ನರೇಗಲ್ಲ: ರೋಣ ತಾಲೂಕಿನ ಕೊನೆಯ ಗ್ರಾಮ ನಾಗರಾಳಕ್ಕೆ ಅನೇಕ ವರ್ಷಗಳಿಂದ ಸಾರ್ವಜನಿಕ ಸ್ಮಶಾನವಿಲ್ಲದೇ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಗ್ರಾಮದಲ್ಲಿ ಯಾರದರೂ ಸತ್ತರೆ ಅವರನ್ನು ಊರ ಮುಂದಿನ ದೇಶಪಾಂಡೆ ಅವರ ಹೊಲದಲ್ಲಿ ಮಣ್ಣು ಮಾಡುವ ಪ್ರಸಂಗ ಎದುರಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಮಶಾನಕ್ಕೆ ಭೂಮಿ ಕೊಡುವುದಕ್ಕೆ ಯಾರು ಮುಂದೆ ಬರುವುದಿಲ್ಲ. ಆದರೆ, ಇಲ್ಲಿ ಭೂಮಿ ಕೊಟ್ಟರೂ ಖರೀದಿ ಮಾಡವುದಕ್ಕೆ ಅಧಿಕಾರಗಳು ಹಿಂದೇಟ್ಟು ಹಾಕುತ್ತಿದ್ದಾರೆ.
ಈ ಗ್ರಾಮವು ಕುರುಡಗಿ ಗ್ರಾಪಂ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಜನ ಸಂಖ್ಯೆಯಿದೆ. ಇಲ್ಲಿನ ಮುಸ್ಲಿಂ ಸಮಾಜದವರ ಕೇವಲ ನಾಲ್ಕು ಮನೆಗಳಿದರೂ ತಾವು ಒಗ್ಗಟ್ಟಾಗಿ ತಮ್ಮದೊಂದು ಸ್ವಂತ ಜಮೀನಿನಲ್ಲಿ ಸ್ಮಶಾನವನ್ನು (ಖಬರಸ್ತಾನ) ನಿರ್ಮಿಸಿಕೊಂಡಿದ್ದಾರೆ. ಆದರೆ, ಅವರಿಗೂ ಕೂಡ ಸರ್ಕಾರದಿಂದ ಯಾವುದೇ ಜಮೀನು ನೀಡಿಲ್ಲ.
ಆದರೆ, ಇಲ್ಲಿ ಕುರುಬ, ಅಂಬಿಗ, ಲಿಂಗಾಯತ, ಬ್ರಾಹ್ಮಣ, ಮಾದಿಗ, ವಾಲ್ಮೀಕಿ, ಕುಂಬಾರ, ಬಡಿಗೇರ ಸೇರಿದಂತೆ ಇತರೆ ಜನಾಂಗದವರಿಗೆ ಇನ್ನೂ ಕೂಡ ಸ್ಮಶಾನವಿಲ್ಲ. ಕಳೆದ 80 ವರ್ಷಗಳಿಂದಲ್ಲೂ ಗ್ರಾಮದಿಂದ ಕಿ.ಮೀ ದೂರವಿರುವ ದೇಶಪಾಂಡೆ ಅವರ ಹೊಲದಲ್ಲಿ ಅಥವಾ ಸಣ್ಣ ಹಳ್ಳದಲ್ಲಿ ಮಣ್ಣು ಅಥವಾ ಸುಡುವ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಗ್ರಾಮದಲ್ಲಿ ಅನೇಕ ವರ್ಷಗಳಿಂದ ಮುಕ್ತಿ ಧಾಮ ಇಲ್ಲದಿರುವುದರಿಂದ ಮಳೆಗಾಲದಲ್ಲಿ ಸತ್ತ ಶವಗಳನ್ನು ಮೂರ್‍ನಾಲ್ಕು ದಿನಗಳ ವರೆಗೆ ಮನೆಯಲ್ಲಿ ಇಟ್ಟು ಮಳೆ ನಿಂತ ಮೇಲೆ ಅಂತ್ಯಸಂಸ್ಕಾರ ಮಾಡುವ ಸ್ಥಿತಿಯಿದೆ. ಯಾರದರೂ ಅವಘಡ, ಅಪಘಾತದಲ್ಲಿ ಮೃತಪಟ್ಟರೆ ಗ್ರಾಮದಿಂದ 1.5 ಕಿ.ಮೀ ದೂರದಲ್ಲಿರುವ ಹಳ್ಳದಲ್ಲಿ ಸುಡುವ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲದೇ ಮಳೆ ಬಂದಾಗ ಹಳ್ಳವನ್ನು ದಾಟಿ ಹೋಗಿ ಮಣ್ಣು ಅಥವಾ ಸುಡುವ ಕಾರ್ಯಕ್ಕೆ ಯಾರು ಮುಂದೆ ಬರುವುದಿಲ್ಲ.
