ಹಾನಗಲ್ಲ: ಜಿಲ್ಲೆಯಲ್ಲೇ ಹಾನಗಲ್ಲ ಅತಿದೊಡ್ಡ ಹಾಗೂ ಅತಿ ಹೆಚ್ಚು ಹಳ್ಳಿಗಳನ್ನು ಹೊಂದಿರುವ ತಾಲೂಕು. 100 ಹಾಸಿಗೆಯುಳ್ಳ ತಾಲೂಕು ಸಾರ್ವಜನಿಕ ಆಸ್ಪತ್ರೆ ಸುಸಜ್ಜಿತ ಕಟ್ಟಡ ಹೊಂದಿದ್ದರೂ ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆಯಿಂದ ಬಡ ಜನತೆಗೆ ಸೂಕ್ತ ವೈದ್ಯಕೀಯ ಸೌಲಭ್ಯ ಮಾತ್ರ ಮರೀಚಿಕೆಯಾಗಿದೆ.
ಹಾನಗಲ್ಲ ತಾಲೂಕು ಸಾರ್ವಜನಿಕ ಆಸ್ಪತ್ರೆ ಸುಸಜ್ಜಿತ ಕಟ್ಟಡ, ಔಷಧಿ, ಸಕಲ ಮೂಲಸೌಲಭ್ಯ ಹೊಂದಿದ್ದರೂ ತಜ್ಞ ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆಯಿಂದ ಬಡ ರೋಗಿಗಳು ಚಿಕಿತ್ಸೆ ಪಡೆಯಲು ಪರದಾಡು ವಂತಾಗಿದೆ. ಪ್ರತಿನಿತ್ಯ 500 ರಿಂದ 600 ಹೊರರೋಗಿಗಳು ಇಲ್ಲಿ ಚಿಕಿತ್ಸೆಗೆ ಬರುತ್ತಾರೆ. ಆದರೆ, ಹಲವರಿಗೆ ಸರಿಯಾಗಿ ಚಿಕಿತ್ಸೆ ಸಿಗದೆ ಬೇರೆ ಆಸ್ಪತ್ರೆಗಳಿಗೆ ಹೋಗುವಂಥ ಅನಿವಾರ್ಯ ಸೃಷ್ಟಿಯಾಗಿದೆ.
ವೈದ್ಯರು ಮತ್ತು ಸಿಬ್ಬಂದಿ ಕೊರತೆ: ಮುಖ್ಯ ವೈದ್ಯರು ಸೇರಿದಂತೆ ವಿವಿಧ 11 ತಜ್ಞ ವೈದ್ಯರು ಕಾರ್ಯ ನಿರ್ವಹಿಸಬೇಕಿದ್ದು, ಜನರಲ್ ಸರ್ಜನ್, ಮಕ್ಕಳ ತಜ್ಞರು, ಜನರಲ್ ಮೆಡಿಷನ್, ದಂತ ಆರೋಗ್ಯಾಧಿಕಾರಿ ಸೇರಿದಂತೆ ನಾಲ್ಕು ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲುಬು ಮತ್ತು ಕೀಲು ತಜ್ಞರು, ಕಿವಿ ಮೂಗು ಗಂಟಲು ತಜ್ಞರು, ಸ್ತ್ರೀ ರೋಗ ತಜ್ಞರು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅರವಳಿಕೆ ತಜ್ಞರು ಹಾಗೂ ನೇತ್ರ ತಜ್ಞರು ಇಲ್ಲವೇ ಇಲ್ಲ. ನಾಲ್ವರು ತಜ್ಞ ವೈದ್ಯರಿದ್ದರೂ ಅರವಳಿಕೆ ತಜ್ಞರಿಲ್ಲದೆ ಶಸ್ತ್ರ ಚಿಕಿತ್ಸೆಗೆ ಪರದಾಡುವಂತಾಗಿದೆ. ತುರ್ತು ಶಸ್ತ್ರ ಚಿಕಿತ್ಸೆ ಆಗಬೇಕಿದ್ದರೆ ಬೇರೆ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಿಕೊಡಲಾಗುತ್ತಿದೆ.
