ದಾವಣಗೆರೆ: ವಿದೇಶಿ ಆಟಗಳ ಅಬ್ಬರದ ನಡುವೆ ಕಬಡ್ಡಿಯಂತಹ ಅನೇಕ ದೇಶಿ ಕ್ರೀಡೆಗಳು ಕಣ್ಮರೆಯಾಗುತ್ತಿವೆ ಎಂದು ಮೇಯರ್ ಅನಿತಾಬಾಯಿ ವಿಷಾದಿಸಿದ್ದಾರೆ.
ಗುರುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ನಡೆದ ದಾವಣಗೆರೆ
ವಿಶ್ವವಿದ್ಯಾಲಯ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿ ಮತ್ತು ವಿಶ್ವವಿದ್ಯಾಲಯ ತಂಡದ ಆಯ್ಕೆ ಉದ್ಘಾಟಿಸಿ ಮಾತನಾಡಿದ ಅವರು, ಈಗ ಕ್ರಿಕೆಟ್, ಟೆನ್ನಿಸ್, ಬ್ಯಾಡ್ಮಿಂಟನ್ ಇತರೆ ಆಧುನಿಕ ಕ್ರೀಡೆಗಳಿಗೆ ಅತಿ ಹೆಚ್ಚು ಪ್ರೋತ್ಸಾಹ
ದೊರೆಯುತ್ತಿದೆ. ದೇಶಿ ಕ್ರೀಡೆಗಳು ಪ್ರೋತ್ಸಾಹದ ಕೊರತೆಯಿಂದ ನಿಧಾನವಾಗಿ ಕಾಣೆಯಾಗುತ್ತಿವೆ ಎಂದರು.
ಈಚೆಗೆ ಕಬಡ್ಡಿಗೂ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಆ ಆಟದತ್ತ ಜನರು ಮತ್ತೆ ಆಕರ್ಷಿತರಾಗುತ್ತಿದ್ದಾರೆ. ಮಹಿಳೆಯರು ಭಾಗವಹಿಸುತ್ತಿರುವುದು ಸಂತೋಷದ ವಿಚಾರ. ವಿದ್ಯಾರ್ಥಿಗಳು ಯಾವುದೇ ಕ್ರೀಡೆಯನ್ನು ಅಲಕ್ಷ್ಯ ಮಾಡಬಾರದು. ಪಠ್ಯದಷ್ಟೇ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗೆ ಸಮಾನ ಗಮನ ನೀಡಬೇಕು. ಸೋಲು-ಗೆಲುವು ಸಾಮಾನ್ಯ. ಭಾಗವಹಿಸುವಿಕೆಯೇ ಮುಖ್ಯ ಎಂದು ತಿಳಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್ ಮಾತನಾಡಿ, ಪ್ರೊ- ಕಬಡ್ಡಿ ಪಂದ್ಯಾವಳಿ ಪ್ರಾರಂಭದ ನಂತರ ದೇಶಿ ಕ್ರೀಡೆ ಕಬಡ್ಡಿಗೆ ಹೆಚ್ಚು ಪ್ರೋತ್ಸಾಹ, ಉತ್ತೇಜನ ದೊರೆಯುತ್ತಿದೆ. ದೇಶಿಯ ಕ್ರೀಡೆಗಳಿಗೆ ಇನ್ನೂ ಹೆಚ್ಚಿನ ಮಾನ್ಯತೆ ದೊರೆಯುವಂತಾಗಲಿ. ಒಲಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಲಿ ಎಂದು
ಆಶಿಸಿದರು. ರಾಜ್ಯ ವಿಶ್ವವಿದ್ಯಾಲಯ ಮತ್ತು ಕಾಲೇಜು ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ
ಪ್ರೊ| ಸಿ.ಎಚ್. ಮುರಿಗೇಂದ್ರಪ್ಪ ಮಾತನಾಡಿ, ಹಿಂದೆ ಕ್ರೀಡೆಗಳಿಗೆ ಹೆಚ್ಚು ಉತ್ತೇಜನ, ಪ್ರೋತ್ಸಾಹದಾಯಕ
ವಾತಾವರಣ ಇಲ್ಲದ ಕಾರಣಕ್ಕೆ ಕ್ರೀಡೆಯಲ್ಲಿ ಹಿಂದುಯುಳಿಲಾಯಿತು. ಈಗಲೂ ಕೆಲ ಆಟಗಳಿಗೆ ದೊರೆಯುತ್ತಿರುವ ಪ್ರೋತ್ಸಾಹ ಇತರೆ ಕ್ರೀಡೆಗಳಿಗೆ ದೊರೆಯುತ್ತಿಲ್ಲ. ಕಬಡ್ಡಿ ಎಲ್ಲ ಆಟಗಳಿಗೆ ಸಮಾನ ಪ್ರೋತ್ಸಾಹ
ದೊರೆಯಬೇಕಿದೆ ಎಂದರು.
ಕಾಲೇಜು ಪ್ರಾಚಾರ್ಯ ಡಾ| ಮಲ್ಲಿಕಾರ್ಜುನ ಕಲಮರಹಳ್ಳಿ, ದಾವಣಗೆರೆ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕ ಡಾ| ಎಂ.ಎಸ್. ರಾಜಕುಮಾರ್, ಡಾ| ಕೆ.ಎಂ. ಯೋಗೀಶ್ ,ಡಾ|ಕೆ.ಎಚ್.ಜಿ. ಶಾಂತಕುಮಾರಿ, ಎಂ.ಕೆ.ದಾನಪ್ಪ, ಎಸ್.ಆರ್. ಭಜಂತ್ರಿ, ಭೀಮಣ್ಣ ಸುಣಗಾರ್, ಶಶಿಕಲಾ, ಡಾ| ಪ್ರಕಾಶ್ ಹಲಗೇರಿ, ತಿಪ್ಪಾರೆಡ್ಡಿ, ಡಾ| ಟಿ. ಮಂಜಣ್ಣ ಇತರರು ಇದ್ದರು.