Advertisement

ಕನ್ನಡ ಸಾಹಿತ್ಯದಲ್ಲಿ ಕನಸುಗಳ ಕೊರತೆ

11:26 AM Nov 02, 2018 | |

ಬೆಂಗಳೂರು: ಕನ್ನಡ ಸಾಹಿತ್ಯಕ್ಕೆ ಹಲ್ಮಿಡಿ ಶಾಸನದಿಂದ ಇಲ್ಲಿಯವರೆಗೂ ಅತ್ಯದ್ಭುತವಾದ ನೆನಪುಗಳಿವೆ. ಆದರೆ ಈಗ ಅಷ್ಟೇ ತೂಕದ ದೊಡ್ಡ ಕನಸುಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಕಳವಳ ವ್ಯಕ್ತಪಡಿಸಿದರು.

Advertisement

ಸಪ್ನ ಬುಕ್‌ ಹೌಸ್‌ ಗಾಂಧಿ ಭವನದಲ್ಲಿ ಗುರುವಾರ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ “ಕನ್ನಡ -ಅಂದು -ಇಂದು -ಮುಂದು’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯಕ್ಕೆ ನೆನಪಿನ ಭಾರ ಹೆಚ್ಚಾಗಿದ್ದು, ಕನಸುಗಳ ಕೊರತೆ ಎದ್ದು ಕಾಣುತ್ತಿದೆ ಎಂದರು.

ಪಾಶ್ಚಿಮಾತ್ಯ ಸಾಹಿತ್ಯದ ಪ್ರಭಾವ ಕನ್ನಡ ಸಾಹಿತ್ಯದ ಮೇಲೂ ಬೀರಿದ್ದು, ನವ್ಯಕಾಲಘಟ್ಟದ ಸಾಹಿತ್ಯಗಳನ್ನು ಇಂಗ್ಲಿಷ್‌ ಸಾಹಿತ್ಯ ಹೆಚ್ಚು ಆಕರ್ಷಿಸಿದೆ. ಹೀಗಾಗಿಯೇ ಅವರು ಬ್ರಿಟಿಷ್‌ ಕಾವ್ಯ ಮೀಮಾಂಸೆಯನ್ನು ಕನ್ನಡಕ್ಕೆ ಪರಿಚಯಿಸಿದರು. ಸಾಲದಕ್ಕೆ ಸಾಹಿತ್ಯದಲ್ಲಿ ಪಾಶ್ಚಿಮಾತ್ಯ ಮಾದರಿಗಳನ್ನು ಅನುಸರಿಸಿದರು.

ಆದರೆ, ಪಾಶ್ಚಿಮಾತ್ಯ ಸಾಹಿತ್ಯದಲ್ಲೀಗ ಅನುಸರಿಬೇಕಾದಂತಹ ಯಾವ ಮಾದರಿಗಳು ಕೂಡ ಅವರಿಗೆ ಸಿಗುತ್ತಿಲ್ಲ. ಆ ಹಿನ್ನೆಲೆಯಲ್ಲಿಯೇ ಗಂಡಸರು ಹೆಂಗಸರ ಮೇಲೆ, ಹೆಂಗಸರು ಗಂಡಸರ ಮೇಲೆ “ಮಿ ಟೂ’ ಜತೆ “ಯೂ ಟು’ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ನಮ್ಮ ಸಾಹಿತ್ಯದ ಬೇರುಗಳನ್ನು ನಾವೇ ಹುಡುಕಿಕೊಳ್ಳಬೇಕಾಗಿದ್ದು, ಇದರ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ಯುವಕರು ಆಧುನಿಕ ತಂತ್ರಜ್ಞಾನ ಬಳಕೆಯಲ್ಲಿ ಮುಳುಗಿದ್ದು, ಇವರಿಗೆ ಮಾರ್ಗದರ್ಶನ ನೀಡಬೇಕಾಗಿದೆ. ಯುವಕರಿಂದಲೂ ಸಾಹಿತ್ಯದಲ್ಲಿ ಪ್ರಯೋಗಗಳು ನಡೆಯಲಿ ಎಂದು ಆಶಿಸಿದರು.