ಮುಖ್ಯವಾಗಿ ಸ್ಕ್ಯಾನಿಂಗ್ ಮಶಿನ್ ಇದೆ. ಆದರೆ, ರೇಡಿಯಾಲಜಿಸ್ಟ್ ಹುದ್ದೆ ಇಲ್ಲ. ಇದರಿಂದ ಬಡ ಗರ್ಭಿಣಿಯರು ಈ ಸೇವೆಯಿಂದ ವಂಚಿತರಾಗಿ, ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಅಧಿಕ ಹಣ ತೆತ್ತು ಸೇವೆ ಪಡೆಯುವುದು ಅನಿವಾರ್ಯ. ಸಾಕಷ್ಟು ಔಷಧಗಳ ಸಂಗ್ರಹವಿದೆಯಾದರೂ ಹಿರಿಯ ಫಾರ್ಮಾಸಿಸ್ಟ್ ಇಲ್ಲ. ಲ್ಯಾಬ್ ಇದೆ ಆದರೆ, ಹಿರಿಯ ಹಾಗೂ ಕಿರಿಯ ಟೆಕ್ನಾಲಾಜಿಸ್ಟ್‌ಗಳು ಲಭ್ಯವಿಲ್ಲ. ಇನ್ನು ಇಬ್ಬರು ಪ್ರಥಮ ದರ್ಜೆ ಸಹಾಯಕರು, ಒಬ್ಬರು ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಖಾಲಿ ಇವೆ. ಇರುವ ಒಬ್ಬರೆ ದ್ವಿತೀಯ ದರ್ಜೆ ಸಹಾಯಕ ಮಾಹಿತಿ ಹಕ್ಕು, ಕೆ-2. ಸಿಬ್ಬಂದಿ ವೇತನ ಸೇರಿದಂತೆ ಎನ್‌ಎಚ್‌ಎಂನ ಹಲವಾರು ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದಾರೆ.
ಒಟ್ಟು 82 ಮಂಜೂರಾದ ಹುದ್ದೆಗಳಲ್ಲಿ 50 ಹುದ್ದೆಗಳು ಇಂದಿಗೂ ಭರ್ತಿಯಾಗಿಲ್ಲ. 27 ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಶವಾಗಾರವಿದೆ ಆದರೆ, ಕೋಲ್ಡ್ ಸ್ಟೊರೇಜ್ ವ್ಯವಸ್ಥೆ ಕಲ್ಪಿಸಿಲ್ಲ. ತಜ್ಞ ವೈದ್ಯರಿಲ್ಲದೆ ಕೆಲವೊಂದು ಬಾರಿ ಅಪಘಾತಕ್ಕೊಳಗಾದ ಶವಗಳಿಗೆ ಮರಣೋತ್ತರ ಪರೀಕ್ಷೆ ಮಾಡುವುದೂ ಅನಾನುಕೂಲವಾಗಿ ಇಡೀ ರಾತ್ರಿ ಶವಕ್ಕಾಗಿ ಕಾಯುವ ಸ್ಥಿತಿ ಇಲ್ಲಿದೆ.
ಹಾನಗಲ್ಲ ಹೆದ್ದಾರಿಗೆ ಹೊಂದಿಕೊಂಡಿಲ್ಲವಾಗಿದ್ದರಿಂದ ಹಾನಗಲ್ಲ ಎಂದಾಕ್ಷಣ ತಜ್ಞ ವೈದ್ಯರು ಇಲ್ಲಿಗೆ ಬರಬೇಕೆಂದರೆ ಮೂಗು ಮುರಿಯುತ್ತಾರೆ. ಮಾಜಿ ಸಚಿವ, ಶಾಸಕ ಸಿ.ಎಂ.ಉದಾಸಿ ಮುತುವರ್ಜಿ ವಹಿಸಿ ಅತ್ಯತ್ತಮ ಸುಸಜ್ಜಿತ ಕಟ್ಟಡ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸಿದ್ದರೂ ತಜ್ಞ ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆ ನೀಗಿಸಲು ಇತ್ತ ಗಮನಹರಿಸಬೇಕಿದೆ.
ಹಾನಗಲ್ಲ ತಾಲೂಕು ಆಸ್ಪತ್ರೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲವೂ ಸರಿಯಾಗಿದೆ. ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಿಸಿಕೊಳ್ಳಲಾಗಿದೆ. ಆದರೆ, ಅರವಳಿಕೆ ತಜ್ಞರ ಹಾಗೂ ರೇಡಿಯಾಲಾಜಿಸ್ಟ್ ಅವಶ್ಯಕತೆ ಇದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.
-ರವೀಂದ್ರಗೌಡ ಪಾಟೀಲ, ತಾಲೂಕು ವೈದ್ಯಾಧಿಕಾರಿ ಹಾನಗಲ್ಲ
ರಾಜ್ಯ ಸರಕಾರ ವೈದ್ಯರ ಹಾಗೂ ಆಸ್ಪತ್ರೆ ಸಿಬ್ಬಂದಿಗಳ ನೇರ ನೇಮಕಾತಿಗೆ ಯೋಜನೆ ಸಿದ್ದಪಡಿಸಿದ್ದು, ಕೂಡಲೇ ಎಲ್ಲ ಸಿಬ್ಬಂದಿಗಳ ನೇಮಕಾತಿ ಮಾಡಲಾಗುವುದು. ಈ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸರಕಾರ ಮುಂದಾಗಲಿದೆ.
-ಸಿ.ಎಂ.ಉದಾಸಿ ಶಾಸಕರು, ಹಾನಗಲ್ಲ
-ರವಿ ಲಕ್ಷ್ಮೇಶ್ವರ