾರ ರಾಗಿ ಖರೀದಿ ಕೇಂದ್ರ ಪ್ರಾರಂಭಿಸಿದ್ದು, 3150 ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ 20 ದಿನ ಕಳೆದರೂ ಕೇಂದ್ರದಲ್ಲಿ ಕೇವಲ 8 ಜನ ಮಾತ್ರ ಹೆಸರು ನೋಂದಾಯಿಸಿದ್ದಾರೆ. ತಾಲೂಕಿನಾದ್ಯಂತ 13 ಸಾವಿರಕ್ಕೂ ಅಧಿಕ ಎಕರೆ ರಾಗಿ ಬಿತ್ತನೆ ಪ್ರದೇಶವಿದ್ದು, ಸುಮಾರು 1200 ರಿಂದ 1400 ರೈತರು ರಾಗಿ ಬೆಳೆದಿದ್ದಾರೆ. ಮುಂಗಾರು ಹಂಗಾಮಿನಲ್ಲಿ ದಾಖಲೆ ನೀಡಿ ಮೆಕ್ಕೆಜೋಳ, ಕಡಲೆ ಮುಂತಾದ ಬೀಜಗಳನ್ನು ಖರೀದಿಸಿದ ರೈತರು ರಾಗಿ ಬಿತ್ತನೆ ಮಾಡಿದ್ದಾರೆ. ಪಹಣಿಯಲ್ಲಿ ರಾಗಿ ಎಂದು ನಮೂದಾಗಿದ್ದರೆ ಮಾತ್ರ ಖರೀದಿ ಕೇಂದ್ರದ ಕಂಪ್ಯೂಟರ್‌ನಲ್ಲಿ ಯಶಸ್ವಿಯಾಗಿ ಹೆಸರು ನೋಂದಾವಣೆಯಾಗುತ್ತದೆ. ಆದರೆ ಸುಮಾರು ರೈತರ ಪಹಣೆಯಲ್ಲಿ ಮೆಕ್ಕೆಜೋಳ. ಶೇಂಗಾ, ಸಜ್ಜೆ, ಜೋಳ ಎಂದು ನಮೂದಾಗಿರುವುದರಿಂದ ಖರೀದಿ ಕೇಂದ್ರದ ತಂತ್ರಾಂಶದಲ್ಲಿ ಹೆಸರು ನೋಂದಾವಣೆಯಾಗದೇ ರೈತರು ರಾಗಿಮಾರಾಟ ಮಾಡದಂತಾಗಿದೆ.
ಹಂಗಾಮುವಾರು ಬೆಳೆ ಸಮೀಕ್ಷೆ ಕಾರ್ಯವನ್ನು ಕೃಷಿ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ನಡೆಸಿದ್ದು, ಇವರು ಕ್ಷೇತ್ರಕ್ಕೆ ತೆರಳಿ ಸಮರ್ಪಕವಾಗಿ ಸಮೀಕ್ಷೆ ನಡೆಸದೆ ಎಲ್ಲೋ ಕುಳಿತು ಮೊಬೈಲ್‌ನಲ್ಲಿ ಬೆಳೆ ನಮೂದಿಸಿದ್ದಾರೆ ಎಂಬ ದೂರುಗಳು ಕೂಡ ರೈತರಿಂದ ಕೇಳಿ ಬರುತ್ತಿವೆ.
ಮಧ್ಯವರ್ತಿಗಳಿಂದ ಲಾಭದ ಹುನ್ನಾರ?: ಇದನ್ನೆ ಬಂಡವಾಳವಾಗಿಸಿಕೊಂಡಿರುವ ಕೆಲವು ಮಧ್ಯವರ್ತಿಗಳು ಖರೀದಿಗೆ ಇರುವ ನಿಯಮಗಳನ್ನು ಸಡಿಲಗೊಳಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಮೇಲೆ ಕೆಲವು ಸಂಘಟನೆಗಳ ಮೂಲಕ ಒತ್ತಡ ಹಾಕುವಂತಹ ತಂತ್ರಗಳನ್ನು ಮಾಡುತ್ತಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಸರಕಾರ ಇರುವ ನಿಯಮವನ್ನು ಸಡಿಲಗೊಳಿಸಿದರೆ ಲಾಭ ರೈತರಿಗೆ ದೊರೆಯದೆ ಮಧ್ಯವರ್ತಿಗಳ ಪಾಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ ತಾಲೂಕಿನದ್ಯಾಂತ ರಾಗಿ ಬೆಳೆ ಉತ್ತಮ ಇಳುವರಿ ಬಂದಿದ್ದು, ದಲ್ಲಾಳಿಗಳು ಈಗಾಗಲೇ 1800 ರಿಂದ 2000 ರೂ. ನಂತೆ ರಾಗಿ ಖರೀದಿಸಿ ಗೊದಾಮುಗಳಲ್ಲಿ ನೂರಾರು ಚೀಲ ಶೇಖರಿಸಿದ್ದಾರೆ.
ಸರಕಾರ ನಿಯಮಗಳನ್ನು ಸಡಿಲಗೊಳಿಸಿದರೆ ಮಧ್ಯವರ್ತಿಗಳು ಖರೀದಿ ಕೇಂದ್ರದಲ್ಲಿ ತಮ್ಮ ದಾಸ್ತಾನು ಮಾರಿಕೊಂಡು ಲಕ್ಷಗಟ್ಟಲೆ ಆದಾಯ ಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ರೈತರು ರಾಗಿ ಬೆಳೆದಿದ್ದು ಪಹಣಿಯಲ್ಲಿ ಇತರೆ ಬೆಳೆ ಎಂದು ನಮೂದಾಗಿದ್ದರೆ ಆಕ್ಷೇಪಣೆ ಸಲ್ಲಿಸಲು ಸರಕಾರ ಅವಕಾಶ ನೀಡಿದ್ದು, ಆಕ್ಷೇಪಣೆ ಸಲ್ಲಿಸಿದ ರೈತನ ಜಮೀನುಗಳಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರೆ ನಿಜಾಂಶ ತಿಳಿಯಲಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್.