ಕೊಟ್ಟೂರು: ತಾಲೂಕು ಕೇಂದ್ರಕ್ಕೆ ಹೊಂದಿಕೊಂಡಿರುವ ಚಪ್ಪರದಹಳ್ಳಿಯಲ್ಲಿ ಯಾರಾದರೂ ನಿಧನರಾದರೆ ಶವ ಸಂಸ್ಕಾರದ್ದೇ ದೊಡ್ಡ ಚಿಂತೆ!
ಜಂಗಮರು, ಪಂಚಮಸಾಲಿ, ಮಡಿವಾಳರು, ವಾಲ್ಮೀಕಿ, ಮುಸ್ಲಿಂ ಸೇರಿ 750ರಿಂದ 800 ಮನೆಗಳಿವೆ. ಇರುವುದೊಂದೇ ಸ್ಮಶಾನ. ಅದು ಕೂಡ ಹಳ್ಳದ ದಂಡೆ. ಕಾಲು ಎಕರೆಗಿಂತಲೂ ಕಡಿಮೆ ಜಾಗವಿದೆ. ಹೂಳಿದ ಜಾಗದಲ್ಲಿಯೇ ಹೂಳಬೇಕು. ಹೊಸದಾಗಿ ಶವಸಂಸ್ಕಾರಕ್ಕೆ ಜಾಗವಿಲ್ಲ. ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ ತಗ್ಗು ಗುಂಡಿಗಳಲ್ಲದೆ, ಮುಳ್ಳುಗಿಡಗಂಟೆಗಳು ದಟ್ಟವಾಗಿ ಬೆಳೆದಿವೆ. ಇದರಿಂದಾಗಿ ಶವವನ್ನು ಹೊತ್ತು ಸಾಗಲು, ಸಂಸ್ಕಾರಕ್ಕೆ ಕಷ್ಟಪಡಬೇಕು. ಇದು ನಿನ್ನೆ ಮೊನ್ನೆಯ ಸಮಸ್ಯೆಯಲ್ಲ. ಹಲವಾರು ದಶಕಗಳಿಂದ ಇದೇ ಸ್ಥಿತಿ ಇದೆ. ಇದರಿಂದ ಗ್ರಾಮಸ್ಥರು ರೋಸಿಹೋಗಿದ್ದಾರೆ. ಇತ್ತೀಚಿನ ದಿನಗಳಲಂತೂ ತಮ್ಮ ಹೊಲಗಳಲ್ಲಿಯೇ ಹೂಳುತ್ತಿದ್ದಾರೆ.
ಗ್ರಾಮದ ಸುತ್ತಮುತ್ತಲಿರುವ ಎಲ್ಲ ಜಮೀನಿಗಳುಖಾಸಗಿಯವರ ಕೈಗಳಿಗೆ ಸೇರಿ ಸೈಟ್‌ಗಳಾಗಿ ಮಾರ್ಪಟ್ಟಿವೆ. ಎಲ್ಲಿಯೂ ಸರ್ಕಾರಿ ಭೂಮಿ ಇಲ್ಲ. ಸ್ಮಶಾನಕ್ಕಾಗಿ ಭೂಮಿ ಖರೀದಿಸಲು ಸಾಧ್ಯವಾಗದ ಮಾತು. ಆದ್ದರಿಂದ ಇನ್ಮುಂದೆ ಯಾರಾದರೂ ನಿಧನರಾದರೆ ಅವರವರ ಕಣ, ಹೊಲದಲ್ಲಿಯೇ ಸಮಾಧಿ ಮಾಡಬೇಕಿದೆ. ಆಳುವ ದೊರೆಗಳಲ್ಲಿ ಹಾಗೂ ಅಧಿ ಕಾರಿಗಳಲ್ಲಿ ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಇತ್ತೀಚಿಗೆ ನಿಧನರಾದ ವ್ಯಕ್ತಿಯೊಬ್ಬರನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗದೆ ಮೃತರ ಹೊಲದಲ್ಲಿಯೇ ಮಣ್ಣು ಮಾಡಬೇಕಾದ ಸ್ಥಿತಿ ಎದುರಾಯಿತು. ಹೀಗಾದರೆ ಆ ಹೊಲದಲ್ಲಿ ಬೆಳೆ ಬೆಳೆಯಲು ಸಾಧ್ಯವೇ ಎಂದು ಗ್ರಾಮದ ಬೆಟ್ಟಪ್ಪನವರ ಅಜ್ಜಪ್ಪ, ಶಿವನಾಗಪ್ಪ, ನಿಂಗಪ್ಪ, ಕೊಟ್ರೇಶಪ್ಪ, ಮಲ್ಲೇಶಪ್ಪ ಅಳಲು ತೋಡಿಕೊಂಡರು.
ನಮ್ಮೂರಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದು. ಶವ ಸಂಸ್ಕಾರ ಮಾಡುವುದೇ ಕಷ್ಟವಾಗಿದೆ. ಇರುವ ಸ್ಮಶಾನಕ್ಕೆ ಹೋಗಲು ಸಾಧ್ಯವಾಗದು. ಸ್ಮಶಾನಕ್ಕೆಊರಿನ ಸುತ್ತಮುತ್ತ ಎಲ್ಲಿಯೂ ಸರ್ಕಾರಿ ಭೂಮಿ ಇಲ್ಲ. ನಮ್ಮೂರಿಗೆ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಿ ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ.
-ಕೆ. ಕೊಟ್ರೇಶ, ಮಾಜಿ ತಾಪಂ ಸದಸ್ಯರು, ಚಪ್ಪರದಹಳ್ಳಿ
ಶವ ಸಂಸ್ಕಾರ ಮಾಡಲು ಸರ್ಕಾರಿ ಜಾಗ ಕಾಯ್ದಿರಿಸಲಾಗಿದೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿಪಿಡಿಒರಿಗೆ ಪೂರ್ಣ ಮಾಹಿತಿ ನೀಡಲಾಗಿದೆ. ಕಂದಾಯ ಇಲಾಖೆಗೆ ಪಹಣಿ ಕೊಟ್ಟಿದ್ದೇವೆ. ಅವರು ಸರ್ಕಾರಿ ಜಾಗ ಗುರುತಿಸಿ ಶವಸಂಸ್ಕಾರಕ್ಕೆ ಅನುಕೂಲ ಮಾಡಿಕೊಡುತ್ತಾರೆ.
-ಜಿ. ಅನಿಲ್ ಕುಮಾರ್, ತಹಶೀಲ್ದಾರ್
ರವಿಕುಮಾರ್ ಎಂ.