ಯಳಂದೂರು: ಚಿಕಿತ್ಸೆ ಪಡೆಯಲು ರೋಗಿಗಳು ಆಸ್ಪತ್ರೆಗೆ ಬರುವುದು ಸಹಜ. ಆದರೆ, ರೋಗ ಗುಣಪಡಿಸಬೇಕಾದ ಆಸ್ಪತ್ರೆಗೇ ಚಿಕಿತ್ಸೆ ಬೇಕಿದೆ ಎಂದರೆ ಹೇಗೆ?. “ಒಂದೆಡೆ ಆಸ್ಪತ್ರೆ ಹಾಸಿಗೆಯ ಮೇಲೆ ಮಲಗಿ ಕಾಗದದ ರಟ್ಟಿನ ಮೂಲಕ ಗಾಳಿ ಬೀಸಿಕೊಳ್ಳುವ ರೋಗಿಗಳು, ಸೊಳ್ಳೆಗಳ ಕಾಟಕ್ಕೆ ರೋಸಿ ಹೋದ ಸಂಬಂಧಿಕರು, ರಾತ್ರಿಯಾದರೆ ಆಸ್ಪತ್ರೆಯಲ್ಲಿ ಆವರಿಸುವ ಕಗ್ಗತ್ತಲು, ಉಪಯೋಗಕ್ಕೆ ಬಾರದ ಇಸಿಜಿ, ಎಕ್ಸರೇ ಯಂತ್ರಗಳು’!.
ನಿರ್ಲಕ್ಷ್ಯ: ಸರ್ಕಾರ ಸರ್ಕಾರಿ ಆಸ್ಪತ್ರೆಗಳಿಗೆ ಹಲವು ಸೌಲಭ್ಯಗಳನ್ನು ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ, ಆಸ್ಪತ್ರೆಗಳಿಗೆ ಹೇಗೆ ಕೆಟ್ಟ ಹೆಸರು ಬರುತ್ತದೆ ಎಂದರೆ ಈ ಸನ್ನಿವೇಶವೇ ಸಾಕ್ಷಿಯಂತಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದಲೂ ಕೇಬಲ್ ವೈಯರ್‌ನಲ್ಲಿ ತಾಂತ್ರಿಕ ದೋಷವುಂಟಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿ ರೋಗಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಆದರೆ, ಸರಿಪಡಿಸಿ ರೋಗಿಗಳಿಗೆ ಸೌಲಭ್ಯ ಕಲ್ಪಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ಬಿಸಿಲಿನ ಧಗೆಗೆ ಜನ ತತ್ತರಿಸುತ್ತಿದ್ದಾರೆ. ಇನ್ನು ಚಿಕಿತ್ಸೆಗಾಗಿ ಆಗಮಿಸಿ ಒಳರೋಗಿಯಾಗಿ ದಾಖಲಾಗಿರುವವರ ಪರಿಸ್ಥಿತಿ ಅಯೋಮಯ.
ಮೂಲಭೂತ ಸೌಲಭ್ಯ ಕೊರತೆ: ಆಸ್ಪತ್ರೆಯ ಕೊಠಡಿ ಯಲ್ಲಿ ಎಸಿ, ಫ್ಯಾನ್ ಇಲ್ಲದೇ ರೋಗಿಗಳಿಗೆ ಮತ್ತಷ್ಟು ಸಮಸ್ಯೆಯಾಗಿದೆ. ಮೂಲಭೂತ ಸೌಲಭ್ಯಗಳ ಕೊರತೆ, ಚಿಕಿತ್ಸೆಗೆ ಬೇಕಾದ ಸೂಕ್ತ ಸಲಕರಣೆಗಳ ಕೊರತೆ, ವೈದ್ಯರ ಕೊರತೆಯೂ ಕಾಡುತ್ತಿದೆ. ಇಷ್ಟೆಲ್ಲಾ ಸಮಸ್ಯೆ ಇರುವುದರಿಂದ ರೋಗಿಗಳು ಅನಿವಾರ್ಯ ವಾಗಿ ಖಾಸಗಿ ಆಸ್ಪತ್ರೆಗಳ ಕಡೆಗೆ ಮುಖ ಮಾಡಬೇ ಕಾದ ಸನ್ನಿವೇಶ ಸೃಷ್ಟಿಸಿದೆ.
