Advertisement

Dotihal: ಸರಕಾರಿ ಆಂಗ್ಲ ಶಾಲೆಗಳಲ್ಲಿ ಸೌಲಭ್ಯ-ಶಿಕ್ಷಕರ ಕೊರತೆ

05:29 PM Sep 08, 2023 | Team Udayavani |

ದೋಟಿಹಾಳ: ಕಳೆದ ನಾಲ್ಕೈದು ವರ್ಷಗಳ ಹಿಂದೆ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಿರುವುದು ಪಾಲಕರಲ್ಲಿ ಸಂತಸ ತಂದಿದೆಯಾದರೂ ಶಿಕ್ಷಕರ ಕೊರತೆ ಹಾಗೂ ಮೂಲಸೌಲಭ್ಯಗಳ ಕೊರತೆಯಿಂದಾಗಿ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಶುರುವಾಗಿದೆ.

Advertisement

ಹಿಂದೆ ಎಚ್‌.ಡಿ ಕುಮಾರಸ್ವಾಮಿ ಮೈತ್ರಿ ಸರಕಾರ ಗ್ರಾಮೀಣ ಭಾಗದ ಬಡ, ಹಿಂದುಳಿದ ವರ್ಗದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸುಮಾರು ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ರಾಜ್ಯದಲ್ಲಿ ಆರಂಭಿಸಲಾಯಿತು. ಈ ಶಾಲೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಇದುವರೆಗೆ ಅನುದಾನ ಬಿಡುಗಡೆ ಮಾಡಿಲ್ಲ. ಈ ಶಾಲೆಗಳಿಗೆ ಇದುವರೆಗೂ ಯಾವ ಶಿಕ್ಷಕರನ್ನೂ ನೇಮಿಸಿಲ್ಲ.

ಇದರಿಂದ ಮಕ್ಕಳ ಶಿಕ್ಷಣ ಕುಂಠಿತಗೊಳ್ಳುತ್ತಿದೆ. ಈ ಬಗ್ಗೆ ಯಾರೂ ಯೋಚನೆ ಮಾಡುತ್ತಿಲ್ಲ. ಸದ್ಯ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ನುರಿತ ಆಂಗ್ಲ ಶಿಕ್ಷಕರ ಬದಲು ಕನ್ನಡ ಮಾಧ್ಯಮದ ಶಿಕ್ಷಕರೇ ಇಂಗ್ಲಿಷ್‌ ಮಾಧ್ಯಮದಲ್ಲಿ ಪಾಠ ಮಾಡಬೇಕಾದ ದುಃಸ್ಥಿತಿ ಇದೆ.

ಸಮರ್ಪಕ ಬೋಧನೆ ಕೊರತೆ: ಸರಕಾರಿ ಶಾಲೆಗಳಲ್ಲಿ ಇರುವ ಕನ್ನಡ ಮಾಧ್ಯಮದ ಶಿಕ್ಷಕರಿಗೆ 15 ದಿನಗಳ ಕಾಲ ತರಬೇತಿ ಕೊಟ್ಟು ಇಂಗ್ಲಿಷ್‌ ಪಾಠ ಮಾಡಲು ಹೇಳಿದ್ದರಿಂದ ಮಕ್ಕಳಿಗೆ ಸಮರ್ಪಕ ಬೋಧನೆ ಸಿಗುತ್ತಿಲ್ಲ ಎಂಬ ದೂರು ಪಾಲಕರಿಂದ ಕೇಳಿ ಬಂದಿದೆ. ಶಿಕ್ಷಕರಿಗೆ ಇಂಗ್ಲಿಷ್‌ ಬಾರದಿದ್ದ ಮೇಲೆ ಮಕ್ಕಳಿಗೆ ಹೇಗೆ ಇಂಗ್ಲಿಷ್‌ ಪಾಠ ಮಾಡುತ್ತಾರೆ ಎಂಬುದು ಪಾಲಕರ ಪ್ರಶ್ನೆ.

ಪಾಠ ಮಾಡಲು ಶಿಕ್ಷಕರ ನಕಾರ: 1ರಿಂದ 3ನೇ ತರಗತಿಯವರೆಗೆ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಗೆ ಗ್ರಾಮೀಣ ಭಾಗದ ಶಿಕ್ಷಕರು ಪಾಠ ಮಾಡಲು ಬರುತ್ತಾರೆ. ಆದರೆ 4 ತರಗತಿಯಿಂದ ಆಂಗ್ಲ ಮಾಧ್ಯಮದ ಮಕ್ಕಳಿಗೆ ಬೊಧೀಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಮಕ್ಕಳು ಕನ್ನಡ, ಇಂಗ್ಲಿಷ್‌ ಯಾವುದನ್ನೂ ಸರಿಯಾಗಿ ಕಲಿಯಲಾಗದಂತಹ ಸ್ಥಿತಿ ಇದೆ ಎಂದು ಪಾಲಕರು ದೂರುತ್ತಾರೆ.

Advertisement

ಆರಂಭದಲ್ಲಿ ಇಂಗ್ಲಿಷ್‌ ಮಾಧ್ಯಮದ 1ನೇ ತರಗತಿಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪ್ರತಿ ಶಾಲೆಗೆ 30 ವಿದ್ಯಾರ್ಥಿಗಳು ಮಾತ್ರ ದಾಖಲಾತಿಗೆ ಅವಕಾಶವಿದ್ದರೂ ಕೆಲ ಶಾಲೆಗಳಲ್ಲಿ 30ಕ್ಕೂ ಹೆಚ್ಚು ಮಕ್ಕಳ ಅರ್ಜಿಗಳು ಬಂದ ಕಾರಣ ಲಾಟರಿಗಳ ಮೂಲಕ ಮಕ್ಕಳನ್ನು ಆಯ್ಕೆ ಮಾಡಲಾಗಿತ್ತು.

