Advertisement

Dialysis machine: 8 ಡಯಾಲಿಸಿಸ್‌ ಯಂತ್ರಗಳ ಪೈಕಿ 5 ಸುಸ್ಥಿತಿ.!

02:38 PM Dec 02, 2023 | Team Udayavani |

ಕೋಲಾರ: ಜಿಲ್ಲಾ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಅಗತ್ಯ ರೋಗಿಗಳಿಗೆ ಡಯಾಲಿಸಿಸ್‌ ಚಿಕಿತ್ಸೆ ಒದಗಿಸಲು 8 ಯಂತ್ರಗಳಿವೆಯಾದರೂ, ಇವುಗಳ ಪೈಕಿ 5 ಮಾತ್ರವೇ ಕಾರ್ಯನಿರ್ವಹಿಸುತ್ತಿವೆ.

Advertisement

ಕಿಡ್ನಿ ವೈಫಲ್ಯವಾಗಿ ರಕ್ತ ಶುದ್ಧೀಕರಣದ ಸಮಸ್ಯೆ ಎದುರಿಸುತ್ತಿರುವ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ಸಿಗಲಿ ಎಂಬ ಕಾರಣಕ್ಕಾಗಿ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಯಲ್ಲಿಯೇ ಡ ಯಾಲಿಸಿಸ್‌ ಕೇಂದ್ರವನ್ನು ಆರಂಭಿಸಲಾಗಿತ್ತು. ಆರಂಭ ದಲ್ಲಿ ಮುಂಬೈ ಮೂಲದ ಸಂಸ್ಥೆಯು ಯಂತ್ರಗಳನ್ನು ಅಳವಡಿಸಿ ದುರಸ್ತಿ ಮತ್ತು ನಿರ್ಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು. ಆದರೆ, ಈಗ ಆ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಅವಧಿ ಮುಕ್ತಾಯ ಆಗಿರುವುದರಿಂದ ಕೆಟ್ಟು ಹೋಗಿರುವ ಯಂತ್ರಗಳ ದುರಸ್ತಿ ಯನ್ನು ಆಸ್ಪತ್ರೆಯೇ ಮಾಡಿಸಿಕೊಳ್ಳಬೇಕಾಗಿದೆ.

5 ಯಂತ್ರಗಳು ಸುಸ್ಥಿತಿ: ಕೋಲಾರ ಜಿಲ್ಲಾ ಎಸ್‌ಎನ್‌ ಆರ್‌ ಆಸ್ಪತ್ರೆಯಲ್ಲಿ 8 ಡಯಾಲಿಸಿಸ್‌ ಯಂತ್ರಗಳನ್ನು ಅಳವಡಿಸಲಾಗಿದೆ. ಈ ಪೈಕಿ 5 ಯಂತ್ರಗಳಲ್ಲಿ ನಿಗದಿತ ಅಗತ್ಯವಿರುವವರಿಗೆ ಡಯಾಲಿಸಿಸ್‌ ಮಾಡಲಾಗುತ್ತಿದೆ. ಆದರೆ, ಉಳಿದ ಮೂರು ಯಂತ್ರಗಳು ಸಂಪೂರ್ಣ ಕೆಟ್ಟು ಹೋಗಿರುವುದರಿಂದ ಅವುಗಳ ಸೇವೆಯನ್ನು ಆಸ್ಪತ್ರೆ ಮತ್ತು ರೋಗಿಗಳು ಪಡೆದುಕೊಳ್ಳಲು ಸಾ ಧ್ಯವಾಗುತ್ತಿಲ್ಲ. ಈಗಾಗಲೇ ಕೆಟ್ಟು ಹೋಗಿರುವ ಮೂರು ಯಂತ್ರಗಳು ಹಳೆಯ ಮಾಡೆಲ್‌ ಆಗಿರುವುದರಿಂದ ದುರಸ್ತಿ ಮಾಡಿಸಿದರೂ, ಪ್ರಯೋಜನವಾಗದು ಎಂಬ ಕಾರಣಕ್ಕೆ ಆಸ್ಪತ್ರೆ ಆಡಳಿತ ಮಂಡಳಿ ಅವುಗಳ ದುರಸ್ತಿ ಕಾರ್ಯಕ್ಕೆ ವ್ಯರ್ಥವಾಗಿ ಹಣ ವೆಚ್ಚ ಮಾಡಲು ಮುಂದಾಗಿಲ್ಲ.