Advertisement

ಮರಾಠಿಗರಿಂದ ಅಪಪ್ರಚಾರ: ಕವಿ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ ಮಾತನಾಡಿ, ನಾಡಿನ ಸೊಗಡು ಉಳಿಸಿಕೊಳ್ಳಲು ನಾವು ಸಂಪೂರ್ಣ ವಿಫ‌ಲವಾಗಿದ್ದೇವೆ. ಗದಗ ಜಿÇÉೆಯಲ್ಲಿ ತಯಾರಿಸುವ ಪಾದರಕ್ಷೆಯನ್ನು ಕೊಲ್ಹಾಪುರ ಚಪ್ಪಲಿ ಎಂದು, ಇಳಕಲ್‌ ಸೀರೆಯನ್ನು ಮಹಾರಾಷ್ಟ್ರದ ಸೀರೆ ಎಂದು ಹೇಳಿಕೊಂಡು ಮರಾಠಿಗರು ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಬೇಕಾದ ಅಗತ್ಯವಿದೆ.

ಪ್ರತಿಯೊಬ್ಬ ಜನಸಾಮಾನ್ಯರಲ್ಲಿ ಕನ್ನಡ ಅಸ್ಮಿತೆ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು. ಕೇಂದ್ರ ಸರ್ಕಾರ ನಿರ್ಮಿಸಿರುವ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಪ್ರತಿಮೆ ಮೇಲೆ ದಕ್ಷಿಣ ಭಾರತದ ಭಾಷೆಗಳಿಗೆ ಸ್ಥಳವೇ ಇಲ್ಲ. ದಕ್ಷಿಣ ಭಾರತದ ಭಾಷೆಯಗಳನ್ನು ಕೇಂದ್ರ ಸರ್ಕಾರ ಅವಗಣನೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಇದೇ ವೇಳೆ ನಡೆದ “ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಕನ್ನಡ -ಕರ್ನಾಟಕ’, “ನವೋದಯ ಕಾಲದ ಕವನಗಳಲ್ಲಿ ಕನ್ನಡ’, “ಕನ್ನಡ ಚಲನಚಿತ್ರ – ನಾಟಕಗಳಲ್ಲಿ ಕನ್ನಡ’, “ಕನ್ನಡ ಮಾಧ್ಯಮ -ಶಿಕ್ಷಣದ ಬಿಕ್ಕಟ್ಟುಗಳು’ ಸೇರಿದಂತೆ ಹಲವು ವಿಚಾರಗೋಷ್ಠಿಗಳು ನಡೆದವು. ಸಪ್ನ ಬುಕ್‌ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್‌ ಶಾ, ದೊಡ್ಡೆಗೌಡ ಉಪಸ್ಥಿತರಿದ್ದರು.

ಐಎಎಸ್‌ ಅಧಿಕಾರಿಗಳಿಂದ ಅಡ್ಡಗಾಲು: ಕನ್ನಡ ಭಾಷೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರತ್ಯೇಕ ಭಾಷಾ ಕಾಯ್ದೆ ಜಾರಿಗೆ ಚಿಂತನೆ ನಡೆಸಲಾಗಿದೆ. ಆದರೆ ಕೆಲ ಐಎಎಸ್‌ ಅಧಿಕಾರಿಗಳು ಇದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪೊ›.ಎಸ್‌.ಜಿ.ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ಕೆಲ ಖಾಸಗಿ ಶಾಲೆಗಳಲ್ಲಿ ಕನ್ನಡ ಮಾತನಾಡಿದರೆ ದಂಡ ವಿಧಿಸುವ ನಿಯಮ ಇದ್ದು, ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಠಿಣ ಕಾನೂನು ಜಾರಿಗೆ ತಂದು, ಆರು ತಿಂಗಳಲ್ಲಿ ಕನ್ನಡ ಕಲಿಯುವಂತೆ ಮಾಡಬೇಕು. 
-ಡಾ.ವಸುಂಧರಾ ಭೂಪತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ 

Advertisement

Udayavani is now on Telegram. Click here to join our channel and stay updated with the latest news.

Next