Advertisement

ಮೋಡ ಲಭ್ಯತೆ ಕೊರತೆ; ಮೊದಲ ದಿನ ನಡೆಯದ ವರ್ಷಧಾರೆ ಬಿತ್ತನೆ

01:13 PM Aug 02, 2019 | Suhan S |

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯಾಗಿರುವ ಭಾಗದಲ್ಲಿ ಮೋಡ ಬಿತ್ತನೆ ಮಾಡಿ ಮಳೆ ಸುರಿಸುವ ರಾಜ್ಯ ಸರ್ಕಾರದ ವರ್ಷಧಾರೆ ಯೋಜನೆಗೆ ಗುರುವಾರ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ಮೋಡಗಳ ಲಭ್ಯತೆ ಕೊರತೆ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಮಾಡಲಿಲ್ಲ.

Advertisement

ಬೆಳಗಾವಿ ವಿಭಾಗದ ಪ್ರಭಾರ ಪ್ರಾದೇಶಿಕ ಆಯುಕ್ತರಾದ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್‌ ಮೋಡ ಬಿತ್ತನೆಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿದರು. ಕಾರ್ಯಾಚರಣೆಗೆ ಸಂಬಂಧಿಸಿದ ತಾಂತ್ರಿಕ ಮಾಹಿತಿಯನ್ನು ಸಿಬ್ಬಂದಿಯಿಂದ ಪಡೆದರು.

ಸುದ್ದಿಗಾರರೊಂದಿಗೆ ಮಾತನಾಡಿದ ದೀಪಾ ಚೋಳನ್‌, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಯೋಜನೆ ಕೈಗೊಳ್ಳಲಾಗಿದ್ದು, ಬೆಂಗಳೂರಿನ ಜಿಕೆವಿಕೆ ಹಾಗೂ ಗದಗದಲ್ಲಿರುವ ರಡಾರ್‌ ಕೇಂದ್ರದ ಮಾಹಿತಿ ಆಧರಿಸಿ ಮೋಡ ಬಿತ್ತನೆ ಕಾರ್ಯ ಮಾಡಲಾಗುತ್ತದೆ. ಗದಗಿನಲ್ಲಿರುವ ರಡಾರ್‌ ಉತ್ತರ ಕರ್ನಾಟಕದ ಕೆಲ ಭಾಗವನ್ನು ಕೇಂದ್ರೀಕರಿಸಿಕೊಂಡು ಕಾರ್ಯ ನಿರ್ವಹಿಸುತ್ತದೆ. ಈ ಭಾಗದ ಯಾವ ಪ್ರದೇಶದಲ್ಲಿ ಮೋಡಗಳ ಲಭ್ಯತೆ ಇದೆ ಎಂಬುದನ್ನು ಗುರುತಿಸಿ ಮೋಡ ಬಿತ್ತನೆಗೆ ಸೂಚನೆ ನೀಡುತ್ತದೆ. ಇದರ ಆಧಾರದ ಮೇಲೆ ವಿಮಾನ ಮೋಡ ಬಿತ್ತನೆ ಕಾರ್ಯ ಮಾಡುತ್ತದೆ ಎಂದರು.

ಒಂದು ತಿಂಗಳು ತಡವಾಗಿ ಮಳೆ ಬಂದಿದೆ. ಧಾರವಾಡ ಜಿಲ್ಲೆಯಲ್ಲಿ ಮಾತ್ರ ಹೆಚ್ಚು ಮಳೆಯಾಗಿದೆ. ಅಕ್ಕಪಕ್ಕದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಜಿಲ್ಲೆಯ ಕುಂದಗೋಳ ಹಾಗೂ ನವಲಗುಂದದಲ್ಲಿ ನಿರೀಕ್ಷೆಗಿಂತ ಕಡಿಮೆ ಮಳೆಯಾಗಿದೆ. ವಾರ್ಷಿಕ ಸರಾಸರಿ ನೋಡಿದಾಗ ಶೇ.20 ಮಳೆ ಕಡಿಮೆಯಾಗಿದೆ. ಇದೀಗ ಆಗಿರುವ ಮಳೆ ಕೃಷಿಗೆ ಪೂರಕವಾಗಿದೆ. ಆದರೆ ಕುಡಿಯುವ ನೀರು ಹಾಗೂ ಬೇಸಿಗೆಯಲ್ಲಿನ ಸಮಸ್ಯೆ ನೀಗಿಸುವಷ್ಟು ಮಳೆಯಾಗಿಲ್ಲ. ಬಹುತೇಕ ಕೆರೆ ಇನ್ನೂ ತುಂಬಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆಗೆ ಮುಂದಾಗಿದ್ದು, ಎಷ್ಟು ದಿನಗಳ ಕಾಲ ಮೋಡ ಬಿತ್ತನೆ ನಡೆಯುತ್ತಿದೆ ಎನ್ನುವುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಗದುಗಿನಲ್ಲಿರುವ ರಡಾರ್‌ ಹಾಗೂ ಬಿತ್ತನೆಗೆ ಪೂರಕವಾದ ಮೋಡಗಳ ಲಭ್ಯತೆ ಮೇಲೆ ಕಾರ್ಯ ನಡೆಯಲಿದೆ ಎಂದರು.