ನಿರ್ವಹಣೆ: ಎಸ್‌ಎನ್‌ಆರ್‌ ಆಸ್ಪ ತ್ರೆಯ ಡಯಾಲಿಸಿಸ್‌ ವಿಭಾಗದಲ್ಲಿನ ಯಂತ್ರಗಳು ಹಾಗೂ ಸೌಕರ್ಯಗಳ ಬಗ್ಗೆ ಜಿಲ್ಲಾಮಟ್ಟದ ಡಯಾಲಿಸಿಸ್‌ ನೋಡಲ್‌ ಅಧಿಕಾರಿಯಾಗಿರುವ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಣಿ ಅಧ್ಯಕ್ಷತೆ ಯಲ್ಲಿ ಕಳೆದ ತಿಂಗಳು ಕುಂದುಕೊರತೆ ಸಭೆಯನ್ನು ನಡೆಸಲಾಗಿದೆ.

ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್‌ ಯಂತ್ರಗಳ ದುರಸ್ತಿ, ಔಷಧಿ, ರಸಾಯನ, ಕನ್ಸೂಮಬಲ್ಸ್‌ ಅನ್ನು ಎಬಿಆರ್‌ಕೆ ಅಥವಾ ಎಆರ್‌ ಎಸ್‌ ಅಥವಾ ಲಭ್ಯವಿರುವ ಆಸ್ಪತ್ರೆಯ ಅನುದಾನ ದಲ್ಲಿ ಭರಿಸಿಕೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

Advertisement

ಗುಣಮಟ್ಟದ ಕೊರತೆ: ಸೇವೆಗೆ ಲಭ್ಯವಿರುವ 5 ಡಯಾಲಿಸಿಸ್‌ ಯಂತ್ರಗಳು ಹಳೆಯ ಮಾಡೆಲ್‌ ಆಗಿರುವುದರಿಂದ ಡಯಾಲಿಸಿಸ್‌ ಗುಣಮಟ್ಟದ ಕೊರತೆ ಇದೆ ಎಂಬ ಆರೋಪ ರೋಗಿಗಳಿಂದ ಕೇಳಿ ಬರುತ್ತಿದೆ. ತೀರಾ ಬಡವಾಗಿರುವ ಆರ್ಥಿಕವಾಗಿ ತೊಂದರೆಯಲ್ಲಿರುವ ರೋಗಿಗಳು ಆಸ್ಪತ್ರೆಯ ಯಂತ್ರಗಳ ಚಿಕಿತ್ಸೆಗೆ ಅನಿವಾರ್ಯವಾಗಿ ಬರುತ್ತಿದ್ದಾರೆ. ಉಳಿದಂತೆ ಇಲ್ಲಿ ಒಂದೆರೆಡು ಬಾರಿ ಡಯಾಲಿಸಿಸ್‌ ಮಾಡಿಸಿಕೊಂಡು ತೃಪ್ತರಾಗದವರು ಇತರೇ ಖಾಸಗಿ ಆಸ್ಪತ್ರೆಗಳನ್ನು ಡಯಾಲಿಸಿಸ್‌ಗಾಗಿ ಅವಲಂಬಿಸುತ್ತಿದ್ದಾರೆ.

163 ಸೈಕಲ್ಸ್‌ ಡಯಾಲಿಸಿಸ್‌: ಕೋಲಾರ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್‌ ಕೇಂದ್ರದಲ್ಲಿ ಆರ್‌ಒ ಪ್ಲಾಂಟ್‌ ಸಂಪೂರ್ಣ ದುರಸ್ತಿಯಾಗಿದೆ. ಹಾಲಿ ಸುಸ್ಥಿತಿಯಲ್ಲಿರುವ 5 ಯಂತ್ರಗಳ ಪೈಕಿ 4 ನೆಗೆಟಿವ್‌ ಯಂತ್ರ ಹಾಗೂ 1 ಪಾಸಿಟಿವ್‌ ಯಂತ್ರವಾಗಿದೆ. ಈ ಯಂತ್ರಗಳನ್ನು ಬಳಸಿಕೊಂಡು 22 ನೆಗೆಟಿವ್‌ ಮತ್ತು 9 ಪಾಸಿಟಿವ್‌ ಸೇರಿದಂತೆ ಒಟ್ಟು 31 ಡಯಾಲಿಸಿಸ್‌ ರೋಗಿಗಳಿಗೆ ದಿನ 24 ಗಂಟೆಯೂ ನಿರಂತರವಾಗಿ 163 ಸೈಕಲ್ಸ್‌ ಡಯಾಲಿಸಿಸ್‌ ಮಾಡಲಾಗುತ್ತಿದೆ. ಹೊಸ ಡಯಾಲಿಸಿಸ್‌ ಯಂತ್ರಗಳಿಗೆ ಬೇಡಿಕೆ : ಕೋಲಾರ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿರುವ 8 ಯಂತ್ರಗಳ ಪೈಕಿ ಕೇವಲ 5 ಯಂತ್ರ ಮಾತ್ರವೇ ಸುಸ್ಥಿತಿಯಲ್ಲಿದ್ದು, ಸೇವೆ ಲಭ್ಯವಾಗುತ್ತಿರುವುದರಿಂದ ಮತ್ತಷ್ಟು ಯಂತ್ರಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಳೇ ಮಾಡೆಲ್‌ ಯಂತ್ರಗಳು ಕೆಟ್ಟು ನಿಂತರೆ ಅವುಗಳನ್ನು ದುರಸ್ತಿ ಮಾಡಿಸಲು ಹಣ ವೆಚ್ಚ ಮಾಡುವುದಕ್ಕಿಂತಲೂ ಉತ್ತಮ ಗುಣಮಟ್ಟದ ಆಧುನಿಕ ತಂತ್ರಜ್ಞಾನದ ಯಂತ್ರಗಳ ಅಗತ್ಯತೆ ಇದೆಯೆಂದು ಆಸ್ಪತ್ರೆಯ ಡಯಾಲಿಸಿಸ್‌ ಕೇಂದ್ರದ ಸಿಬ್ಬಂದಿ ವಿವರಿಸಿದ್ದಾರೆ.

