ಕಾರಟಗಿ: ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಶತಮಾನದ ಹೊಸ್ತಿಲಲ್ಲಿರುವ ಸಮೀಪದ ಬೂದಗುಂಪ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೂಲ ಸೌಕರ್ಯವಿಲ್ಲದೇ ವಂಚಿತಗೊಂಡಿದೆ.
ಶಾಲಾ ಕಟ್ಟಡ ಮಾತ್ರ ಶಿಥಿಲಾವಸ್ಥೆ ತಲುಪಿದ್ದು, ವಿದ್ಯಾರ್ಥಿಗಳು ಜೀವಭಯದಲ್ಲೇ ಪಾಠ ಕೇಳಬೇಕಾದ ಪರಿಸ್ಥಿತಿ ಉದ್ಬವಿಸಿದೆ. ಗ್ರಾಮದ ಮಧ್ಯಭಾಗದಲ್ಲಿರುವ ಶಾಲೆ ಸೌಕರ್ಯವಿಲ್ಲದೇ ಕುಂಟುತ್ತ ತನ್ನ ಮುಪ್ಪಿನ ಜೀವನ ಕಳೆಯುತ್ತಿದೆ. ಶಾಲೆಯ ಗೋಡೆಯಿಂದ ಸಿಮೆಂಟ್ ಕಲ್ಲುಗಳು ದಿನನಿತ್ಯ ಉದರಿ ಬೀಳುತ್ತಿದ್ದರೂ ಸಂಬಂಧಿಸಿದವರು ಶಾಲೆಯತ್ತ ಕ್ಯಾರೆ ಅನ್ನುತ್ತಿಲ್ಲ. ಗೋಡೆಗಳು ಬಿರುಕು ಬಿಟ್ಟು ಹಲ್ಲಿ ಸೇರಿದಂತೆ ವಿಷ ಜಂತುಗಳು ತಾಣವಾಗಿ ಶಾಲೆ ಮಾರ್ಪಡುತ್ತಿದೆ. ಮಕ್ಕಳು ಬಿಸಿಯೂಟ ಮಾಡಲು ಕುಳಿತುಕೊಳ್ಳಲು ಕೂಡ ಭಯಪಟ್ಟು ಆವರಣದಲ್ಲಿ ಊಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಶಾಲೆಯ ದುಸ್ಥಿತಿ ಬಗ್ಗೆ ಶಿಕ್ಷಕ ವೃಂದ ಹಾಗೂ ಎಸ್‌ಡಿಎಂಸಿ ಅವರು ಹಲವು ಬಾರಿ ಸಂಬಂಧಿಸಿದ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಶಾಲಾ ಅಭಿವೃದ್ಧಿ ಸಮಿತಿ ಆರೋಪಿಸಿದೆ.
ಶಾಲೆ 5-6 ಕೊಠಡಿಗಳನ್ನು ಹೊಂದಿದ್ದು, ಮೇಲ್ಛಾವಣಿಯಿಂದ ಸಿಮೆಂಟ್ ಪದರು ಉದುರಿ ಬಿಳುತ್ತಿದೆ. ಕಿಡಕಿ, ಬಾಗಿಲುಗಳ ಕದ ಶಿಥಿಲಾವ್ಯಸ್ಥೆಗೆ ತಲುಪಿವೆ. ಬಿಸಿಯೂಟದ ವ್ಯವಸ್ಥೆ ಇದ್ದರೂ ಪ್ರತ್ಯೇಕ ಅಡುಗೆ ಕೋಣೆಯಿಲ್ಲ. ಬಿಸಿಯೂಟ ಮಾಡಿದ ನಂತರ ಮಕ್ಕಳಿಗೆ ಶುದ್ಧ ಕುಡಿವ ನೀರು ಪೂರೈಕೆಯಿಲ್ಲದೆ ಗ್ರಾಪಂ ಪೂರೈಸುವ ನಲ್ಲಿ ನೀರನ್ನೆ ಸೇವಿಸಬೇಕು. ಪಾಲಕರು ಭಯಭೀತರಾಗಿ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂಜರಿಯುತ್ತಿದ್ದಾರೆ.
ಹೀಗಾಗಿ ಶಾಲೆಯ ಹಾಜರಾತಿ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತದೆ. ಶತಮಾನಕಂಡ ಶಾಲೆಯ ಅಭಿವೃದ್ಧಿಗೆ ಯಾರೂ ಚಿಂತಸದಿರುವುದು ದುರಂತ ಸಂಗತಿ. ನಿತ್ಯ ಮಕ್ಕಳು ಕೈಯಲ್ಲಿ ಜೀವ ಹಿಡಿದುಕೊಂಡು ಪಾಠ ಕೇಳುವಂತ ಸ್ಥಿತಿ ನಿರ್ಮಾಣವಾಗಿದೆ. ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಶಿಕ್ಷಕ ವೃಂದ ಶಾಲೆಯ ದುರಸ್ತಿಗೆ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. 91 ವರ್ಷ ಪೂರೈಸಿದ ಶಾಲೆಯತ್ತ ಜಿಲ್ಲಾಡಳಿತ ಗಮನಹರಿಸಿ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಶತಮಾನದ ಹೊಸ್ತಿಲಲ್ಲಿರುವ ಶಾಲೆ ಸಂಪೂರ್ಣ ಶಿಥಿಲಗೊಂಡಿದೆ. ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಮೇಲ್ಚಾವಣಿ ಮತ್ತು ಗೋಡೆಗಳಿಂದ ಮಣ್ಣಿನ ಪದರು ನಿತ್ಯ ಬೀಳುತ್ತಿದೆ. ಶಿಕ್ಷಣ ಇಲಾಖೆ ಶಾಲೆಯ ಕಟ್ಟಡವನ್ನು ಸಂಪೂರ್ಣ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಿದಲ್ಲಿ ಮಕ್ಕಳಿಗೆ ಅನುಕೂಲವಾಗಲಿದೆ. –
ಮುಖ್ಯ ಶಿಕ್ಷಕಿ, ಬೂದಗುಂಪ ಶಾಮಲಾ
1928ರಲ್ಲಿ ಸ್ಥಾಪನೆಯಾದ ಶಾಲಾ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಶಾಲೆಯ ಅಭಿವೃದ್ಧಿಗೆ ದುರಸ್ಥಿಗೆ ಸಂಬಂಧಿಸಿದ ಇಲಾಖೆಗೆ ಜನಪ್ರತಿನಿಧಿಗಳಿಗೆ ಮೌಖೀಕ, ಲಿಖೀತ ಮನವಿ ಮಾಡಿದರೂ ಯಾವುದೆ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಎಸ್ ಡಿಎಂಸಿ ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲು ನಿರ್ಧರಿಸುತ್ತೇವೆ.
-ಪಂಪಾಪತಿ ಕನಕಗಿರಿ, ಎಸ್‌ಡಿಎಂಸಿ ಅಧ್ಯಕ್ಷ
-ದಿಗಂಬರ ಎನ್. ಕುರ್ಡೆಕರ