ಹಾವೇರಿ: ರಾಜ್ಯದ ರಾಜಕಾರಣಿಗಳು ಇಂದು ತಮ್ಮ ವೈಯಕ್ತಿಕ ಗೌರವದ ಜತೆಗೆ ರಾಜ್ಯದ ಗೌರವವನ್ನೂ ಕಳೆಯುತ್ತಿದ್ದಾರೆ. ಸ್ವಹಿತಾಸಕ್ತಿಗಾಗಿ ರಾಜ್ಯದ ಅಭಿವೃದ್ಧಿ ಬಲಿ ಕೊಡುತ್ತಿರುವುದನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ರೈತರು ಎಚ್ಚೆತ್ತುಕೊಂಡು ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಗೌಡ ಹೇಳಿದರು.
ಇಲ್ಲಿಯ ಹುಕ್ಕೇರಿಮಠದಲ್ಲಿ ರೈತ ಹುತಾತ್ಮ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ರಾಜ್ಯಮಟ್ಟದ ರೈತ ಸಮಾವೇಶದಲ್ಲಿ ಅವರು ಮಾತನಾಡಿದರು.
ರಾಜ್ಯದ ಅಭಿವೃದ್ಧಿ, ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ರಾಜಕಾರಣಿಗಳು ಇಂದು ಸ್ವಹಿತಕ್ಕಾಗಿ ರೆಸಾರ್ಟ್ ರಾಜಕಾರಣ ಮಾಡುತ್ತಿರುವುದು ರಾಜ್ಯ ಜನತೆ ತಲೆ ತಗ್ಗಿಸುವಂತಾಗಿರುವುದು ವಿಷಾದನೀಯ ಎಂದರು.
ನ್ಯಾಯ ಸಮ್ಮತ ರೈತರ ಹೋರಾಟದ ಸಂದರ್ಭದಲ್ಲಿ ಹಲವಾರು ರೈತರು ಹುತಾತ್ಮರಾಗಿದ್ದಾರೆ. ಅವರ ಬಲಿದಾನಕ್ಕೆ ನ್ಯಾಯ ದೊರಕಿಸಬೇಕು ಅಂದಾಗ ಮಾತ್ರ ಅವರ ಆತ್ಮಕ್ಕೆ ಶಾಂತಿ ದೊರಕುತ್ತದೆ. ಈ ನಿಟ್ಟಿನಲ್ಲಿ ರೈತರು ಸಂಘಟನೆಗೊಂಡು ಹೋರಾಟಕ್ಕೆ ಮುಂದಾಗಬೇಕು. 1985ರಿಂದ ಆರಂಭಗೊಂಡ ರೈತ ಸಂಘ ಸುಮಾರು 39 ವರ್ಷಗಳಿಂದ ಹೋರಾಟ ಮಾಡುತ್ತಿದೆ. ಸರ್ಕಾರ ಮಾತ್ರ ರೈತರ ಬೇಡಿಕೆಗಳಿಗೆ ಸ್ಪಂದಿಸದೇ ರೈತರನ್ನು ಕಡೆಗಣಿಸುತ್ತಿರುವುದು ಖೇದಕರ ಸಂಗತಿ ಎಂದರು.
ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಹಿರೇಮಠ ಮಾತನಾಡಿ, ಇಂದಿನ ದಿನಗಳಲ್ಲಿ ಮಹಿಳೆಯರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ರಾಜಕಾರಣಿಗಳು ರೈತರನ್ನು ಹಾಗೂ ರೈತ ಮಹಿಳೆಯರನ್ನು ಕೇವಲ ಮತ ಬ್ಯಾಂಕ್ ಮಾಡಿಕೊಂಡಿದ್ದಾರೆ. ಅವರಿಗೆ ನಿಜವಾಗಿಯೂ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಕಷ್ಟಗಳನ್ನು ಬಗೆಹರಿಸುವ ಉದ್ದೇಶವಿಲ್ಲ. ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು. ಹೋರಾಟ ಮಾಡುವ ಮೂಲಕ ನಮ್ಮ ಹಕ್ಕುಗಳನ್ನು ಪಡೆಯೋಣ ಎಂದರು.
ರೈತ ಮುಖಂಡರಾದ ಅಣ್ಣಪ್ಪ ದೇಸಾಯಿ, ಈರಣ್ಣ ಹಲಗೇರಿ, ಹನುಮಂತಪ್ಪ ಕಬ್ಟಾರ, ಎಫ್.ವೈ. ಕುರಿ, ಉಮಾದೇವಿ, ಪುಟ್ಟಣ್ಣಯ ಟಿ., ಮಹೇಶ್ವರ ಸ್ವಾಮಿ, ಶಂಶಾದ್‌ಬೇಗಂ, ಲೋಕನಾಥ ಹೆಬಸೂರ, ಮಂಜುನಾಥ ಗೌಡಶಿವಣ್ಣವರ, ಕಲ್ಲಪ್ಪ ಕಾಮಣ್ಣನವರ, ವಿರುಪಾಕ್ಷಪ್ಪ ಕಳ್ಳಿಮನಿ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಹುಕ್ಕೇರಿಮಠದಿಂದ ಹೊಸಮನಿ ಸಿದ್ದಪ್ಪ ವೃತ್ತದ ವರೆಗೆ ಪಾದಯಾತ್ರೆ ನಡೆಸಿ, ಹುತಾತ್ಮ ರೈತರ ವೀರಗಲ್ಲಿಗೆ ಮಾಲಾರ್ಪಣೆ ಮಾಡಲಾಯಿತು.