ಸದ್ಯಕ್ಕೆ ಕೋಲಾರ ಆಸ್ಪತ್ರೆಯ ಬೇಡಿಕೆಗೆ ತಕ್ಕಷ್ಟು ಸೇವೆ ಸಲ್ಲಿಸಲು 25 ಡಯಾಲಿಸಿಸ್‌ ಯಂತ್ರಗಳ ಅಗತ್ಯವಿದೆ. ಆದರೆ, ಒಂದು ಬಾರಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಯಂತ್ರಗಳನ್ನು ಅಳವಡಿಸಲಾಗದಿದ್ದರೂ, ತುರ್ತಾಗಿ ಕನಿಷ್ಠ 15 ಹೊಸ ಯಂತ್ರಗಳನ್ನಾದರೂ ಅಳವಡಿಸಿದರೆ ಡಯಾಲಿಸಿಸ್‌ ಆಗತ್ಯವಿರುವ ಕಿಡ್ನಿ ವೈಫಲ್ಯ ರೋಗಿಗಳಿಗೆ ಹೆಚ್ಚಿನ ಚಿಕಿತ್ಸಾ ಸೇವೆ ನೀಡಲು ಸಾಧ್ಯವಾಗುತ್ತದೆಯೆಂದು ಆಸ್ಪತ್ರೆ ಮೂಲಗಳು ತಿಳಿಸುತ್ತವೆ. ಈ ಕುರಿತು ಸರ್ಕಾರಕ್ಕೂ ಬೇಡಿಕೆಯನ್ನು ಸಲ್ಲಿಸಲಾಗಿದೆ.

ಕೋಲಾರ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಸುಸ್ಥಿತಿಯಲ್ಲಿರುವ 5 ಯಂತ್ರಗಳನ್ನೇ ಬಳಸಿಕೊಂಡು ರೋಗಿಗಳಿಗೆ ವಿವಿಧ ಸ್ಲಾಟ್‌ಗಳನ್ನು ಹಂಚಿಕೆ ಮಾಡಿ 31 ಡಯಾಲಿಸಿಸ್‌ ರೋಗಿಗೆ ನಿರಂತರವಾಗಿ 163 ಸೈಕಲ್ಸ್‌ ಡಯಾಲಿಸಿಸ್‌ ಮಾಡಲಾಗುತ್ತಿದೆ. ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಎಚ್ಚರವಹಿಸಲಾಗಿದೆ. ರೋಗಿಗಳ ತಪಾಸಣಾ ಚಿಕಿತ್ಸಾ ಕ್ರಮಗಳನ್ನು ಕಾಲಕಾಲಕ್ಕೆ ಅನುಸರಿಸಲಾಗುತ್ತಿದೆ. ●ಡಾ.ಎಸ್‌.ಎನ್‌. ವಿಜಯಕುಮಾರ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ, ಎಸ್‌ಎನ್‌ಆರ್‌ ಆಸ್ಪತ್ರೆ

ಕೋಲಾರ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್‌ ಎಂಬ ಕಾರಣಕ್ಕೆ ಒಂದೆರೆಡು ಬಾರಿ ಡಯಾಲಿಸಿಸ್‌ ಮಾಡಿಸಿಕೊಂಡಿದ್ದೆ. ಆದರೆ, ಸೂಕ್ತ ಹಾಗೂ ಗುಣಮಟ್ಟದ ಚಿಕಿತ್ಸೆ ಸಿಗದ ಕಾರಣದಿಂದ ಈಗ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿರುವೆ. ● ನಯಾಜ್‌, ಬಂಗಾರಪೇಟೆ ನಾಗರಿಕ

 -ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next