ಇತ್ತ ಕನ್ನಡವೂ ಇಲ್ಲ, ಅತ್ತ ಇಂಗ್ಲಿಷ್‌ ಇಲ್ಲ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಒಟ್ಟು 10 ಸರಕಾರ ಆಂಗ್ಲ ಮಾಧ್ಯಮ ಶಾಲೆಗಳು ಆರಂಭಿಸಿದೆ. ಇದರಲ್ಲಿ ನಾಲ್ಕು ಶಾಲೆಗಳಲ್ಲಿ ಸದ್ಯ 5ನೇ ತರಗತಿ ಆರಂಭವಾಗಿದೆ. ಈ ಮಕ್ಕಳು ನವೋದಯ, ಮೊರಾರ್ಜಿ, ಸೈನಿಕ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶ ಪಡೆದಬೇಕಾದರೆ ಇವರು ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆಯಬೇಕು. ಇತ್ತ ಕಡೆ ಕನ್ನಡವೂ ಇಲ್ಲ, ಅತ್ತ ಕಡೆ ಇಂಗ್ಲಿಷ್‌ ಶಿಕ್ಷಣವೂ ಇಲ್ಲ ಎನ್ನುವಂತಾಗಿದೆ. ನನ್ನ ಮಗನನ್ನು ಎರಡು ವರ್ಷ ಆಂಗ್ಲ ಮಾಧ್ಯಮ ಶಾಲೆಗೆ ಕಳಿಸಿದೆ. ಅಲ್ಲಿ ಸರಿಯಾದ ಶಿಕ್ಷಣ ಸಿಗದ ಕಾರಣ ಮರಳಿ ಕನ್ನಡ ಶಾಲೆಗೆ ದಾಖಲಿಸಿದ್ದೇನೆ ಎಂದು ಹೇಳುತ್ತಾರೆ ಪಾಲಕ ಕೃಷ್ಣಪ್ಪ ಗುಡಸಲಿ. ದೋಟಿಹಾಳ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನುರಿತ ಶಿಕ್ಷಕರಿಲ್ಲದ ಕಾರಣ ಸುಮಾರು 6-7 ವಿದ್ಯಾರ್ಥಿಗಳು ಬೇರೆ ಶಾಲೆಗೆ ಹೋಗಿದ್ದಾರೆಂದು ಶಾಲಾ ಶಿಕ್ಷಕರು ಮಾಹಿತಿ ನೀಡಿದ್ದಾರೆ.

ನಮ್ಮ ಶಾಲೆಯಲ್ಲಿ 5ನೇ ತರಗತಿಯವರೆಗೆ ಆಂಗ್ಲ ಮಾಧ್ಯಮ ಇದೆ. ಆರಂಭದಲ್ಲಿ ಪಾಲಕರಲ್ಲಿ ಇದರ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ಸದ್ಯ ನುರಿತ ಶಿಕ್ಷರ ಕೊರತೆಯಿಂದ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ಈ ವರ್ಷ ಒಂದನೇ ತರಗತಿಗೆ ಕೇವಲ 12 ಮಕ್ಕಳು ದಾಖಲಾಗಿದ್ದಾರೆ.
ಶಿವಾನಂದ ಪಂಪಣ್ಣನವರು, ಮುಖ್ಯ ಗುರುಗಳು, ಸ.ಮಾ.ಹಿ.ಪ್ರಾ.ಕಂದಕೂರ ಶಾಲೆ

ರಾಜ್ಯದಲ್ಲಿ ಆಂಗ್ಲ ಮಾಧ್ಯಮ ಶಾಲೆ ಆರಂಭದಿಂದ ಸರಕಾರ ಈ ಶಾಲೆಗಳಿಗೆ ನುರಿತ ಶಿಕ್ಷಕರನ್ನು ನೇಮಕಾತಿ ಮಾಡಿಲ್ಲ. ಸದ್ಯ
ಕನ್ನಡ ಮಾಧ್ಯಮದ ಶಿಕ್ಷಕರಿಗೆ 15 ದಿನಗಳ ಕಾಲ ತರಬೇತಿ ಪಡೆದ ಶಿಕ್ಷಕರು ಪಾಠ ಮಾಡುತ್ತಿದ್ದಾರೆ.
ಶ್ರೀಶೈಲ ಬಿರಾದರ, ಡಿಡಿಪಿಐ, ಕೊಪ್ಪಳ

ಸದ್ಯದಲ್ಲಿ ಕೋರ್ಟ್‌ನಲ್ಲಿರುವ ಶಿಕ್ಷಕರ ನೇಮಕಾತಿ ಪ್ರಕರಣ ಇತ್ಯರ್ಥವಾಗುವ ಸಾಧ್ಯತೆ ಇದೆ. ಇದಾದ ನಂತರ ಹಂತ ಹಂತವಾಗಿ
ಶಿಕ್ಷಕರ ನೇಮಕಾತಿ ಮಾಡುತ್ತೇವೆ.
ಮಧು ಬಂಗಾರಪ್ಪ,
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು.

*ಮಲ್ಲಿಕಾರ್ಜುನ ಮೆದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next