ಭೂಮಿ ಖರೀದಿಸದ ತಾಲೂಕು ಆಡಳಿತ: ನಾಗರಾಳ ಗ್ರಾಮದಲ್ಲಿ ಸ್ಮಶಾನ ನಿರ್ಮಿಸಿ ಎಲ್ಲ ಜನಾಂಗದವರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಗ್ರಾಮದ ದತ್ತಾತ್ರೇಯ ದೇಶಪಾಂಡೆ ಎಂಬುವವರು ಕಳೆದ ಒಂದೂವರೆ ವರ್ಷದ ಹಿಂದೆ ತಾಲೂಕಾ ಕಚೇರಿಗೆ ಹೋಗಿ ಒಪ್ಪಿಗೆ ಪತ್ರ ಸಲ್ಲಿಸಿದ್ದಾರೆ. ನಾಗರಾಳದಿಂದ ನೀರಲಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯದಲ್ಲಿರುವ 1 ಎಕರೆ 39 ಗುಂಟೆ ಜಮೀನನ್ನು ರುದ್ರಭೂಮಿಗೆ ನೀಡುತ್ತೇವೆ ಎಂದು ಅದಕ್ಕೆ ಸಂಬಂಧಿಸಿದ ಎಲ್ಲ ಕಾಗದ ಪತ್ರಗಳನ್ನು ನೀಡಿದ್ದರು. ಆದರೆ, ತಾಲೂಕು ಕಚೇರಿಯಲ್ಲಿರುವ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲ್ಲಿವರೆಗೂ ಈ ಭೂಮಿ ಮಾತ್ರ ಸರ್ಕಾರಕ್ಕೆ ಖರೀದಿ ಮಾಡಿಕೊಳ್ಳುವ ತಾಲೂಕಾ ಆಡಳಿತ ಸಂಪೂರ್ಣ ವಿಫಲವಾಗಿದೆ. ಈ ಬಗ್ಗೆ ಯಾವುದೆ ಡ ಮ್ಯುಟೇಶನ ಇರುವುದಿಲ್ಲ ಹಾಗೂ ಸರದ ಜಮೀನು ಇನಾಂ ಜಮೀನಾಗಿದ್ದು ಹಳೇ ಶರ್ತ ಆದ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ ಅಂತಾ ಪತ್ರ ರವಾನಿಸಿದ್ದಾರೆ.
ರೋಣ ತಾಲೂಕಿನ ನಾಗರಾಳ ಗ್ರಾಮದಲ್ಲಿ ಸ್ಮಶಾನ ಇಲ್ಲದಿರುವುದು ನಮ್ಮ ಗಮನಕ್ಕೆ ಬಂದಿದೆ. ಅಲ್ಲದೇ ಸದ್ಯ ಈ ಗ್ರಾಮದ ದತ್ತಾತ್ರೇಯ ದೇಶಪಾಂಡೆ ಎಂಬುವವರು 1 ಎಕರೆ 39 ಗುಂಟೆ ಜಮೀನನ್ನು ರುದ್ರಭೂಮಿಗೆ ಮಾರಾಟ ಮಾಡಲು ಒಪ್ಪಿಗೆ ನೀಡಿದ್ದಾರೆ. ಆದರೆ, ಕಾಗದಲ್ಲಿ ಸ್ವಲ್ಪ ಸಮಸ್ಯೆ ಇರುವುದರಿಂದ ಈ ಪ್ರಕರಣವನ್ನು ಕೂಡಲೇ ಪರಿಶೀಲನೆ ಕೈಗೊಂಡು ಈ ಭೂಮಿಯನ್ನು ಖರೀದಿ ಮಾಡಿ ಸಾರ್ವಜನಿಕರ ಅನುಕೂಲಕ್ಕೆ ನೀಡಲಾಗುವದು
. – ಜಿ.ಬಿ. ಜಕ್ಕನಗೌಡ್ರ, ರೋಣ ತಾಲೂಕು ತಹಶೀಲ್ದಾರ್
-ಸಿಕದಂರ ಎಂ. ಆರಿ