ರಕ್ತ ಪರೀಕ್ಷೆ, ಇಸಿಜಿ, ಎಕ್ಸ್‌ರೇಗೂ ತೊಂದರೆ: ವಿದ್ಯುತ್ ಸಮಸ್ಯೆಯಿಂದಾಗಿ ರಕ್ತ ಪರೀಕ್ಷೆ, ಇಸಿಜಿ ಹಾಗೂ ಎಕ್ಸ್ ರೇ ತೆಗೆಯಲು ಸಾಧ್ಯವಾಗುತ್ತಿಲ್ಲ. ಹೆಚ್ಚಾಗಿ ಬಡ ಜನರೇ ಇಲ್ಲಿಗೆ ಆಗಮಿಸಲಿದ್ದು ಅನಿವಾರ್ಯವಾಗಿ ಖಾಸಗಿ ಲ್ಯಾಬ್‌ಗಳಲ್ಲಿ ಮಾಡಿಸಬೇಕು, ಇಲ್ಲವೇ ದೂರ ದ ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ತೆರಳಬೇಕಿದೆ.
ಕೊಠಡಿಗಳಲ್ಲಿ ಫ್ಯಾನ್ ಇಲ್ಲದೇ ಸೊಳ್ಳೆಗಳ ಕಾಟ: ಕಳೆದ ಒಂದು ವಾರದಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಚುನಾವಣೆ ಕೆಲಸದಲ್ಲಿದ್ದರು. ಈ ಬಗ್ಗೆ ಯಾರೂ ಗಮನಹರಿಸಿಲ್ಲ, ಜತೆಗೆ ಇಲ್ಲಿನ ತಾಲೂಕು ವೈದ್ಯಾಧಿಕಾರಿಗಳೂ ಬಹಳಷ್ಟು ನಿರ್ಲಕ್ಷ್ಯವಹಿಸಿದ್ದಾರೆ ಎಂಬುದು ರೋಗಿಗಳ ದೂರು. ಇದರಿಂದ ರೋಗಿಗಳ ಪ್ರಾಣಕ್ಕೆ ತೊಂದರೆ ಯಾದರೂ ಆಶ್ಚರ್ಯಪಡಬೇಕಾಗಿಲ್ಲ. ವಿದ್ಯುತ್ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಕಗ್ಗತ್ತಲೂ ಆವರಿಸಿದೆ. ಜತೆಗೆ ಫ್ಯಾನ್, ಎಸಿ ವ್ಯವಸ್ಥೆ ಇಲ್ಲದೇ ಮತ್ತಷ್ಟು ತೊಂದರೆಯಾಗುತ್ತಿದ್ದು, ರಾತ್ರಿ ವೇಳೆ ಸೊಳ್ಳೆ ಕಾಟ ವಿಪರೀತವಾಗಿದೆ. ಇದರೊಂದಿಗೆ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಇದ್ದು ಇದು ಒಳರೋಗಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ವೈದ್ಯಾಧಿಕಾರಿಗಳ ದಿವ್ಯ ನಿರ್ಲಕ್ಷ್ಯ: ವಾರದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆಯಿದೆ. ಒಳರೋಗಿಗಳು, ಹೊರ ರೋಗಿಗಳು ಹಾಗೂ ವೈದ್ಯರು ಸೇರಿ ಸಿಬ್ಬಂದಿಗೆ ಸಾಕಷ್ಟು ಸಮಸ್ಯೆಯಾಗುತ್ತಿದ್ದರೂ ಈ ಬಗ್ಗೆ ಸಂಬಂಧಪಟ್ಟ ತಾಲೂಕು ವೈದ್ಯಾ ಧಿಕಾರಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ನಿರ್ಲಕ್ಷ್ಯವಹಿಸಿದ್ದಾರೆಂದು ಸ್ಥಳೀಯ ಕುಮಾರ್ ಆರೋಪಿಸಿದ್ದಾರೆ.
ಒಂದು ವಾರದಿಂದಲೂ ಕೆಲವು ತಾಂತ್ರಿಕ ಕಾರಣ ಗಳಿಂದ ವಿದ್ಯುತ್ ವ್ಯತ್ಯಯ ವಾಗಿದೆ. ಸಂಬಂಧ ಪಟ್ಟ ತಂತ್ರ ಜ್ಞರನ್ನು ಕರೆಯಿಸಿ ಪರಿಹಾರಕ್ಕೆ ಕ್ರಮ ವಹಿಸಲಾಗಿದೆ
. -ಡಾ.ಶ್ರೀಧರ್, ವೈದ್ಯಾಧಿಕಾರಿ, ಯಳಂದೂರು ಸಾರ್ವಜನಿಕ ಆಸ್ಪತೆ
– ಫೈರೋಜ್‌ಖಾನ್