Advertisement

ಕೋಲಾರದಲ್ಲಿ ಸ್ವಚ್ಛತೆಯ ಕೊರತೆ-ಕಸದ ರಾಶಿಗಳು

02:57 PM Jun 08, 2019 | Team Udayavani |

ಕೋಲಾರ: ಜಿಲ್ಲಾ ಕೇಂದ್ರವಾದರೂ ಕೋಲಾರದಲ್ಲಿ ಸ್ವಚ್ಛತೆಯ ಕೊರತೆ ಕಾಡುತ್ತಿದೆ, ಕಸದ ರಾಶಿಗಳು ಎಲ್ಲೆಂದರಲ್ಲಿ ಕಂಡು ಬರುತ್ತಿದ್ದು, ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗ ಕಲ್ಪಿಸಲು ಜಿಲ್ಲಾಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಧಿಶರೂ ಹಾಗೂ ಕಾನೂನು ಸೇವಾ ಪ್ರಾಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್. ಗಂಗಾಧರ ಸೂಚಿಸಿದರು.

Advertisement

ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರ ಕೋಲಾರ, ಜಿಲ್ಲಾಡಳಿತ, ವಕೀಲರ ಸಂಘ, ಗೊಪ್ಲಾಗ್‌,ಜಾಗೃತಿ ಸೇವ ಸಂಸ್ಥೆಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಚಿನ್ಮಯ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪರಿಸರದ ಮಹತ್ವ ಸಾರುವ ಪರಿಸರ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ನಗರದಲ್ಲಿ ಸ್ವಚ್ಛ ವಾತಾವರಣ ಇಲ್ಲದೆ ಪರಿಸರವೂ ಮಾಲಿನ್ಯವಾಗಿದೆ, ಯಾವುದೇ ರಸ್ತೆ, ವೃತ್ತಗಳಲ್ಲಿ ನೋಡಿದರೂ ಹಲವು ವರ್ಷಗಳಿಂದ ಇದೇ ವಾತಾವರಣವಿರುವ ಹಾಗೂ ತ್ಯಾಜ್ಯ ವಿಲೇವಾರಿಗೆ ಜಾಗ ಇಲ್ಲ ಎಂದು ನಗರÓ‌ಭೆ ಹೇಳುತ್ತಿರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಆದಷ್ಟು ಬೇಗ ತ್ಯಾಜ್ಯ ವಿಲೇವಾರಿಗೆ ಜಾಗ ಒದಗಿಸಿ ನಗರದ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಈ ಕಾರ್ಯಕ್ರಮದ ಮೂಲಕ ಜಿಲ್ಲಾಕಾರಿಗಳ ಗಮನಕ್ಕೆ ತರುತ್ತಿರುವುದಾಗಿ ತಿಳಿಸಿದರು.

ದೇಶದಾದ್ಯಂತ ಸ್ವಚ್ಛ ಭಾರತ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಎಲ್ಲರೂ ಕೈಜೋಡಿಸಿದರೆ ಮಾತ್ರ ಸ್ವಚ್ಛ ವಾತಾವರಣ ಕಾಣಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದರು. ಅಪರ ಜಿಲ್ಲಾಕಾರಿ ಎಚ್.ಪುಷ್ಪಲತಾ, ಕಳೆದ ನ.4ರಿಂದ ಪ್ಲಾಸ್ಟಿಕ್‌ ಮುಕ್ತ ಕೋಲಾರ ನಗರ ಅಭಿಯಾನ ಆರಂಭಿಸಿ ಪ್ರತಿ ತಿಂಗಳು ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದೆ. ಮಕ್ಕಳಲ್ಲಿನ ಉತ್ಸಾಹ ದೊಡ್ಡವರಲ್ಲಿ ಇರುವುದಿಲ್ಲವಾದ್ದರಿಂದ ಮಕ್ಕಳೊಂದಿಗೆ ಸೇರಿ ನಡೆಯುವ ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ ಎಂಬ ಕಾರಣಕ್ಕೆ ಮಕ್ಕಳ ಮುಂದಾಳತ್ವದಲ್ಲಿ ಪರಿಸರ ಜಾಗೃತಿ ಜಾಥಾ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಈ ವರ್ಷದ ಪರಿಸರ ದಿನಾಚರಣೆಯ ಘೋಷವಾಖ್ಯವೇ ಬೀಟ್ ಏರ್‌ ಪೊಲ್ಯೂಷನ್‌ ಎಂಬುದಾಗಿದೆ. ನಾವು ಉಸಿರಾಡುವ ಗಾಳಿ ಸ್ವಚ್ಛವಾಗಿರಬೇಕು ಎಂದಾದರೆ ಗಾಳಿಯನ್ನು ಉತ್ತಮಗೊಳಿಸಬೇಕು. ಇದಕ್ಕೆ ಗಿಡಮರಗಳನ್ನು ಬೆಳೆಸುವ ಅಗತ್ಯವಿದೆ. ಹೀಗಾಗಿ ಮಕ್ಕಳಿಗೆ ಬೀಜದುಂಡೆಗಳನ್ನು ನೀಡುತ್ತೇವೆ, ಎಲ್ಲ ಮಕ್ಕಳು ಮನೆಯಲ್ಲಿ ಬೀಜದುಂಡೆ ಬಿತ್ತನೆ ಮಾಡಿ ಸಸಿಯನ್ನು ಬೆಳೆಸಿ ಎಂದು ಹೇಳಿದರು.

