ಜೇವರ್ಗಿ: ಚನ್ನೂರ ಗ್ರಾಮದಲ್ಲಿ ಎಲ್ಲೆಂದರಲ್ಲಿ ಅಸ್ವಚ್ಛತೆ ಮನೆ ಮಾಡಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಜನರಲ್ಲಿ ಕಾಡುತ್ತಿದೆ.
ಇದು ಪಟ್ಟಣದಿಂದ ಮೂರು ಕಿ.ಮೀ. ದೂರದಲ್ಲಿರುವ ಚನ್ನೂರ ಗ್ರಾಮದ ಸ್ಥಿತಿ. ಗುಡೂರ ಎಸ್.ಎ ಗ್ರಾಪಂನಲ್ಲಿ ಬರುವ ಈ ಗ್ರಾಮದಲ್ಲಿ 1500ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ನಾಲ್ವರು ಗ್ರಾಪಂ ಸದಸ್ಯರಿದ್ದಾರೆ. ಬಡ, ಹಿಂದುಳಿದ, ಕೂಲಿ ಕಾರ್ಮಿಕರು ಇಲ್ಲಿ ಹೆಚ್ಚಾಗಿ ವಾಸ ಮಾಡುತ್ತಿದ್ದು, ದಿನನಿತ್ಯ ಕೆಲಸ ಅರಸಿ ನೂರಾರು ಜನರು ಪಟ್ಟಣಕ್ಕೆ ಹೋಗುವುದು ಅನಿವಾರ್ಯವಾಗಿದೆ.
ಗ್ರಾಮದಲ್ಲಿ ಚರಂಡಿಯಲ್ಲಿ ಹಂದಿಗಳ ಓಡಾಟ, ಸೊಳ್ಳೆ ಕಾಟ ಮಾತ್ರ ತಪ್ಪುತ್ತಿಲ್ಲ. ಅಲ್ಲದೇ ಗಬ್ಬು ವಾಸನೆಯಲ್ಲಿಯೇ ಜೀವನ ಸಾಗಿಸುವ ದುಸ್ಥಿತಿ ರಾಚೋಟೇಶ್ವರ ದೇವಸ್ಥಾನದಿಂದ ಹನುಮಾನ ಮಂದಿರದ ವರೆಗಿನ ಜನರದ್ದಾಗಿದೆ. ಇದೇ ಪರಿಸ್ಥಿತಿ ಇಡಿ ಗ್ರಾಮದಲ್ಲಿದೆ. ಜಲಾಲ್ ಸಾಹೇಬರ ದರ್ಗಾ, ಹನುಮಾನ್ ದೇಗುಲಕ್ಕೆ ಬರುವ ಭಕ್ತರು ಮೂಗು ಮುಚ್ಚಿಕೊಂಡೇ ದೇವರ ದರ್ಶನ ಪಡೆಯಬೇಕು. ಶಾಲೆಗೆ ಹೋಗಬೇಕಾದ ವಿದ್ಯಾರ್ಥಿಗಳು ಗಲೀಜು ನೀರಿನ್ನು ದಾಟಿ ಹೋಗಬೇಕು. ಕುಡಿಯುವ ನೀರಿಗಾಗಿ ಯಾವುದೇ ಸೌಲಭ್ಯ ಇಲ್ಲದಿರುವುದರಿಂದ ಮಹಿಳೆಯರು ತೊಂದರೆ ಅನುಭವಿಸುವಂತಾಗಿದೆ. ಎರಡು ಕೊಳವೆ ಬಾವಿಗಳಿದ್ದು, ಅದರ ಸುತ್ತಲೂ ತಿಪ್ಪೆ ಗುಂಡಿಗಳಿರುವ ಪರಿಣಾಮ ಆ ನೀರನ್ನು ಜನರು ಬಳಸುತ್ತಿಲ್ಲ.
ರಾಚೋಟೇಶ್ವರ ದೇವಾಲಯ ಪಕ್ಕದಲ್ಲಿರುವ ಬಾವಿ ಒಂದೇ ಆಸರೆಯಾಗಿದೆ. ಅಂದಾಜು 10 ಲಕ್ಷ ರೂ. ಖರ್ಚು ಮಾಡಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಸೌಕರ್ಯ ಒದಗಿಸಿದ ಕಾರಣ ಬಳಕೆಯಾಗದೇ ಗಬ್ಬೆದ್ದು ನಾರುತ್ತಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಚುನಾವಣೆ ಬಂದಾಗ ಮಾತ್ರ ಶಾಸಕ, ಜಿಪಂ, ತಾಪಂ ಸದಸ್ಯರಿಗೆ ಈ ಗ್ರಾಮ ನೆನಪಾಗುತ್ತದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಡೆಂಘೀ, ಚಿಕೂನ್ ಗುನ್ಯಾದಂತ ರೋಗಗಳ ಭೀತಿ ಕಾಡುತ್ತಿರುವ ಸಂದರ್ಭದಲ್ಲಿ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗಿದೆ.
ಚನ್ನೂರ ಗ್ರಾಮದಲ್ಲಿ ಚರಂಡಿ ನೀರು ರಸ್ತೆಯಲ್ಲಿ ಸಂಗ್ರಹವಾಗಿ, ಗಲೀಜು ವಾತಾವರಣ ಸೃಷ್ಟಿಯಾಗಿದ್ದು, ಶೀಘ್ರದಲ್ಲಿಯೇ ಜೆಸಿಬಿ ಮೂಲಕ ಸ್ವಚ್ಛಾತಾ ಕಾರ್ಯ ಕೈಗೊಳ್ಳಲಾಗುವುದು.
-ಶ್ರೀಕಾಂತ ದೊಡ್ಮನಿ, ಪಿಡಿಒ
-ವಿಜಯಕುಮಾರ ಎಸ್.ಕಲ್ಲಾ