ತುಮಕೂರು: ಕಲ್ಪತರು ನಾಡಿನಲ್ಲಿ ಸಾವಿರಾರು ಅಡಿಗಳವರೆಗೆ ಭೂಮಿ ಕೊರೆದರೂ ನೀರು ಬರುತ್ತಿಲ್ಲ ಅಂತರ್ಜಲ ಕುಸಿದಿದೆ. ದಿನದಿಂದ ದಿನಕ್ಕೆ ಸುಡು ಬಿಸಿಲಿನ ಬೇಗೆ ಹೆಚ್ಚುತ್ತಿದೆ.
ಕೋವಿಡ್ 19 ಮಹಾಮಾರಿಗೆ ಜನ ಹೆದರಿದ್ದಾರೆ, ಇದರ ನಡುವೆ ಗ್ರಾಮಗಳಲ್ಲಿ ಕುಡಿವ ನೀರಿನ ಹಾಹಾಕಾರ ಉಂಟಾಗಿದೆ. ನಮ್ಮ ಹಳ್ಳಿಯಾಗೆ ಕರೆಂಟೂ ಇಲ್ಲ, ನಲ್ಲಿಯಾಗೆ ನೀರೂ ಬರುತ್ತಿಲ್ಲ, ನೀರಿಗಾಗಿ ಬಹುದೂರ ಹೋಗಬೇಕಾದ ಪರಿಸ್ಥಿತಿ ಬಂದೈತೆ, ನಮ್ಮ ಗೋಳು ಕೇಳ್ಳೋದಾದ್ರು ಯಾರು?
ಇದು ನಿತ್ಯವೂ ಜಿಲ್ಲೆಯ ಗ್ರಾಮೀಣ ಪ್ರದೇಶದ ಹಳ್ಳಿಯ ಜನರ ಮಾತಾಗಿದೆ. ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೇಸಿಗೆ ಸುಡು ಬಿಸಿಲಿನ ಕಾವು ಈ ಹಿಂದಿನ ಎಲ್ಲಾ ವರ್ಷಗಳನ್ನೂ ಮೀರಿ ಹೆಚ್ಚಾಗಿದೆ. ಈ ನಡುವೆ ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕವಾಗಿ ವಿದ್ಯುತ್ ಇಲ್ಲದ ಕಾರಣದಿಂದ ಕುಡಿವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ. ಅಂತರ್ಜಲ ಕುಸಿತ ದಿಂದ ಬೋರ್‌ವೆಲ್ ಗಳಲ್ಲಿ ನೀರು ಬರಿದಾಗುತ್ತಿದೆ. ನೀರಿಗಾಗಿ ಜನರು ಹಾಹಾಕಾರ ಪಡುವ ಪರಿಸ್ಥಿತಿ ಬಂದೊದಗಿದೆ. ಸುಡು ಬಿಸಿಲಿನ ಬೇಸಿಗೆ ಕಾವೇರುತ್ತಿರುವಂತೆಯೇ ಜಿಲ್ಲೆಯ ಎಲ್ಲಾ ಕಡೆಯೂ ನೀರಿನ ತೊಂದರೆ ಹೆಚ್ಚಾಗುತ್ತಿದೆ. ತುಮಕೂರು, ತಿಪಟೂರು, ಶಿರಾ, ಮಧುಗಿರಿ, ಪಾವಗಡ, ಚಿಕ್ಕನಾಯಕನಹಳ್ಳಿ, ಕುಣಿಗಲ್, ಕೊರಟಗೆರೆ, ಗುಬ್ಬಿ, ತುರು ವೇಕೆರೆ ತಾಲೂಕುಗಳ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ..
43 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು: ಜಿಲ್ಲೆಯ 43 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮಧುಗಿರಿ ಮತ್ತು ಪಾವಗಡ ತಾಲೂಕಿನಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ತಿಂಗಳಿಗೆ ಬಾಡಿಗೆ ರೂಪದಲ್ಲಿ ಹಣ ನೀಡಿ ನೀರು ಪಡೆದು ಸಾರ್ವಜನಿಕರಿಗೆ ನೀಡಲಾಗುತ್ತಿದೆ. ದಿನದಿಂದ ದಿನಕ್ಕೆ ಬೋರ್‌ವೆಲ್‌ಗಳಲ್ಲಿ ಬರುತ್ತಿರುವ ನೀರಿನ ಪ್ರಮಾಣದಲ್ಲಿ ಕುಸಿತ ಉಂಟಾಗುತ್ತಿದೆ. ಭೂಮಿಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದೇರೀತಿ ಅಂತರ್ ಜಲ ಮಟ್ಟದಲ್ಲಿ ಕುಸಿತ ಉಂಟಾದರೆ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಕುಡಿಯುವ ನೀರಿನ ತಾತ್ವಾರ ಇನ್ನೂ ಹೆಚ್ಚಲಿದೆ.
ಜಿಲ್ಲೆಯಲ್ಲಿ ಕುಡಿವ ನೀರು ಒದಗಿಸಲು ಹಣಕಾಸಿನ ಕೊರತೆಲ್ಲ. ನೀರಿಗೆ ಮೊದಲ ಆದ್ಯತೆ ನೀಡಲು ಜಿಲ್ಲೆಯ ಎಲ್ಲಾ ತಾಪಂ ಗಳ ಇಒ ಗಳ ಸಭೆ ಕರೆದು ಸೂಚಿಸಲಾಗಿದೆ. ಕುಡಿಯುವ ನೀರಿಗೆ 50 ಲಕ್ಷ ಮೀಸಲಿಡಲಾಗಿದೆ, 14ನೇ ಹಣಕಾಸು ಯೋಜನೆಯಲ್ಲಿಯೂ ಕುಡಿಯುವ ನೀರಿಗೆ ಬಳಸಿ ಕೊಳ್ಳಲು ಸೂಚಿಸಲಾಗಿದೆ ಎಂದು ಜಿಪಂ ಸಿಇಒ ಶುಭಕಲ್ಯಾಣ್ ಉದಯವಾಣಿಗೆ ತಿಳಿಸಿದ್ದಾರೆ.
ಜಿಲ್ಲೆಯ 100 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಕಂಡು ಬಂದಿದೆ. ಅದರಲ್ಲಿ ತೀವ್ರ ಸಮಸ್ಯೆ ಇರುವ 43 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸಬರಾಜು ಮಾಡುತ್ತಿದ್ದೇವೆ. ಕೆಲವು ಕಡೆ ಖಾಸಗೀ ಬೋರ್ ವೆಲ್ ಬಾಡಿಗೆ ಪಡೆದು ಜನರಿಗೆ ನೀರು ಒದಗಿಸುತ್ತಿದ್ದೇವೆ.
-ಶುಭಾ ಕಲ್ಯಾಣ್, ಜಿಪಂ ಸಿಇಒ
– ಚಿ.ನಿ.ಪುರುಷೋತ್ತಮ್