ದೇವದುರ್ಗ: ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ ಪಟ್ಟಣ ಸೇರಿ ತಾಲೂಕಿನಾದ್ಯಂತ ಸ್ವಂತ ಮತ್ತು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ 17 ವಸತಿ ನಿಲಯಗಳಲ್ಲಿ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ 17 ವಸತಿ ನಿಲಯಗಳು ನಡೆಯುತ್ತಿವೆ. ಇದರಲ್ಲಿ 8 ಸ್ವಂತ ಕಟ್ಟಡ ಹೊಂದಿದ್ದರೆ, 9 ವಸತಿ ನಿಲಯಗಳನ್ನು ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಇದಕ್ಕಾಗಿ ಪ್ರತಿ ತಿಂಗಳು ಲಕ್ಷಾಂತರ ರೂ. ಬಾಡಿಗೆ ವ್ಯಯಿಸಲಾಗುತ್ತಿದೆ. ಬಾಡಿಗೆ ಕಟ್ಟಡಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿ ಅಗತ್ಯ ಮೂಲ ಸೌಲಭ್ಯಗಳಿಲ್ಲದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
ಬಾಡಿಗೆ ಎಷ್ಟು: ಹಲವಾರು ವರ್ಷದಿಂದ ಬಾಡಿಗೆ ಕಟ್ಟಡದಲ್ಲೇ ವಸತಿ ನಿಲಯ ನಡೆಸಲಾಗುತ್ತಿದೆ. ಪಟ್ಟಣದ ಜಾಲಹಳ್ಳಿ ರಸ್ತೆಯಲ್ಲಿರುವ ಬಾಡಿಗೆ ಕಟ್ಟಡದಲ್ಲಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯವಿದ್ದು, ಪ್ರತಿ ತಿಂಗಳು 1.81 ಲಕ್ಷ ಬಾಡಿಗೆ ಪಾವತಿಸಲಾಗುತ್ತಿದೆ. ಸರಕಾರಿ ಪ್ರಥಮ ದರ್ಜೆ ಕಾಲೇಜು ಹತ್ತಿರದ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಕ್ಕೆ 47,967 ರೂ. ಅರಕೇರಾದಲ್ಲಿನ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ 14,500 ರೂ., ಗಬ್ಬೂರಿನ ಮೆಟ್ರಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ 30,400 ರೂ., ಗಬ್ಬೂರು ಬಾಲಕರ ವಸತಿ ನಿಲಯಕ್ಕೆ 14,350 ರೂ., ಹಿರೇರಾಯಕುಂಪಿ ವಸತಿ ನಿಲಯಕ್ಕೆ 4 ಸಾವಿರ ರೂ. ನಾಗಡದಿನ್ನಿ ಗ್ರಾಮದ ವಸತಿ ನಿಲಯಕ್ಕೆ 9,200 ರೂ. ಪ್ರತಿ ತಿಂಗಳು ಬಾಡಿಗೆ ಪಾವತಿಸಲಾಗುತ್ತಿದೆ. ಸೌಲಭ್ಯಕ್ಕಿಂತ ಸಮಸ್ಯೆ ಜಾಸ್ತಿ: ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ಸೌಲಭ್ಯಕ್ಕಿಂತ ಸಮಸ್ಯೆಯೇ ಜಾಸ್ತಿ ಎನ್ನುವಂತಾಗಿದೆ.
ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪ, ಸ್ನಾನಗೃಹ, ಗುಣಮಟ್ಟದ ಅಡುಗೆ ಇತರೆ ಸೌಲಭ್ಯಗಳು ಸಿಗದೇ ವಿದ್ಯಾರ್ಥಿಗಳು ಪದೇ ಪದೇ ಪ್ರತಿಭಟನೆ ನಡೆಸುವುದು ಸಾಮಾನ್ಯವಾಗಿದೆ. ಇಲಾಖೆ ಅಧಿಕಾರಿ ಆರೇಳು ತಿಂಗಳಿಗೊಮ್ಮೆ ಬದಲಾಗುತ್ತಿರುವುದರಿಂದ ವಸತಿ ನಿಲಯಗಳಲ್ಲಿನ ಸಮಸ್ಯೆಗೆ ಮುಕ್ತಿ ಇಲ್ಲದಂತಾಗಿದೆ ಎಂಬುದು ವಿದ್ಯಾರ್ಥಿಗಳ ದೂರು.
ಅಧಿಕಾರಿ ಹುದ್ದೆ ಖಾಲಿ: ದೇವದುರ್ಗ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆ.31ರಂದು ನಿವೃತ್ತರಾಗಿದ್ದಾರೆ. ಒಂದು ತಿಂಗಳಾದರೂ ಈ ಹುದ್ದೆಗೆ ಅಧಿಕಾರಿ ನಿಯೋಜನೆ ಮಾಡಿಲ್ಲ. ಇದ್ದವರಿಗೆ ಹಣಕಾಸು ಚಾರ್ಜ್ ನೀಡಿಲ್ಲ. ಕಡತಗಳ ವಿಲೇವಾರಿ ಆಗುತ್ತಿಲ್ಲ. ಹೀಗಾಗಿ ವಸತಿ ನಿಲಯ ಮೇಲ್ವಿಚಾರಕರು ತೊಂದರೆ ಎದುರಿಸುವಂತಾಗಿದೆ. ತಾತ್ಕಾಲಿಕ ಮ್ಯಾನೇಜರ್‌ಗೆ ಕಚೇರಿ ವಸತಿ ನಿಲಯಗಳ ಹೊಣೆ ವಹಿಸಲಾಗಿದೆ. ವಸತಿ ನಿಲಯದಲ್ಲಿನ ಸಮಸ್ಯೆ ಹೇಳಿಕೊಳ್ಳಲು ವಿದ್ಯಾರ್ಥಿಗಳು ಕಚೇರಿಗೆ ಬಂದರೆ ಅಧಿಕಾರಿಗಳಿಲ್ಲ ಎಂದು ವಾಪಸ್ ಕಳಿಸಲಾಗುತ್ತಿದೆ. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಾಲೂಕು ಕಚೇರಿಗೆ ಅಧಿಕಾರಿ ನೇಮಿಸುವ ಜೊತೆಗೆ ವಸತಿ ನಿಲಯಗಳಲ್ಲಿನ ಸಮಸ್ಯೆ ಪರಿಹರಿಸಬೇಕು ಎಂದು ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.