Advertisement
ಅಮಾಸೆಬೈಲು: ಸರಕಾರದ ಲಕ್ಷಾಂತರ ರೂ. ಅನುದಾನವನ್ನು ವ್ಯಯಿಸಿ ಜನರ ಅನುಕೂಲಕ್ಕಾಗಿ ಸಮುದಾಯ ಭವನಗಳನ್ನು ನಿರ್ಮಿಸುತ್ತಿದ್ದರೂ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಪಂಚಾಯತ್‌ನ ಬೇಜವ್ದಾರಿತನದಿಂದಾಗಿ ಇದ್ದು ಇಲ್ಲದಂತಾಗುವುದು ಮಾತ್ರ ದುರಂತ. ಇದಕ್ಕೊಂದು ತಾಜಾ ನಿದರ್ಶನ ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಮ್ರಿಜೆಡ್ಡುವಿನಲ್ಲಿ 10 ವರ್ಷಗಳ ಹಿಂದೆ ನಿರ್ಮಾಣಗೊಂಡ ಸಮುದಾಯ ಭವನ.
Related Articles
Advertisement
14 ಕೊರಗ ಕುಟುಂಬ :
ಕುಮ್ರಿಜೆಡ್ಡುವಿನ ಕಾಲನಿಯಲ್ಲಿ ಪರಿಶಿಷ್ಟ ಪಂಗಡದ ಕೊರಗ ಸಮುದಾಯದ 14 ಕುಟುಂಬಗಳು ನೆಲೆಸಿದ್ದು, ಇವರ ಅನುಕೂಲಕ್ಕಾಗಿ ಈ ಸಮುದಾಯ ಭವನವನ್ನು ನಿರ್ಮಿಸಿ ಕೊಡಲಾಗಿತ್ತು. ಆದರೆ ಇದಕ್ಕೆ ಇನ್ನೂ ಕೂಡ ಸರಿಯಾದ ಸವಲತ್ತುಗಳನ್ನು ಕಲ್ಪಿಸದ ಕಾರಣ, ಈ ಸಭಾಭವನವೇ ನಿಷ್ಪ್ರಯೋಜಕವಾಗಿದೆ. ಸುತ್ತಮತ್ತ ಗಿಡಗಂಟಿಗಳೆಲ್ಲ ಬೆಳೆದಿವೆ.
ಬೋರಿದೆ.. ಮೋಟಾರಿಲ್ಲ.. :
ಈ ಕುಮ್ರಿಜೆಡ್ಡು ಕೊರಗ ಕಾಲನಿಯಲ್ಲಿ ಸಮುದಾಯ ಭವನದ ನಿರ್ವಹಣೆ ಮಾತ್ರವಲ್ಲದೆ, ಇನ್ನೂ ಹಲವಾರು ಸಮಸ್ಯೆಗಳು ಪರಿಹಾರಕ್ಕಾಗಿ ಕಾಯುತ್ತಿವೆ. ಅದರಲ್ಲೂ ಪ್ರಮುಖವಾಗಿ ಸುಮಾರು 6 ತಿಂಗಳ ಹಿಂದೆ ಗಿರಿಜನ ಶ್ರೇಯೋಭಿವೃದ್ಧಿ ಇಲಾಖೆಯಿಂದ ಕುಡಿಯುವ ನೀರಿಗಾಗಿ ಕೊಳವೆ ಬಾವಿ ತೋಡಲಾಗಿದೆ. ಆದರೆ ಅದಕ್ಕೆ ಈವರೆಗೆ ಮೋಟಾರು ಪಂಪ್ ಅನ್ನೇ ಅಳವಡಿಸಿಲ್ಲ. ಮಾತ್ರವಲ್ಲ ಅದಕ್ಕೂ ವಿದ್ಯುತ್ ಸಂಪರ್ಕ ಒದಗಿಸಿಲ್ಲ. ಈಗ ಮಳೆಗಾಲವಾದ್ದರಿಂದ ಅಷ್ಟೊಂದು ಅಗತ್ಯವಿಲ್ಲದಿದ್ದರೂ, ಬೇಸಿಗೆ ಆರಂಭವಾದ ತತ್‌ಕ್ಷಣ ಮೋಟಾರಿನ ಅಗತ್ಯವಿದೆ. ಇನ್ನೂ ಈ ಕಾಲನಿಯವರಿಗಾಗಿ ನಿರ್ಮಿಸಿದ ಕುಡಿಯುವ ನೀರಿನ ಟ್ಯಾಂಕ್‌ಗೆ ನೀರಿನ ಸಂಪನ್ಮೂಲವನ್ನೇ ಒದಗಿಸಿಲ್ಲ.
ಯಾವುದೇ ಕಾಳಜಿಯಿಲ್ಲ :
ಕುಮ್ರಿಜೆಡ್ಡುವಿನ ಕೊರಗ ಕಾಲನಿಗೆ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಬೀದಿ ದೀಪಗಳನ್ನೇ ನೀಡುತ್ತಿಲ್ಲ. ಇನ್ನೂ ಇಲ್ಲಿನ ಸಮುದಾಯ ಭವನವು ನಿರ್ಮಾಣಗೊಂಡು ದಶಕ ಕಳೆದರೂ ಇನ್ನೂ ವಿದ್ಯುತ್ ಸೌಕರ್ಯ ನೀಡಿಲ್ಲ. ಸ್ಥಳೀಯಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಇಲ್ಲಿನ ಜನರ ಬಗ್ಗೆ ಯಾವುದೇ ಕಾಳಜಿಯಿಲ್ಲ. ಯಾವುದೇ ಸೌಲಭ್ಯವನ್ನು ಒದಗಿಸುವ ಗೋಜಿಗೆ ಹೋಗಿಲ್ಲ. ಈ ಕುಮ್ರಿಜೆಡ್ಡು ಕಾಲನಿಯ ಬಗೆಗಿನ ನಿರ್ಲಕ್ಷé ಸರಿಯಲ್ಲ. – ಆನಂದ ಕಾರೂರು, ದಲಿತ ಮುಖಂಡರು
ಪರಿಹಾರಕ್ಕೆ ಪ್ರಯತ್ನ:
ಕುಮ್ರಿಜೆಡ್ಡುವಿನ ಕೊರಗ ಕಾಲನಿಯ ಮೂಲ ಸೌಕರ್ಯಗಳ ಕೊರತೆ ಬಗ್ಗೆ ಗಮನದಲ್ಲಿದ್ದು, ಈ ಬಗ್ಗೆ ಪಂಚಾಯತ್‌ನಿಂದ ಸಾಧ್ಯವಾದಷ್ಟರ ಮಟ್ಟಿಗೆ ಪರಿಹರಿಸಲು ಪ್ರಯತ್ನಿಸಲಾಗುವುದು. – ಚಂದ್ರಶೇಖರ್ ಶೆಟ್ಟಿ, ಅಧ್ಯಕ್ಷರು, ಅಮಾಸೆಬೈಲು ಗ್ರಾ.ಪಂ.
-ಪ್ರಶಾಂತ್ ಪಾದೆ