Advertisement

ಗೋಲ್ಡನ್‌ ಸಿಟಿ ಪಿಯು ಕಾಲೇಜಿನ ಪ್ರಾಂಶುಪಾಲ ಎಚ್.ಕೆ. ತಿಲಗಾರ್‌, ಜನ್ಮನೀಡಿದ ತಾಯಿ ಹಾಗೂ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾದುದು. ನಾವೆಲ್ಲರೂ ಸತ್ತ ಮೇಲೆ ಸ್ವರ್ಗಕ್ಕೆ ಹೋಗಬೇಕೆಂದು ಬಯಸುತ್ತೇವೆ. ಸ್ವರ್ಗ ಹೇಗಿದೆಯೋ ಗೊತ್ತಿಲ್ಲ. ಹೀಗಾಗಿ ನಾವು ಜೀವಿಸುವ ಈ ಭೂಮಿಯಲ್ಲೇ ಸ್ವರ್ಗದ ವಾತಾವರಣವನ್ನು ನಿರ್ಮಿಸಿಕೊಳ್ಳಬೇಕು ಎಂದರು.

ಇಂದು ವಾಯು, ಜಲ,ಶಬ್ದ ಮಾಲಿನ್ಯ ಹೆಚ್ಚಾಗಿದೆ. ಇದಕ್ಕಿಂತಲೂ ಮುಖ್ಯವಾಗಿ ಮನುಷ್ಯರ ಮನಸ್ಸುಗಳು ಮಲೀನವಾಗಿದೆ. ಪರಿಸರ ಸ್ವಚ್ಛ ಮಾಡುವ ಮೊದಲು ಮನಸ್ಸು ಸ್ವಚ್ಛ ಆಗಬೇಕು. ವಿದ್ಯಾರ್ಥಿಗಳೇ ಪರಿಸರದ ಸ್ವಚ್ಛತೆಯ ರಾಯಭಾರಿಗಳಾಗಬೇಕು, ಮನೆಯಲ್ಲಿ ಪ್ಲಾಸ್ಟಿಕ್‌ ಬಳಸುತ್ತಿದ್ದರೆ ಹಿರಿಯರಿಗೆ ತಿಳಿಹೇಳಿ. ಪ್ಲಾಸ್ಟಿಕ್‌ ಮುಕ್ತ ಕೋಲಾರಕ್ಕೆ ಮನಸ್ಸಿನಲ್ಲೇ ಪ್ರತಿಜ್ಞೆ ಸ್ವೀಕರಿಸಿ ಎಂದು ಮಕ್ಕಳಿಗೆ ನುಡಿದರು.

ಚಿನ್ಮಯ ವಿದ್ಯಾಲಯದ ಪ್ರಾಂಶುಪಾಲ ನರಸಿಂಹಪ್ರಸಾದ್‌, ಪ್ರತಿಯೊಬ್ಬ ಮನುಷ್ಯನಿಗೆ ಉಸಿರಾಡಲು 7 ಗಿಡ ಬೇಕು. ಪ್ರತಿಯೊಬ್ಬ ವಿದ್ಯಾರ್ಥಿ 10 ಗಿಡ ನೆಟ್ಟು ಬೆಳೆಸಿದರೆ ಮಾತ್ರ ಎಸ್ಸೆಸ್ಸೆಲ್ಸಿ ಅಂಕ ಪಟ್ಟಿ ನೀಡುವ ಪದ್ಧತಿ ಕೆಲ ರಾಷ್ಟ್ರಗಳಲ್ಲಿರುವುದು ಪರಿಸರದ ಮಹತ್ವ ಎಷ್ಟು ಎಂಬುದಕ್ಕೆ ಉದಾಹರಣೆ. ಹೀಗಾಗಿ ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಉತ್ತಮ ವಾತಾವರಣ ನಿರ್ಮಿಸಿ ಎಂದರು.

ಜಾಗೃತಿ ಸೇವಾ ಸಂಸ್ಥೆಯ ಅಧ್ಯಕ್ಷ ಧನರಾಜ್‌, ವಂದೇ ಮಾತರಂ ಸಂಸ್ಥೆಯ ಸೋಮಶಂಕರ್‌, ಗೋ ಪ್ಲಾಗ್‌ ಸಂಸ್ಥೆಯ ಸ್ಥಾಪಕಿ ಸುಮ,ಚಿನ್ಮಯ ವಿದ್ಯಾಲಯದ ಶಿಕ್ಷಕ ಸಿಬ್ಬಂದಿ ವರ್ಗದವರಾದ ಅನಂತಪದ್ಮನಾಭ್‌, ಡಿ.ಎನ್‌.ಸುಧಾಮಣಿ, ರವಿಶಂಕರ ಅಯ್ಯರ್‌, ಕೆ.ಎಂ. ಶ್ರೀನಿವಾಸ್‌, ವಿ.ಲೋಕೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next