ವಿಮಾನದ ಪೈಲಟ್ ಜೇಜ್‌ ಬೇನ್‌ ಮಾತನಾಡಿ, ಮೋಡ ಬಿತ್ತನೆ ವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಮೋಡಕಟ್ಟದ ವಾತಾವರಣ ನೋಡಿಕೊಂಡು ಮಳೆ ಸುರಿಸಬಲ್ಲ ಮೋಡಗಳನ್ನು ಗುರುತಿಸಿ ಸಿಲ್ವರ್‌ ಐಯೋಡೇಡ್‌ ಭರಿತ ಫ್ಲೈರ್ಯಸ್‌ಗಳನ್ನು ಉರಿಸಲಾಗುತ್ತದೆ. ಇದರಿಂದ ಮುಂದೆ ಹೋಗುವ ಮೋಡಗಳನ್ನು ತಡೆದು ನಮ್ಮ ನಿರೀಕ್ಷಿತ ನಿರ್ದಿಷ್ಟ ಪ್ರದೇಶದ ಆಸುಪಾಸಿನಲ್ಲಿ ಮಳೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಬಿತ್ತನೆ ಮಾಡಿದ ಇಷ್ಟೇ ಸಮಯಕ್ಕೆ ಮಳೆಯಾಗುತ್ತದೆ ಎಂಬುವುದನ್ನು ಯಾವುದೇ ಕಾರಣಕ್ಕೂ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದರು.

Advertisement

ಪ್ರೊಬೆಷನರಿ ಐಎಎಸ್‌ ಅಧಿಕಾರಿ ಆಕೃತಿ ಬನ್ಸಾಲ್, ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಅನುಜ್‌ ಠಾಕ್ರೆ, ಹುಬ್ಬಳ್ಳಿ ಗ್ರಾಮೀಣ ಅಪರ ತಹಶೀಲ್ದಾರ್‌ ಪ್ರಕಾಶ ನಾಸಿ, ಕ್ಯಾತಿ ಕ್ಲೈಮೇಟ್ ಮಾಡಿಫಿಕೇಷನ್‌ ಸಂಸ್ಥೆಯ ಅತೀಶ್‌ ಓದುಗೌಡರ ಇದ್ದರು.

ಹಾರಲಿಲ್ಲ ವಿಮಾನ: ಜು.30ರಂದು ಮೋಡ ಬಿತ್ತನೆ ವಿಮಾನ ಇಲ್ಲಿನ ಏರ್‌ಪೋರ್ಟ್‌ ಗೆ ಆಗಮಿಸಿದೆ. ಜು.31ರಂದು ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ಮೋಡ ಬಿತ್ತನೆ ಮಾಡಿದ್ದು, ಕೆಲವೆಡೆ ಮಳೆಯಾಗಿದೆ ಎಂದು ಹೇಳಲಾಗಿದೆ. ಆದರೆ ಸಂಕೇತಿಕವಾಗಿ ಚಾಲನೆ ನೀಡಿದ ಗುರುವಾರದಂದು ಮೋಡ ಬಿತ್ತನೆಗೆ ಪೂರಕವಾದ ಮೋಡಗಳ ಲಭ್ಯತೆಯಿರದ ಕಾರಣ ಗದಗ ರಡಾರ್‌ನಿಂದ ಯಾವುದೇ ಸೂಚನೆ ಬಾರದ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಮಾಡಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next